Belagavi News In Kannada | News Belgaum

ಏಕ್ ದೋ ತೀನ್ ಚಾರ್, ಲಕ್ಷ್ಮೀ ಅಕ್ಕ ಜೈ ಜೈ ಕಾರ್ ;ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರಕ್ಕೆ ಹೋದಲ್ಲೆಲ್ಲ ಹೂವಿನ ಮಳೆ

 ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಚುನಾವಣೆ ಪ್ರಚಾರ ಮುಂದುವರಿಸಿದ್ದಾರೆ. ಶನಿವಾರ ಸಂಜೆ ಬಾಳೆಕುಂದ್ರಿ ಬಿಕೆಯ ಗಲ್ಲಿ ಗಲ್ಲಿಗಳಲ್ಲಿ ರೋಡ್ ಶೋ ನಡೆಸಿದರು.

ಲಕ್ಷ್ಮೀ ಹೆಬ್ಬಾಳಕರ್ ಗ್ರಾಮ ಪ್ರವೇಶಿಸುತ್ತಿದ್ದಂತೆ ಅದ್ಧೂರಿ ಸ್ವಾಗತಗೈಯಲಾಯಿತು. ಜೆಸಿಬಿ ಸಹಾಯದಿಂದ ಬೃಹತ್ ಹಾರ ಹಾಕಲಾಯಿತು. ಡೊಳ್ಳು, ನಗಾರಿ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ದರು. ಊರಿನ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ರೋಡ್ ಶೋ ನಡೆಯಿತು. ಕಿಕ್ಕಿರಿದು ಸೇರಿದ್ದ ಜನರು ಏಕ್ ದೋ ತೀನ್ ಚಾರ್, ಲಕ್ಷ್ಮೀ ಅಕ್ಕ ಜೈ ಜೈ ಕಾರ್ ಎಂದು ಮುಗಿಲು ಮುಟ್ಟುವಂತೆ ಘೋಷಣೆ ಕೂಗುತ್ತಿದ್ದರು.

ಮಹಿಳೆಯರು, ವಯೋ ವೃದ್ದರೆನ್ನದೆ ಎಲ್ಲರೂ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಹೂವಿನ ಮಳೆಗರೆಯುತ್ತಿದ್ದರು. ಲಕ್ಷ್ಮೀ ಹೆಬ್ಬಾಳಕರ್ ಮಧ್ಯೆ ಮಧ್ಯೆ ವಾಹನದಿಂದ ಕೆಳಗಿಳಿದು ಹಿರಿಯರ ಪಾದಗಳಿಗೆ ನಮಸ್ಕರಿಸುತ್ತಿದ್ದರು. ಕೆಲವರು ಆರತಿ ಗೈದು ಶುಭ ಹಾರೈಸಿದರೆ, ಇನ್ನು ಕೆಲವರು ಶಾಲು, ಹಾರ ಹಾಕಿ ವಿಜಯೀ ಭವ ಎಂದು ಹರಸುತ್ತಿದ್ದರು. ಕೆಲವು ಯುವಕರು ಅಂಬೇಡ್ಕರ್ ಭಾವಚಿತ್ರ ಅರ್ಪಿಸಿ, ಗೌರವಿಸಿದರು. ಮನೆ ಮನೆಗಳಲ್ಲಿ ಮನೆ ಮಗಳನ್ನು ಸಂಭ್ರಮದಿಂದ ಬರಮಾಡಿಕೊಂಡು ಅರಿಸಿನ ಕುಂಕುಮ ನೀಡಿ ಕಳಿಸುತ್ತಿದ್ದರು.

ಪಂತಬಾಳೇಕುಂದ್ರಿ ಬಿಕೆಯ ದತ್ತಮಂದಿರ ರೋಡ್, ಪಾಟೀಲ ಗಲ್ಲಿ, ಮರಾಠಾ ಗಲ್ಲಿ, ಅಂಬೇಡ್ಕರ್ ಗಲ್ಲಿ, ನಾಯಕ ಗಲ್ಲಿ, ಬಾಗವಾನ ಗಲ್ಲಿ, ಪರಮಾನಂದ ಕಾಲನಿ, ಚಾವಡಿ ಗಲ್ಲಿ, ಜನತಾ ಪ್ಲಾಟ್ ಹಾಗೂ ಪಂತ ನಗರದ ಎಲ್ಲ ಪ್ರದೇಶಗಳಲ್ಲಿ ರೋಡ್ ಶೋ ನಡೆಯಿತು.

ಈ ವೇಳೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಕಳೆದ 5 ವರ್ಷ ನಾನು ಯಾವ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎನ್ನುವುದನ್ನು ನೀವೇ ನೋಡಿದ್ದೀರಿ. ಕಷ್ಟವಿರಲಿ, ಸುಖವಿರಲಿ, ಪ್ರತಿಯೊಂದು ಸಂದರ್ಭದಲ್ಲಿ ನಿಮ್ಮೊಂದಿಗೆ ನಿಂತಿದ್ದೇನೆ. ನೀವೂ ನನಗೆ ನಿರೀಕ್ಷೆಗೂ ಮೀರಿ ಸಹಕಾರ ಕೊಟ್ಟಿದ್ದೀರಿ. ಈಗ ಚುನಾವಣೆ ಬಂದಿದೆ. ಮತ್ತೊಮ್ಮೆ ನಿಮಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಕಾಲೇಜು, ಆಸ್ಪತ್ರೆ, ಬೃಹತ್ ಕೈಗಾರಿಕೆಗಳನ್ನು ತರುವ ಉದ್ದೇಶ ಇದೆ. ಕ್ಷೇತ್ರದಲ್ಲೇ ಉನ್ನತ ಶಿಕ್ಷಣ, ಆರೋಗ್ಯ ಸೇವೆ ಒದಗಿಸುವ ಜೊತೆಗೆ ನಿಮ್ಮ ಮನೆಯ ಮಕ್ಕಳಿಗೆ ಕೈಗೆ ಕೆಲಸ ಕೊಡುವಂತಹ ಯೋಜನೆಗಳನ್ನು ತರುತ್ತೇನೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸ್ಥಳೀಯ ಮುಖಂಡರಾದ ಮೈನುದ್ದೀನ್ ಅಗಸಿಮನಿ, ಗುಲಾಬಿ ಅಶೋಕ ಕೋಲ್ಕಾರ್, ಅಪ್ಸರ್ಜಮಾದಾರ, ಮೊಹ್ಮದ್ ಜಮಾದಾರ, ಹೊನಗೌಡ ಪಾಟೀಲ, ಮಲ್ಲಿಕ್ ಮನಿಯಾರ್ ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು. //////