Belagavi News In Kannada | News Belgaum

ಬಿಜೆಪಿ ಪಕ್ಷ ಸುಳ್ಳಿನ ಫ್ಯಾಕ್ಟರಿ:ಸಿದ್ದರಾಮಯ್ಯ ಕಿಡಿ

ಬಿಜೆಪಿ ಪಕ್ಷ ಸುಳ್ಳಿನ ಫ್ಯಾಕ್ಟರಿ:ಸಿದ್ದರಾಮಯ್ಯ ಕಿಡಿ
ಗುರುವಾರ ಪಟ್ಟಣದ ಟಿಎಪಿಸಿಎಂಎಸ್ ಮೈದಾನದಲ್ಲಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಹಂಪಯ್ಯ ನಾಯಕ ಪರವಾಗಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಬಿಜೆಪಿಯವರು ಹಿಟ್ಲರ್, ಮುಸೋಲನಿಯಿಂದ ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಅಚ್ಚೇ ದಿನ್ ಬಗ್ಗೆ ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ರಸಗೊಬ್ಬರ ಸೇರಿದಂತೆ ಇತರ ದಿನಬಳಕೆ ವಸ್ತುಗಳ ಬೆಲೆ ಏರಿಸುವ ಮೂಲಕ ದೇಶದ ಜನತೆಗೆ ತೊಂದರೆ ನೀಡುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡದೆ ಅಂಬಾನಿ, ಅದಾನಿಯಂತಹ ಬಂಡಾವಳಶಾಹಿಗಳ ₹12ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಈ ಸರ್ಕಾರಕ್ಕೆ ದೇಶದ ಜನತೆಯ ಹಿತಾಸಕ್ತಿ ಕಾಪಾಡುವ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ದೂರಿದರು.

‘ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿದೆ. ವಿಧಾನಸೌಧದ ಪ್ರತಿ ಗೋಡೆಗಳಲ್ಲಿ ಲಂಚ, ಲಂಚ ಎನ್ನುವ ಶಬ್ದ ಕೇಳುವಂತಾಗಿದೆ. ನಮ್ಮ ಆಡಳಿತದಲ್ಲಿ ನುಡಿದಂತೆ ನಡೆದಿದ್ದೇವೆ. ನಾವು ಈ ಹಿಂದೆ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ 165 ಭರವಸೆಗಳ ಪೈಕಿ 158 ಈಡೇರಿಸಿದ್ದೆವು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಮನಸ್ವಿನಿಯಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೆವು. ಅನ್ನಭಾಗ್ಯ ಯೋಜನೆಯ ಮಹತ್ವ ಕೋವಿಡ್ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ತಿಳಿಯುವಂತಾಯಿತು. ಆದರೆ, ರಾಜ್ಯ ಸರ್ಕಾರ 7ಕೆಜಿ ಉಚಿತ ಅಕ್ಕಿಯನ್ನು 4ಕೆಜಿಗೆ ಇಳಿಸುವ ಮೂಲಕ ಬಡವರ ವಿರೋಧಿ ಧೋರಣೆ ಅನುಸರಿಸಿದೆ. ಹಿಂದಿನ ಕಾಂಗ್ರೆಸ್ ಹಾಗೂ ಈಗಿನ ಬಿಜೆಪಿ ಸರ್ಕಾರಗಳ ಸಾಧನೆಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಹಿರಂಗ ಚರ್ಚೆಗೆ ಬರಲಿ. ಚರ್ಚೆಗೆ ನಾವು ಸಿದ್ಧ’ ಎಂದು ಸವಾಲು ಹಾಕಿದರು..

‘ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ, ಎರಡು ಬಾರಿ ಲೋಕಸಭೆ ಟಿಕೆಟ್, ಒಂದು ಬಾರಿ ವಿಧಾನಸಭೆ ಟಿಕೆಟ್ ಪಡೆದಿದ್ದ ಬಿ.ವಿ.ನಾಯಕ ಇಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಎಸಗಿದ್ದಾನೆ. ಇಂತಹ ಪಕ್ಷ ದ್ರೋಹಿಯನ್ನು ಸೋಲಿಸುವ ಮೂಲಕ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಬೇಕು. ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ ಜಿ.ಹಂಪಯ್ಯ ನಾಯಕ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ’ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಮಾಜಿ ಸಚಿವೆ ಉಮಾಶ್ರೀ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಅಭ್ಯರ್ಥಿ ಜಿ.ಹಂಪಯ್ಯ ನಾಯಕ ಮತ್ತಿತರ ಮುಖಂಡರು ಮಾತನಾಡಿದರು.

ಮುಖಂಡರಾದ ಎಂ.ಈರಣ್ಣ, ನಾಗಣ್ಣ ಸಾಹುಕಾರ ಬಾಗಲವಾಡ ಹಾಗೂ ಬಸವರಾಜ ನಾಡಗೌಡ ಪೋತ್ನಾಳ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಸಂಯೋಜಕ ಎ.ಬಾಲಸ್ವಾಮಿ ಕೊಡ್ಲಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ರಾಜಾ ವಸಂತನಾಯಕ, ಶರಣಯ್ಯ ಕೆ.ಗುಡದಿನ್ನಿ, ಸೈಯದ್ ಖಾಲೀದ್ ಖಾದ್ರಿ, ಬಿ.ಕೆ.ಅಮರೇಶಪ್ಪ, ಜಿ.ಗಂಗಣ್ಣ, ಡಾ.ಯಂಕನಗೌಡ ಬೊಮ್ಮನಾಳ, ಚುಕ್ಕಿ ಸೂಗಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗುಂಡಮ್ಮ ಮೇಟಿ, ಕಾಂಗೆಸ್ ಪಕ್ಷದ ಇತರ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಇದ್ದರು
ಮಾನ್ವಿ: ಬಿಜೆಪಿ ಪಕ್ಷ ಸುಳ್ಳಿನ ಫ್ಯಾಕ್ಟರಿ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಆ ಪಕ್ಷದ ಮುಖಂಡರು ನಿರಂತರವಾಗಿ ಸುಳ್ಳುಗಳನ್ನು ಹೇಳುವ ಮೂಲಕ ಜನರಿಗೆ ವಂಚಿಸುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.