ಗ್ರಾಮೀಣ ಕ್ಷೇತ್ರದ ಪೂರ್ವಭಾಗದಲ್ಲೂ ಲಕ್ಷ್ಮೀ ಹೆಬ್ಬಾಳಕರ್ ಪರ ಭಾರೀ ಜನ ಬೆಂಬಲ

ಬೆಳಗಾವಿ: ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಪೂರ್ವ ಭಾಗದಲ್ಲೂ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಪರ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಗುರುವಾರ ಸಂಜೆ ಮಾರಿಹಾಳದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಜನರು ಕಿಕ್ಕಿರಿದು ಸೇರಿ ಬೆಂಬಲ ಸೂಚಿಸಿದರು.
ಲಕ್ಷ್ಮೀ ಹೆಬ್ಬಾಳಕರ್ ಊರು ಪ್ರವೇಶಿಸುತ್ತಿದ್ದಂತೆ ಜನರ ಸಂಭ್ರಮ ಮುಗಿಲುಮುಟ್ಟಿತ್ತು. ತೆರೆದ ವಾಹನದಲ್ಲಿ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ರ್ಯಾಲಿ, ಪ್ರಮುಖ ಬೀದಿ, ಪ್ರತಿಯೊಂದು ಗಲ್ಲಿಗಳಲ್ಲಿ ಸಾಗಿತು. ಪ್ರತಿ ಮನೆ ಎದುರು ಮಹಿಳೆಯರು ಆರತಿ ತಟ್ಟೆ ಹಿಡಿದು ಸ್ವಾಗತಕ್ಕೆ ನಿಂತಿದ್ದರು. ವೃದ್ದರಂತೂ ಹತ್ತಿರ ಬಂದು ಹರಸಿ, ಹಾರೈಸುತ್ತಿದ್ದರು. ಮಹಿಳೆಯರು ಹೆಬ್ಬಾಳಕರ್ ಅವರ ದೃಷ್ಟಿ ತೆಗೆಯುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಲಕ್ಷ್ಮೀ ಹೆಬ್ಬಾಳಕರ್ ಎಲ್ಲ ಕಡೆ ಇಳಿದು ಹೋಗಿ ಹಿರಿಯರ ಕಾಲಿಗೆರಗಿ ಆಶಿರ್ವಾದ ಪಡೆಯುತ್ತಿದ್ದರು. ಯುವತಿಯರು ಹತ್ತಿರ ಬಂದು ಅಕ್ಕ ಅಕ್ಕ ಎಂದು ಕೈ ಹಿಡಿದು ಪ್ರೀತಿ ತೋರಿಸುತ್ತಿದ್ದರು.
ಕಳೆದ 5 ವರ್ಷದಲ್ಲಿ ಗ್ರಾಮದ ಎಲ್ಲಾ ಸಮಾಜದ ಒಂದಿಲ್ಲೊಂದು ಕೆಲಸ ಮಾಡಿಕೊಟ್ಟಿದ್ದರಿಂದ, ಇಡೀ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡಿದ್ದರಿಂದ ಜನರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ದೇವರೇ ಮನೆ ಬಾಗಿಲಿಗೆ ಬಂದಷ್ಟು ಖುಷಿಪಡುತ್ತಿದ್ದರು. ಪ್ರತಿ ಮನೆಯಲ್ಲಿ ಹಾರ, ಶಾಲು ಹಾಕಿ ಗೌರವಿಸುತ್ತಿದ್ದರು.
ರ್ಯಾಲಿ ಗಣೇಶ ದೇವಸ್ಥಾನದವರೆಗೆ ಬರುವವರೆಗೂ ರಸ್ತೆಯ ಎರಡೂ ಕಡೆ ಜನಸಾಗರವೇ ಸೇರಿತ್ತು. ಗಣೇಶ ಸೇವಾ ಸಮಿತಿ, ಬಸವೇಶ್ವರ ಸಮಿತಿ, ವಿಠ್ಠಲ ರುಕ್ಮಿಣಿ ದೇವಸ್ಥಾನ ಸಮಿತಿ, ಗುಡದಮಮ್ ದೇವಸ್ಥಾನ ಸಮಿತಿ, ಜಮಾತ್ ಕಮಿಟಿಗಳು, ದೇವಾಂಗ ಸಮಾಜದ ಸಮಿತಿ, ಅಂಬೇಡ್ಕರ್ ಭವನ ಸಮಿತಿ, ಮರಾಠಾ ಸಮಾಜದ ಮುಖಂಡರು, ಕಾರ್ಯಕರ್ತರು ಬಂದು ಸಂಪೂರ್ಣ ರ್ಯಾಲಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ನಮ್ಮೂರಿನ ಎಲ್ಲರ ಮತಗಳನ್ನು ಹಾಕಿಸುತ್ತೇವೆ. ಚಿಂತೆ ಮಾಡಬೇಡಿ, ನೀವು ನಮ್ಮ ಮನೆ ಮಗಳು, ಕಳೆದ ಬಾರಿಗಿಂತ ದೊಡ್ಡ ಅಂತರದಲ್ಲಿ ನಿಮ್ಮನ್ನು ಗೆಲ್ಲಿಸುತ್ತೇವೆ. ಮಂತ್ರಿಯಾಗಿ ಮತ್ತೆ ನಮ್ಮೂರಿಗೆ ಬನ್ನಿ ಎಂದು ಜನ ಹಾರೈಸುತ್ತಿದ್ದರು.
ಸ್ಥಳೀಯ ಮುಖಂಡರಾದ ಸದಾಶಿವ ಧರ್ಮೋಜಿ, ಗುಡದಪ್ಪ ಗೊರವ್, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಅಡಿವೇಶ ಇಟಗಿ, ಬಸವರಾಜ ಮ್ಯಾಗೋಟಿ, ಬಸವರಾಜ ಹಿತ್ತಲಮನಿ, ಅಪ್ಪಾಸಾಹೇಬ ಬಾಗವಾನ, ದಿಲಾವರ ಪೆಂಡಾರಿ, ಪ್ರಕಾಶ ಯಲ್ಲಪ್ಪನವರ್, ಮಂಜುನಾಥ ಹೊನ್ನಪ್ಪನವರ್, ಸಮೀರ್ ಮುಲ್ಲಾ, ಸಲೀಂ ಖಾಲೆ ಖಾನ್, ರಫೀಕ್ ಮುಲ್ಲಾ, ಅಲ್ಲಾವುದ್ದೀನ್ ಮುಲ್ಲಾ, ಶಂಕರ ಸೊಗಲಿ, ನಾರಾಯಣ ಸೊಗಲಿ ಸೇರಿದಂತೆ ಸಾವಿರಾರು ನಾಯಕರು, ಕಾರ್ಯಕರ್ತರು ಸೇರಿದ್ದರು.
ಗ್ರಾಮೀಣ ಕ್ಷೇತ್ರದ ಪಶ್ಚಿಮ ಭಾಗದಲ್ಲಿ ದೊರೆತಂತೆ ಪೂರ್ವ ಭಾಗದಲ್ಲೂ ಅಪಾರ ಪ್ರಮಾಣಧಲ್ಲಿ ಜನ ಬೆಂಬಲ ಕಾಣಿಸುತ್ತಿದೆ. ಜಾತಿ, ಭಾಷೆ, ಧರ್ಮದ ಬೇಧವಿಲ್ಲದೆ, ಅಷ್ಟೇ ಅಲ್ಲ ಪಕ್ಷಾತೀತವಾಗಿ ಎಲ್ಲರೂ ಬಂದು ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಅನ್ಯ ಪಕ್ಷದವರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾವೂ ಅಭಿವೃದ್ಧಿಗಾಗಿ ನಿಮ್ಮ ಜೊತೆಗಿದ್ದೇವೆ ಎಂದು ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. //////