Belagavi News In Kannada | News Belgaum

ಜನರ ಹಿತ ಕಾಯುವ ಕಾಂಗ್ರೆಸ್ ಪಕ್ಷವನ್ನ ಅಧಿಕಾರಿ ತನ್ನಿ: ಮಾಜಿ ಸಿಎಂ ಸಿದ್ದರಾಮಯ್ಯ

ಹಾರೂಗೇರಿ: ಪ್ರಧಾನಿ ಮೋದಿ ಅವರು ಅಚ್ಚೆ ದಿನ್ ಬರುತ್ತದೆ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದು 9 ವರ್ಷಗಳು ಕಳೆದರೂ ಇನ್ನು ದೇಶ ಹಾಗೂ ರಾಜ್ಯದ ಜನರಿಗೆ ಅಚ್ಚೆ ದಿನ ಸಿಕ್ಕಿಲ್ಲ. ರಾಜ್ಯದಲ್ಲೂ  ಭ್ರಷ್ಟಾಚಾರ ತುಂಬಿ ಆಡಳಿತ ನಡೆಸಿ, ರಾಜ್ಯಕ್ಕೆ ಕೆಟ್ಟು ಹೆಸರು ತಂದಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮತದಾರರು ಮುಂದಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಗಸ್ತಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಪಿ.ರಾಜೀವ್ ಲಂಬಾಣಿ ಸಮುದಾಯದವರು. ಆದರೆ ಬಿಜೆಪಿ ಸರ್ಕಾರದಲ್ಲಿದ್ದ ಪಿ. ರಾಜೀವ್ ಅವರು ಲಂಬಾಣಿ ಸಮುದಾಯಕ್ಕೆ ಹಾಗೂ ಕುಡಚಿ ಮತಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು,  ಪಿ. ರಾಜೀವ್ ದೊಡ್ಡ ಸುಳ್ಳುಗಾರ. ಅವನು ಸತ್ಯ ಹೇಳುವುದಕ್ಕಿಂತ ಸುಳ್ಳುಗಳನ್ನೆ ಜಾಸ್ತಿ ಹೇಳುತ್ತಾನೆ. ಅದ್ದರಿಂದ ಕುಡಚಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ್ ಅವರನ್ನು ಗೆಲ್ಲಿಸಿ, ಪಿ. ರಾಜೀವ್ ಅವರನ್ನು ಭಾರೀ ಅಂತರದಿಂದ ಸೋಲಿಸಬೇಕೆಂದು ಎಂದು ಹೇಳಿದರು.
40 % ಕಮಿಷನ್ ಪಡೆಯುವುದೇ ಬಿಜೆಪಿ ಕಾಯಕ: ರಾಜ್ಯದಲ್ಲಿ 40 % ಕಮಿಷನ್ ಪಡೆಯುವುದೇ ಬಿಜೆಪಿಯವರ ಕಾಯಕವಾಗಿದೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಕಮಿಷನ್ ಕಾಟದಿಂದ ಆತ್ಮಹತ್ಯೆ ಮಾಡಿಕೊಂಡರು. ಈಶ್ವರಪ್ಪ ಅವರ ಹೆಸರಿನಲ್ಲಿ ಸಂತೋಷ ಪಾಟೀಲ್ ಡೆತ್ ನೋಟ್ ಬರೆದು ಸತ್ತಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ವಿಧಾನಸಭೆಯಲ್ಲಿ ನಿಮ್ಮ ಕಡೆ ಏನು ದಾಖಲೆ ಇದೆ ಎಂದು ಕೇಳುತ್ತಾರೆ. ಇಂತಹ ಭ್ರಷ್ಟ ಬಿಜೆಪಿಯವರನ್ನು ಮನೆಗೆ ಕಳುಹಿಸಬೇಕೆಂದು ತಿಳಿಸಿದರು.

ಕಾಂಗ್ರೆಸ್‌ ಅಧಿಕಾರಿಕ್ಕೆ ಬಂದರೆ ನಾಲ್ಕು ಯೋಜನೆ ಜಾರಿ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆ, ಅನ್ನಭ್ಯಾಗ್ಯ ಯೋಜನೆಯಡಿ ೧೦ ಕೆಜಿ  ಅಕ್ಕಿ,   ಗೃಹಲಕ್ಷ್ಮಿ ಕುಟುಂಬದ ಪ್ರತಿ ಮಹಿಳೆಗೆ ಪ್ರತಿ ತಿಂಗಳು ಎರಡು ಸಾವಿರ ರೂ.,ಪದವೀಧರರಿಗೆ ಪ್ರತಿ ತಿಂಗಳು 3000 ನಿರುದ್ಯೋಗ ಭತ್ಯೆಗಳನ್ನು ಉಚಿತವಾಗಿ ನೀಡಲಾಗುವುದು. ಸದೃಢ ಹಾಗೂ ಸುರಕ್ಷಿತ ಕುಟುಂಬಕ್ಕಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತರುವಂತೆ ವಿನಂತಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಭೂ ಹಗರಣ, 40 %ಕಮೀಷನ್‌, ಕುರ್ಚಿಗಾಗಿ  ಕಚ್ಚಾಟ ನಡೆಸಿತೇ ಹೊರತು, ಅಭಿವೃದ್ಧಿ ಕುಂಠಿತಗೊಳಿಸಿತು. ಈ ನಿಟ್ಟಿನಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೇ ಎಂದು ಪ್ರಶ್ನಿಸಿದ ಅವರು, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳಿಂದ ಜನ ಬೇಸತ್ತಿದ್ದು, ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ರಾಜ್ಯದಿಂದ ಕಿತ್ತೆಸೆಯಬೇಕು.  ಕುಡಚಿ ಮತಕ್ಷೇತ್ರದಲ್ಲಿ ಸದಾ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಮಹೇಂದ್ರ ತಮ್ಮಣ್ಣವರ್ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಕಳೆದು ಎರಡು ದಿನಗಳಿಂದ ನಾನು ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ ಜತೆ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಅಪಾರ ಸಂಖ್ಯೆಯ ಜನ ಸೇರುತ್ತಿದ್ದಾರೆ.  ಈ ಅಪಾರ ಸಂಖ್ಯೆಯ ಜನ ಸಾಗರ ನೋಡಿದರೆ ಜಿಲ್ಲೆಯ 15 ರಿಂದ 16  ಕ್ಷೇತ್ರ ಸೇರಿ ಕುಡಚಿ ಮತಕ್ಷೇತ್ರದಲ್ಲಿ ಮಹೇಂದ್ರ ತಮ್ಮಣ್ಣವರ ಗೆಲುವು ಸಾಧಿಸುವುದು ನಿಚ್ಛಿತ ಎಂದು ಹೇಳಿದರು.

ಅಥಣಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಮಾತನಾಡಿ, ಇಷ್ಟು ದಿನ ನಿಮ್ಮ ಕ್ಷೇತ್ರದಲ್ಲಿ ಪಿ. ರಾಜೀವ್ ನಾಟಕ ಮಾಡಿದ್ದು ಸಾಕು. ನಿ ಎಲ್ಲಿಂದ ಬಂದಿ ಅಲ್ಲಿಗೆ ಹೋಗುವ ಸ್ಥಿತಿ ಬೇಗ ಬಂದಿದೆ. ಕುಡಚಿ, ಕಾಗವಾಡ ಎರಡೂ ಮತಕ್ಷೇತ್ರದ ಅಭ್ಯರ್ಥಿಗಳನ್ನು ನನ್ನ ಜತೆ ವಿಧಾನಸಭೆಗೆ ತರುವುದು ನನ್ನ ಜವಾಬ್ದಾರಿ ಎಂದು ವೇದಿಕೆ ಮೇಲೆ ಸಿದ್ದರಾಮಯ್ಯರವರಿಗೆ ಮಾತು ಕೊಟ್ಟರು.
ಮಾಜಿ ಶಾಸಕ ಎಸ್.ಬಿ. ಘಾಟಗೆ ಮಾತನಾಡಿ, ಕುಡಚಿ ಕ್ಷೇತ್ರದಲ್ಲಿ ಮಹೇಂದ್ರ ತಮ್ಮಣ್ಣವರ್ ಅವರನ್ನು ಗೆಲ್ಲಿಸುವುದು ಎಷ್ಟೋ ಮುಖ್ಯವೋ ಅಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಸಿಎಂ ಮಾಡುವುದು ಅಷ್ಟೇ ಮುಖ್ಯವಾಗಿದೆ. ಸಿದ್ದರಾಮಯ್ಯ ಸೇವೆ ಈ ರಾಜ್ಯದಲ್ಲಿ ಮತ್ತೊಮ್ಮೆ ಅವಶ್ಯಕತೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂಎಲ್ ಸಿ ಪ್ರಕಾಶ ರಾಠೋಡ,  ಮಾಜಿ ಸಂಸದ ಅಮರಸಿಂಗ್ ಪಾಟೀಲ್, ಪ್ರದೀಪ್ ಕಣಗಲಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ,  ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಿರ್ಮಲಾ ಪಾಟೀಲ್,  ನೂರಾರು ಮುಂಚೂಣಿ ಘಟಕದ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.//////