Belagavi News In Kannada | News Belgaum

ಅಂತಿಮ ಅಖಾಡ ಸಿದ್ದ: ರಂಗೇರಿದ ಚುನಾವಣಾ ಕಣ

ಎಚ್. ಮಾರುತಿ

 

ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಗಡುವು ಮುಗಿದಿದ್ದು, ಯಾರು ಯಾರ ವಿರುದ್ಧ ಕದನಕ್ಕೆ ಇಳಿದಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಕಣ್ಣ ಮುಂದಿದೆ. ಮೇ 10 ರಂದು ನಡೆಯಲಿರುವ ಮತದಾನದ ಅಖಾಡಕ್ಕೆ ವೇದಿಕೆ ಸಜ್ಜಾಗಿದೆ. ಆಡಳಿತಾರೂಢ ಬಿಜೆಪಿ ಆಪರೇಶನ್ ಕಮಲದ ನೆರವು ಇಲ್ಲದೆ ಸ್ವಂತ ಬಲದ ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ಮಾಡುತ್ತಿದೆ. ಮತ್ತೆ ಅಧಿಕಾರದ ಗದ್ದುಗೆ ಕಾಂಗ್ರೆಸ್ ಶತಾಯ ಗತಾಯ ಹೋರಾಟದಲ್ಲಿ ತೊಡಗಿದೆ. ಇನ್ನು ಜೆಡಿಎಸ್ ಅತಂತ್ರ ವಿಧಾನಸಭೆಯ ನಿರೀಕ್ಷೆಯಿದ್ದು, ರಾಜಕೀಯ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹವಣಿಸುತ್ತಿದೆ. ಸರಾಸರಿ 5.21 ಕೋಟಿ ಮತದಾರರು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸುತ್ತಾರೆ. ಯಾರ ಮನಸ್ಸಿನಲ್ಲಿ ಯಾವ ಪಕ್ಷದ ಗುರುತು ಇದೆ ಎಂಬ ಗುಟ್ಟನ್ನು ಮತದಾರ ಜತನವಾಗಿ ಕಾಪಾಡಿಕೊಂಡು ಬಂದಿದ್ದಾನೆ.

*ಎಲ್ಲಿ ಎಷ್ಟು ಅಭ್ಯರ್ಥಿಗಳು* ?
224 ಕ್ಷೇತ್ರಗಳಲ್ಲಿ 2,613 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇವರಲ್ಲಿ ಮಹಿಳೆಯರ ಸಂಖ್ಯೆ ಕೇವಲ 185 ಮಾತ್ರ ಎನ್ನುವುದು ವಿಪರ್ಯಾಸ!.
ಆಮ್ ಆದ್ಮಿ ಪಕ್ಷ (209), ಬಿ ಎಸ್ ಪಿ(133), ಜೆಡಿ ಯು (8) ಅಭ್ಯರ್ಥಿಗಳನ್ನು ಹಾಕಿದೆ.
2018 ರಲ್ಲಿ 2655 ಮತ್ತು 2016 ರಲ್ಲಿ 2948 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.
ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. 2018ರಲ್ಲಿ 185 ಮತ್ತು 2013ರಲ್ಲಿ 170 ಮಂದಿ ಕಣದಲ್ಲಿದ್ದರು.
ಅತಿ ಹೆಚ್ಚು ಅಂದರೆ 24ಅಭ್ಯರ್ಥಿಗಳು ಬಳ್ಳಾರಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರೆ, ಹೊಸಕೋಟೆ ಮತ್ತು ಆನೇಕಲ್ ನಲ್ಲಿ ತಲಾ 23 ಮಂದಿ ಕಣದಲ್ಲಿ ಉಳಿದಿದ್ದಾರೆ. ಅತಿ ಕಡಿಮೆ ಅಂದರೆ ಕೇವಲ ತಲಾ ಐದು ಅಭ್ಯರ್ಥಿಗಳು ಮಂಗಳೂರು, ಬಂಟ್ವಾಳ್, ತೀರ್ಥ ಹಳ್ಳಿ, ಕುಂದಾಪುರ, ಕಾಪು, ಯಮಕನಮರಡಿ ಮತ್ತು ದೇವದುರ್ಗ ಕ್ಷೇತ್ರದಲ್ಲಿ ಉಳಿದಿದ್ದಾರೆ.
ರಾಜರಾಜೇಶ್ವರಿ ನಗರ, ಜಯನಗರ ಮತ್ತು ಕೆಜಿಎಫ್ ಕ್ಷೇತ್ರಗಳಲ್ಲಿ ತಲಾ 6ಮಹಿಳಾ ಅಭ್ಯರ್ಥಿಗಳು ನಿಪ್ಪಾಣಿ, ಹರಪನಹಳ್ಳಿ, ಮಾಲೂರು, ಮತ್ತು ಚಿಕ್ಕಪೇಟೆ ಕ್ಷೇತ್ರದಲ್ಲಿ ತಲಾ 5 ಮಹಿಳೆಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

*ಮೂರು ದಶಕಗಳಿಂದ ಮರುಕಳಿಸಿದ ಇತಿಹಾಸ*:
ರಾಜ್ಯದ ಚುನಾವಣಾ ಇತಿಹಾಸವನ್ನು ಗಮನಿಸಿದರೆ 1985ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಆಡಳಿತಾರೂಢ ಜನತಾ ಪಕ್ಷ ಅಧಿಕಾರಕ್ಕೆ ಬಂದಿದ್ದನ್ನು ಹೊರತುಪಡಿಸಿದರೆ ಇದುವರೆಗೂ ಯಾವುದೇ ಪಕ್ಷ ಮರಳಿ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ. ನಂತರ ರಾಜ್ಯವನ್ನು ಆಳಿದ ಎಲ್ಲ ರಾಜಕೀಯ ಪಕ್ಷಗಳು ಆಡಳಿತ ವಿರೋಧಿ ಅಲೆಯಿಂದಾಗಿ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸತತ 33 ವರ್ಷಗಳ ಅವಧಿಗೆ ಇದೇ ಸಂಪ್ರದಾಯ ಮುಂದುವರಿದಿದೆ.
ರಾಜಕೀಯ ತಜ್ಞರು ಮತ್ತು ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಸರಕಾರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವುದನ್ನು ಸ್ಪಷ್ಟಪಡಿಸುತ್ತಿವೆ.

*ವೀರಶೈವರ ನಡೆ ಎತ್ತ* ?
ಇನ್ನು ಹದಿನೈದು ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರಾಶೆ ಮೂಡಿಸುವ ಘಟನಾವಳಿಗಳು ಕಳೆದ 18 ದಿನಗಳಲ್ಲಿ ನಡೆದು ಹೋಗಿವೆ. ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮತ್ತು ಇತರ ಕೆಲವು ನಾಯಕರು ಪಕ್ಷವನ್ನು ನಿರ್ಗಮಿಸಿರುವುದು ಮೊದಲನೇ ಅಂಶ. ಮೇಲಾಗಿ ಇವರಿಬ್ಬರೂ ವೀರಶೈವ ಸಮಾಜದ ಸಾದರ ಮತ್ತು ಬಣಜಿಗ ಪಂಗಡಕ್ಕೆ ಸೇರಿದ್ದಾರೆ ಎನ್ನುವುದು ಕುತೂಹಲಕರ ಅಂಶವಾಗಿದೆ.
ಈ ಲಿಂಗಾಯತ ನಾಯಕರಿಗೆ ಬಿಜೆಪಿ ಮಾಡಿದ ಅನ್ಯಾಯ ಮತ್ತು ಉದ್ದೇಶಪೂರ್ವಕವಾಗಿ ಬಿಎಸ್ ಯಡಿಯೂರಪ್ಪನವರಿಗೆ ಮಾಡಿದ ಅವಮಾನವನ್ನು ಸ್ವತಃ ಯಡಿಯೂರಪ್ಪ ಅವರೂ ಮರೆತಿಲ್ಲ. ಮೇಲಾಗಿ ಲಿಂಗಾಯಿತ ಸಮುದಾಯದ ನೀಲಿ ಕಣ್ಣಿನ ಹುಡುಗ ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ನಿರಾಕರಿಸಿದ್ದು ಅವರನ್ನು ಕೆರಳಿಸಿದೆ. ಈ ಎಲ್ಲ ವಿದ್ಯಮಾನಗಳು ಸಮುದಾಯದವನ್ನು ಕೆರಳಿಸಿದೆ. ಸಹಜವಾಗಿಯೇ ಇದು ವಿರೋಧಿ ಪಕ್ಷಗಳು ಅಧಿಕಾರಕ್ಕೆ ಏರಲು ಸಹಾಯ ಮಾಡಲಿದೆ. ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಇಡೀ ವೀರಶೈವ ಸಮುದಾಯ ಸಾರಾ ಸಗಟಾಗಿ ಮತ್ತೆ ಬಿಜೆಪಿ ಪರವಾಗಿ ನಿಲ್ಲಲಿದೆ ಎಂದು ಹೇಳಲಾಗದು.
ಭ್ರಷ್ಟಾಚಾರ ಆರೋಪಗಳು, ಸಿಡಿ ಹಗರಣಗಳು, ಆಂತರಿಕ ಕಚ್ಚಾಟಗಳು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಪಕ್ಷದಲ್ಲಿ ಮಾಸ್ ಲೀಡರ್ ಇಲ್ಲದಿರುವುದು ಬಿಜೆಪಿಯನ್ನು ಕಳೆಗುಂದಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಭೆಗಳಲ್ಲೇ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ರಾಜ್ಯ ಬಿಜೆಪಿ ಘಟಕ ಕೇಂದ್ರ ನಾಯಕರು ಅದರಲ್ಲೂ ಪ್ರಧಾನಿ ಮೋದಿ ಮತ್ತು ಸಚಿವ ಅಮಿತ್ ಶಾ ಅವರ ಜೋಡಿಯನ್ನು ಅವಲಂಬಿಸಿದೆ. ಮತದಾರರನ್ನು ಆಕರ್ಷಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತಿತರ ನಾಯಕರನ್ನು ಅವಲಂಬಿಸಿದೆ. ಈಗಿನ ಟ್ರೆಂಡ್ ಪ್ರಕಾರ ಇರುವಷ್ಟು ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡಬೇಕಿದೆ ಎಂದು ಹೆಸರು ಹೇಳಲು ಬಯಸದ ಮುಖಂಡರೊಬ್ಬರು ಹೇಳುತ್ತಾರೆ.
ಬಿಜೆಪಿ ಎಲ್ಲ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಮೇಲುಕೋಟೆಯಲ್ಲಿ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿದ್ದು, 223 ಕ್ಷೇತ್ರಗಳಲ್ಲಿ ಉಮೇದುವಾರಿಕೆ ಹಾಕಿದೆ. ಇನ್ನು ಜೆಡಿಎಸ್ ನ 207 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಆಡಳಿತಾರೂಢ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಸಣ್ಣ ಅವಕಾಶವನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟುಕೊಡುತ್ತಿಲ್ಲ.

*ಕಾಡುತ್ತಿರುವ ಭಿನ್ನಮತ*:
ಭಿನ್ನಮತ ಮೂರೂ ಪಕ್ಷಗಳನ್ನು ಕಾಡುತ್ತಿದೆ. ಹೊಸ ಮುಖಗಳಿಗೆ ಟಿಕೆಟ್, ಹಳಬರಿಗೆ ನಿವೃತ್ತಿ ಎಂಬ ಸೂತ್ರವನ್ನು ಅನುಸರಿಸಲು ಹೋಗಿ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ. ಅತಿ ಹೆಚ್ಚು ಅತೃಪ್ತರನ್ನು ಹೊಂದಿರುವ ಪಕ್ಷವಾಗಿದೆ. ಇವರಲ್ಲಿ 20ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಆಶ್ರಯ ಪಡೆದರೆ ಇನ್ನೂ ಕೆಲವರು ಬಂಡಾಯವಾಗಿ ಚುನಾವಣೆಗೆ ಇಳಿದಿದ್ದಾರೆ. ನಿವೃತ್ತಿ ಘೋಷಿಸಿದವರು ಎಷ್ಟರ ಮಟ್ಟಿಗೆ ಪಕ್ಷಕ್ಕೆ ಸಹಕಾರ ನೀಡುತ್ತಾರೆ ಕಾಡು ನೋಡಬೇಕಿದೆ.
ಕಾಂಗ್ರೆಸ್ ಕೂಡಾ ಬಂಡಾಯದ ಬಿಸಿಯನ್ನು ಅನು ಅನುಭವಿಸುತ್ತಿದೆ. ಇಲ್ಲಿ ಟಿಕೆಟ್ ಸಿಗದ ನಾಯಕರಿಗೆ ಬಿಜೆಪಿ ಮತ್ತು ಜೆಡಿಎಸ್ ಮಣೆ ಹಾಕಿದೆ. ಈ ರೀತಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಅತಿ ಹೆಚ್ಚು ಟಿಕೆಟ್ ನೀಡಿದ ಕೀರ್ತಿ ಜೆಡಿಎಸ್ ಗೆ ಸಲ್ಲುತ್ತದೆ.

ಬಿಸಿ ತುಪ್ಪವಾದ ಸಿಎಂ ಪಟ್ಟ:
ಯಡಿಯೂರಪ್ಪ ನಿರ್ಗಮನದ ನಂತರ ಲಿಂಗಾಯತ ಸಮುದಾಯವನ್ನು ಓಲೈಕೆ ಮಾಡಲು ಎರಡೂ ರಾಷ್ಟ್ರೀಯ ಪಕ್ಷಗಳು ಕಸರತ್ತು ನಡೆಸಿವೆ. ಆದರೆ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳುವಂತಿಲ್ಲ. ಹಾಗೊಂದು ವೇಳೆ ಘೋಷಣೆ ಮಾಡಿದರೆ ಇತರ ಸಮುದಾಯಗಳ ಸಿಟ್ಟಿಗೆ ಕಾರಣವಾಗಬೇಕಾಗುತ್ತದೆ. ಈ ಸಮುದಾಯ ಅಷ್ಟಾಗಿ ಜೆಡಿಎಸ್ ಪರವಾಗಿಲ್ಲ ಎನ್ನುವುದು ಈ ಹಿಂದಿನ ಫಲಿತಾಂಶಗಳು ಪುಷ್ಠಿಕರಿಸುತ್ತವೆ. ತಮ್ಮ ಸ್ವಂತ ವರ್ಚಸ್ಸಿನ ಮೇಲೆ ಈ ಸಮುದಾಯದ ಅಭ್ಯರ್ಥಿಗಳು ಗೆಲ್ಲಬಹುದು.
ಬಲ್ಲ ಮೂಲಗಳ ಪ್ರಕಾರ ಬಿಜೆಪಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರಲಾಗುತ್ತದೆ. ಈ ಬಗ್ಗೆ ಆರ್ ಎಸ್ ಎಸ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಆದರೂ 2024ರ ಲೋಕಸಭಾ ಚುನಾವಣೆ ದೃಷ್ಠಿಯಿಂದ ವೀರಶೈವ ಸಮುದಾಯ ಸಮಾಜಕ್ಕೆ ಸಿಎಂ ಹುದ್ದೆ ಮೀಸಲಿಡಬಹುದು ಎಂದೂ ಕೆಲವು ಮೂಲಗಳು ತಿಳಿಸಿವೆ.

*ಕೈ ಪಡೆಯಲ್ಲಿ ಸಿಎಂ ಗಾದಿಗೆ ಕಿತ್ತಾಟ*:
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂಬ ಗುಟ್ಟು ಪೆಟ್ಟು ನೀಡುತ್ತಿದೆ. ಪಕ್ಷ ಸಂಘಟನೆಗಿಂತ ಸಿಎಂ ಹುದ್ದೆ ಕುರಿತು ಚರ್ಚೆ ನಡೆಸಿದ್ದೇ ಹೆಚ್ಚು. ಇದೇ ಅಭಿಪ್ರಾಯ ಜನ ಸಾಮಾನ್ಯರಲ್ಲಿ ಕಂಡುಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಪ್ರಚಾರದ ಪ್ರಮುಖ ಸಮಯವನ್ನು ಸಿಎಂ ಹುದ್ದೆ ಪಡೆಯುವತ್ತ ಮೀಸಲಿಟ್ಟಿದ್ದು ತಪ್ಪು ಎಂದು ಸಾಮಾನ್ಯ ಕಾರ್ಯಕರ್ತನೂ ಹೇಳಬಲ್ಲ.
ಜೊತೆಗೆ ಗುಂಪುಗಾರಿಕೆ, ಬಂಡಾಯದಿಂದ ಕಾಂಗ್ರೆಸ್ ಮುಕ್ತವಾಗಿಲ್ಲ. ಅಲ್ಲಲ್ಲಿ ಬಂಡಾಯ ಎದ್ದು ಕಾಣುತ್ತಿದೆ.

ಅತಂತ್ರ ಫಲಿತಾಂಶದ ನಿರೀಕ್ಷೆಯಲ್ಲಿ ಜೆಡಿ ಎಸ್:
ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಹಳೆ ಮೈಸೂರು ಭಾಗದಲ್ಲಿ ದೇವೇಗೌಡರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 2018ರಲ್ಲಿ ಒಕ್ಕಲಿಗ ಭಾಗದಲ್ಲಿ ಜೆಡಿಎಸ್ 30 ಸ್ಥಾನಗಳನ್ನು ಗೆದ್ದು ಒಟ್ಟು 37 ಸ್ಥಾನ ಗಳಿಸಿತ್ತು. ಆದರೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ತಾನು ಮುಖ್ಯಮಂತ್ರಿಯಾಗಲು ಒಕ್ಕಲಿಗ ಸಮುದಾಯ ಕೈ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಒಕ್ಕಲಿಗರು ಶಿವಕುಮಾರ್ ಮನವಿಗೆ ಮಣಿದರೆ, ಪ್ರಮುಖವಾಗಿ ಇದರ ಹೊಡೆತ ಬೀಳುವುದು ಜೆಡಿಎಸ್ ಗೆ.
ಇನ್ನು ಗಣಿ ಧಣಿ ಜನಾರ್ದನ ರೆಡ್ಡಿ ಅವರ ಪ್ರಗತಿ ಪಕ್ಷ ಕಲ್ಯಾಣ ಬಿಜೆಪಿಗೆ ವೇಗಕ್ಕೆ ಕನಿಷ್ಠ ಒಂದು ಡಜನ್ ಕ್ಷೇತ್ರಗಳಲ್ಲಿ ಅಡ್ಡಿಯಾಗಲಿದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬಿಜೆಪಿಗೆ ಜನಾರ್ಧನ ರೆಡ್ಡಿ ಪಕ್ಷ ಕಂಟಕವಾಗುವ ಸಾಧ್ಯತೆ ಇದೆ.

ಇನ್ನು ಮಂದೆ ಚುನಾವಣಾ ಕಣ ರಂಗೇರಲಿದೆ. ಅಖಾಡಾ ಬಿರುಸು ಪಡೆಯಲಿದೆ. ತಮ್ಮ ತಮ್ಮ ಬತ್ತಳಿಕೆಯಲ್ಲಿರುವ ಬಾಣಗಳನ್ನು ಬಿಡಲು ಸಜ್ಜಾಗಿವೆ. ಗೆಲ್ಲಲು ಸಾಧ್ಯವಿರುವ ಎಲ್ಲ ಅಸ್ತ್ರಗಳನ್ನು ಮೂರೂ ಪಕ್ಷಗಳು ಪ್ರಯೋಗ ಮಾಡಲಿವೆ.