Belagavi News In Kannada | News Belgaum

ಕರ್ನಾಟಕ ರತ್ನ ಡಾ. ರಾಜಕುಮಾರ್ ಜನ್ಮ ದಿನಾಚರಣೆ

ಡಾ. ರಾಜಕುಮಾರ್ ಸರಳತೆ ಎಲ್ಲರಿಗೂ ಆದರ್ಶಪ್ರಾಯ: ಗುರುನಾಥ ಕಡಬೂರ 

ಬೆಳಗಾವಿ : ಕನ್ನಡ ಚಲನಚಿತ್ರಗಳಲ್ಲಿ ಉತ್ತಮ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಇಡೀ ಭಾರತಕ್ಕೆ ಕೀರ್ತಿ ತಂದುಕೊಟ್ಟ ಹಿರಿಮೆ ಕರ್ನಾಟಕ ರತ್ನ, ಕನ್ನಡದ ಕಣ್ಮಣಿ ಡಾ. ರಾಜಕುಮಾರ ಅವರಿಗೆ ಸಲ್ಲುತ್ತದೆ. ಅವರ ಸರಳತೆಯ ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಅವರು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ವಾರ್ತಾ ಭವನದಲ್ಲಿ ಸೋಮವಾರ (ಏ.24) ನಡೆದ ಡಾ. ರಾಜಕುಮಾರ ಜನ್ಮ ದಿನಾಚರಣೆ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಡಾ. ರಾಜಕುಮಾರ ಅವರ ತಂದೆ ಮೂಲತಃ ರಂಗಭೂಮಿ ಕಲಾವಿದರಾಗಿದ್ದು, ತಂದೆಯಿಂದ ಪ್ರೇರಿತರಾದ ಅವರು ಅನೇಕ ನಾಟಕಗಳಲ್ಲಿ ನಟಿಸಿ ನಂತರ ಬೇಡರ ಕಣ್ಣಪ್ಪ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರಾಜಕುಮಾರ್ ಅವರು ವಿಭಿನ್ನ ಪಾತ್ರಗಳ ಮೂಲಕ ಅನೇಕ ಪಾತ್ರಗಳನ್ನು ನಿಭಾಯಿಸಿದ್ದಾರೆ ಎಂದು ಗುಂಜಿ ಗ್ರಾಮದ ಕನ್ನಡ ಪ್ರೌಡಶಾಲಾ ಶಿಕ್ಷಕರಾದ ಅರ್ಜುನ್ ಕಾಮಣ್ಣವರ ಅವರು ತಿಳಿಸಿದರು.
ರಾಜಕುಮಾರ ಮಾಡಿದಂತಹ ಅನೇಕ ಪಾತ್ರಗಳಿಗೆ ಮೆಚ್ಚಿ, ಅಭಿಮಾನಿ ಬಳಗ ವರನಟ ಎಂದು ಅವರನ್ನು ಕರೆಯುತ್ತಾರೆ. ಎಷ್ಟೇ ತಲೆಮಾರು ಉರುಳಿದರೂ ಕನ್ನಡ ಚಿತ್ರ ರಂಗದಲ್ಲಿ ಅವರು ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ.
ಕೇವಲ ನಟರಾಗಿ ಮಾತ್ರವಲ್ಲದೆ ಅನೇಕ ಚಿತ್ರಗಳಗೆ ಧ್ವನಿ ನೀಡುವುದರ ಮೂಲಕ ಜನಪ್ರಿಯ ಹಾಡುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಡಾ. ರಾಜಕುಮಾರ ಅವರು ನಟನೆ ಹಾಗೂ ಗಾಯನದ ಮೂಲಕ ಕನ್ನಡ ಜನರ ಮನದಲ್ಲಿ ಅಜರಾಮರವಾಗಿ ಉಳಿದಿರುವ ನಟ ಏಕೈಕ ನಟರಾಗಿದ್ದಾರೆ.
ಕನ್ನಡ ಭಾಷೆಯ ಸರಳ ಸಜ್ಜನಿಕೆಯ ನಟ ರಾಜಕುಮಾರ ಅವರು ತಮ್ಮ ಅಭಿನಯದಿಂದ ಜನಸಾಮಾನ್ಯರನ್ನು ಸೆಳೆದಿದ್ದರು. ಕೇವಲ ಚಿತ್ರರಂಗ ಮಾತ್ರವಲ್ಲದೇ ವಯಕ್ತಿಕ ಜೀವನದಲ್ಲಿ ಕೂಡ ಅವರು ಯಾವುದೇ ಕಳಂಕ ಇಲ್ಲದ ಶ್ರೇಷ್ಠ ನಟ ಎಂದು ಕಾಮಣ್ಣವರ ತಿಳಿಸಿದರು.
ವಾರ್ತಾ ಇಲಾಖೆಯ ಸಿಬ್ಬಂದಿಗಳಾದ, ಅನಂತ್ ಪಪ್ಪು, ಎಂ.ಎಲ್ ಜಮಾದಾರ, ಮತ್ತು ಸಿಟಿಇ ಉಪನ್ಯಾಸಕರಾದ ಶ್ರೀಮತಿ ಝಡ್.ಜಿ ಸಯ್ಯದ್, ಗಜಾನನ ಹಳೆಮನಿ, ಸತೀಶ್ ಘೋರ್ಪಡೆ, ಸಣ್ಣ‌ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎಂ ಕಂಗ್ರಾಳಕರ್, ಶಿಕ್ಷಕರಾದ ಜ್ಞಾನೇಶ್ವರ ಮೀರಾಶಿ, ಅರುಣ ನೇಸರಗಿ, ಪರುಶರಾಮ ಮೂಕನವರ, ಪ್ರಮೋದ ಗಡಕರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು./////