ಇನ್ನಷ್ಟು ಪ್ರಗತಿ ಸಾಧಿಸಲು ಬಿಜೆಪಿ ಬೆಂಬಲಿಸಿ-ಮಹಾವೀರ ನಿಲಜಗಿ

ಹುಕ್ಕೇರಿ : ಕ್ಷೇತ್ರದಲ್ಲಿ ದಿ.ಉಮೇಶ ಕತ್ತಿ ಅವರ ದೂರದೃಷ್ಟಿ ಆಲೋಚನೆ, ಜನಪರ ಕಾಳಜಿಯಿಂದ ಈಗಾಗಲೇ ಹಲವು ಮಹತ್ತರ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ. ಆದರೆ, ಮತ್ತಷ್ಟು ಪ್ರಗತಿ ಸಾಧಿಸಲು ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಅವರನ್ನು ಮತದಾರರು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮಹಾವೀರ ಸಮೂಹ ಸಂಸ್ಥೆಗಳ ಅಧ್ಯಕ್ಷರೂ ಆದ ಹಿರಿಯ ಮುಖಂಡ ಮಹಾವೀರ ನಿಲಜಗಿ ಹೇಳಿದರು.
ತಾಲೂಕಿನ ಬಡಕುಂದ್ರಿ, ಯರಗಟ್ಟಿ, ಹುನ್ನೂರ, ಯರನಾಳ, ಹೊಸೂರ, ಇಂಗಳಿ, ನಿರ್ವಾನಟ್ಟಿ, ಲೇಬರ್ ಕ್ಯಾಂಪ್, ಬಸವನಗುಡಿ ಮತ್ತಿತರ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಪರ ಮತಪ್ರಚಾರ ನಡೆಸಿ ಅವರು ಮಾತನಾಡಿದರು.
ಕ್ಷೇತ್ರದ 70 ಹಳ್ಳಿಗಳು, ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶಕೆ ನಡೆಯುತ್ತಿದೆ. ದಿ.ಉಮೇಶ ಕತ್ತಿ ಅವರಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ದಾಖಲೆ ಮತದ ಗೆಲುವು ನಮ್ಮ ಗುರಿಯಾಗಬೇಕು. ಇನ್ನಷ್ಟು ಅಭಿವೃದ್ಧಿಗಾಗಿ ನಿಖಿಲ್ ಕತ್ತಿ ಬೇಕು ಎಂಬುದಾಗಿ ಜನ ಬಯಸುತ್ತಿದ್ದಾರೆ. ಹೀಗಾಗಿ ಹುಕ್ಕೇರಿಯಲ್ಲಿ ಮತ್ತೊಮ್ಮೆ ಬಿಜೆಪಿ ವಿಜಯೋತ್ಸವ ಆಚರಿಸಲಿದೆ ಎಂದು ಅವರು ಹೇಳಿದರು.
ಬಿಜೆಪಿ ಪಕ್ಷದ ಶಾಸಕರಿಂದ ಮಾತ್ರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಸಮಾಜದ ಕಟ್ಟ ಕಡೆ ವ್ಯಕ್ತಿಯ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಸುಳ್ಳು ಹೇಳಿ ಮತದಾರರನ್ನು ದಿಕ್ಕು ತಪ್ಪಿಸುವುದೇ ಕಾಂಗ್ರೆಸ್‍ನವರ ಕೆಲಸವಾಗಿದೆ ಎಂದು ಅವರು ಆರೋಪಿಸಿದರು.
ಇನ್ನು ಬಿರುಬಿಸಿಲಿನ ನಡುವೆಯೂ ಅಭ್ಯರ್ಥಿ ಹಾಗೂ ಮುಖಂಡರು ಮನೆ ಮನೆಗೆ ತೆರಳಿ ಮತಯಾಚಿಸಿದರು. ಅಭ್ಯರ್ಥಿ ನಿಖಿಲ್ ಕತ್ತಿ, ಮುಖಂಡರಾದ ಬಸವರಾಜ ಮಟಗಾರ, ಪ್ರಕಾಶ ಮುತಾಲಿಕ, ಸತ್ಯಪ್ಪಾ ನಾಯಿಕ, ರಾಚಯ್ಯ ಹಿರೇಮಠ, ಬಸವರಾಜ ಮರಡಿ, ರಾಯಪ್ಪಾ ಢೂಗ ಮತ್ತಿತರರು ಉಪಸ್ಥಿತರಿದ್ದರು.//////