Belagavi News In Kannada | News Belgaum

ಕಾಂಗ್ರೆಸ್ ಪಕ್ಷದಿಂದ ಮಾತ್ರ ಸರ್ವರ ಉದ್ಧಾರ ಸಾಧ್ಯ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಯಮಕನಮರಡಿ: ತಂದೆಯವರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿಯವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಮತ್ತೊಮ್ಮೆ ಅವರ ಕೈ ಹಿಡಿಯುವ ವಿಶ್ವಾಸವಿದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ಯಮಕನಮರಡಿ ಮತಕ್ಷೇತ್ರದ ಹಾರಣಕೊಳ್ಳ, ರಂಗಧೋಳಿ ಹಾಗೂ ರಾಮಾಪೂರ ಗ್ರಾಮಗಳಲ್ಲಿ ಭರ್ಜರಿ ಮತಯಾಚಿಸಿ ಮಾತನಾಡಿದ ಅವರು, ಸರ್ವ ಸಮಾಜದ ಪ್ರಗತಿ ಬಯಸುವ ಶಾಸಕ ಸತೀಶ್‌ ಜಾರಕಿಹೊಳಿ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ಕರೆ ನೀಡಿದರು.

ಯಮಕನಮರಡಿ ಮತಕ್ಷೇತ್ರದ ಜನತೆಗೆ ಶಾಸಕರು ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಹೀಗಾಗಿ ಇನ್ನಷ್ಟು ಯಮಕನಮರಡಿ ಮತಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಶಾಸಕ ಸತೀಶ್‌ ಜಾರಕಿಹೊಳಿ ಅವರ ಕೈ ಬಲಪಡಿಸಬೇಕೆಂದು ತಿಳಿಸಿದರು. 

ಕಾಂಗ್ರೆಸ್ ಪಕ್ಷವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಇತಿಹಾಸ ಹೊಂದಿದೆ. ದೇಶದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರ, ದೀನ ದಲಿತರ ಉದ್ಧಾರ ಸಾಧ್ಯ. ಕಾರಣ ಕಾಂಗ್ರೆಸ್ ಪಕ್ಷ ಜಾರಿಗೆ ತಂದಂತಹ ಜನಪರ ಯೋಜನೆಗಳ ಕುರಿತು ಜನರಲ್ಲಿ ಪಕ್ಷದ ಕಾರ್ಯಕರ್ತರು ತಿಳಿವಳಿಕೆ ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಯಮಕನಮರಡಿ ಮತಕ್ಷೇತ್ರದ ಹಾರಣಕೊಳ್ಳ, ರಂಗಧೋಳಿ, ರಾಮಾಪೂರ ಗ್ರಾಮಗಳ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.//////