Belagavi News In Kannada | News Belgaum

ಪ್ರವಾಹ ಬಂದಾಗ ಬಾರದ ಮೋದಿ ಈಗ ವೋಟಿಗೋಸ್ಕರ ರಾಜ್ಯಕ್ಕೆ ಬರುತ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ನಿಪ್ಪಾಣಿ: ಪ್ರವಾಹ ಬಂದಾಗ ಬಾರದ ಮೋದಿ ಈಗ ಚುನಾವಣೆ ಬಂದಾಗ  ವೋಟಿಗೋಸ್ಕರ ರಾಜ್ಯಕ್ಕೆ ಬರುತ್ತಿದ್ದಾರೆ. ಅಚ್ಚೆ ದಿನ್ ಬರುತ್ತದೆ ಎಂದು ಹೇಳಿ ಅಗತ್ಯ ವಸ್ತುಗಳ ಬೆಲೆ ಏರಿಸಿ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದಾರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಭಾಗದಲ್ಲಿ ಮರಾಠಿ ಭಾಷೆಯನ್ನು ಜಾಸ್ತಿ ಬಳಕೆ ಮಾಡುತ್ತೀರಿ ಆದರೆ ನನಗೆ ಮರಾಠಿ ಭಾಷೆ ಮಾತನಾಡಲು ಬರಲ್ಲ. ಹೀಗಾಗಿ ಕನ್ನಡದಲ್ಲೇ ಮಾತನಾಡುತ್ತೇನೆ ಎಂದ ಅವರು, ಕಳೆದ ಭಾರೀ ಬಿಜೆಪಿಗೆ ಬಹುಮತ ಇರಲಿಲ್ಲ. ಆದರೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದರು. ಶಾಸಕರ ಖರೀದಿಗೆ ಇವರಿಗೆ ಹಣ ಎಲ್ಲಿಂದ ಬಂತು. ಇದನ್ನೆಲ್ಲ ನೀವು ಸೂಕ್ಷ್ಮ ವಾಗಿ ಗಮನಿಸಬೇಕು ಎಂದರು.

 

ಬಿಜೆಪಿ ಸರ್ಕಾರದ 40 % ಕಮಿಷನ್ ನಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ.  ಬಡವರಿಗೆ ಉಪಯೋಗ ಆಗುವ ಇಂದಿರಾ ಕ್ಯಾಂಟೀನ್ ಮುಚ್ಚಿದರು. ಈ ಬಿಜೆಪಿಯವರು ಬಂಡವಾಳ ಶಾಹಿಗಳ ಪರ ಇದ್ದಾರೆ. ಇವರಿಗೆ ಬಡವರ, ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ. ಆದರೆ ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

 

ನಾನು ಮುಖ್ಯಮಂತ್ರಿ ಇದ್ದಾಗ ಎಲ್ಲ ಕೇತ್ರಗಳಿಗೆ ಮೂರು, ನಾಲ್ಕು ಸಾವಿರ ಕೋಟಿ ರೂ. ಅನುದಾನ ನೀಡಿದ್ದೇನೆ. ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಿನಿ. ನಾನು ಸಿಎಂ ಇದ್ದಾ 5 ಲಕ್ಷ ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದೇನೆ. ಆದರೆ ಬಿಜೆಪಿಯವರು ಒಂದೇ ಒಂದು ಮನೆ ರಾಜ್ಯದ ಜನತೆಗೆ ನೀಡಲಿಲ್ಲ. ಇಂತಹ ಜನರ ಹಿತಾಸಕ್ತಿ ಇಲ್ಲದ ಸರ್ಕಾರವನ್ನು ಕಿತ್ತೆಸೆಯಬೇಕೆಂದು ಕರೆ ನೀಡಿದ ಅವರು,

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಕಾಕಾಸಾಹೇಬ್ ಪಾಟೀಲ್ ಅವರು ಅಧಿಕಾರ ಇದ್ದಾಗ ನಿಪಾಣಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದ  ಈ ಭಾರೀ ಕಾಕಾಸಾಹೇಬ್ ಪಾಟೀಲ್ ಅವರನ್ನು ಗೆಲ್ಲಿಸಿ, ಭ್ರಷ್ಟ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕೆಂದು ಕರೆ ನೀಡಿದರು.

ಪ್ರಕಾಶ ಹುಕ್ಕೇರಿ ಮಾತನಾಡಿ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರು ಮೂರು ವರ್ಷಗಳ ಅವಧಿಯಲ್ಲಿ ಯಾವುದೇ ರೀತಿ ಕೆಲಸ ಮಾಡಿಲ್ಲದ್ದರಿಂದ  ಹೊರ ರಾಜ್ಯದ ಮಂತ್ರಿಗಳನ್ನು ಕರ್ನಾಟಕದಲ್ಲಿ ತಂದು ಪ್ರಚಾರ ಮಾಡುವ ಸ್ಥಿತಿ ಇವತ್ತು ಬಿಜೆಪಿಗೆ  ಬಂದಿದೆ ಎಂದು ವ್ಯಂಗವಾಡಿದರು.
ನಿಪ್ಪಾಣಿ ಮತಕ್ಷೇತ್ರದ13 ಹಳ್ಳಿಯಲ್ಲಿ ನಾನು ಕೆಲಸ ಮಾಡಿದ್ದೇನೆ. ಕಾರಣ ಕಾಕಾಸಾಹೇಬ್ ಪಾಟೀಲ್ ಅವರಿಗೆ ಆ ಹಳ್ಳಿಗಳಲ್ಲಿ ಹೆಚ್ಚಿನ ಲೀಡ್ ತರುವುದು ನನ್ನ ಜವಾಬ್ದಾರಿ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮಾಜಿ ಸಚಿವ ವೀರಕುಮಾರ ಪಾಟೀಲ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಎಐಸಿಸಿ ವೀಕ್ಷಕ, ಯುವ ನಾಯಕ ರಾಹುಲ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮಣ್ಣವರ್,  ಸೇರಿದಂತೆ ಜಿಲ್ಲೆಯ ಪ್ರಮುಖ ಮುಖಂಡರು ಹಾಗೂ ಅನೇಕ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.///////