ಬಿಜೆಪಿಯ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ:ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಘೋಷಣೆ ಮಾಡಿರುವ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ಕುಹಕವಾಡಿದೆ. ಬಿಜೆಪಿಯ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ ಎಂದು ಛೇಡಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ತನ್ನ ಹಿಂದಿನ ಪ್ರಣಾಳಿಕೆಯನ್ನ ಒಮ್ಮೆ ಜನರ ಮುಂದಿಟ್ಟು ಎಷ್ಟು ಭರವಸೆಗಳನ್ನು ಪೂರೈಸಿದೆ ಎಂಬ ಲೆಕ್ಕ ಕೊಡಲಿ. ನಂತರ ಹೊಸ ಪ್ರಣಾಳಿಕೆಯ ಬಗ್ಗೆ ಮಾತಾಡಲಿ. ಇದು ಬಿಜೆಪಿಗೆ ಸಾಧ್ಯವೇ ಎಂದು ಪ್ರಶ್ನಿಸಿದೆ.
‘ಬಿಜೆಪಿಯ ಪ್ರಣಾಳಿಕೆ ಎಂದರೆ ಸುಳ್ಳಿನ ಕಂತೆ ಎಂಬುದು ಈಗಾಗಲೇ ಸಾಬೀತಾಗಿದೆ, ಬಿಜೆಪಿಯ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ. ಕಳೆದ ಬಾರಿ ಅನ್ನಪೂರ್ಣ ಕ್ಯಾಂಟೀನ್ ತೆರೆಯುತ್ತೇವೆ ಎಂದಿದ್ದರು. ಆದರೆ
ಇದ್ದ ಇಂದಿರಾ ಕ್ಯಾಂಟೀನ್ ಮುಚ್ಚಿದರು. ಈಗ ಅನ್ನಪೂರ್ಣ ಹೋಗಿ ಅಟಲ್ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಿದ್ದಾರೆ.ಮುಂದಿನ ಪ್ರಣಾಳಿಕೆಯಲ್ಲಿ ಮೋದಿ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಾರೆ. ಇದು ಹೀಗೆಯೇ ಮುಂದುವರೆಯುತ್ತದೆ ಸುಳ್ಳುಗಳ ಸರಮಾಲೆ‘ ಎಂದು ಕುಹಕವಾಡಿದೆ.
‘ಸಾಲ ಮನ್ನಾ ಮಾಡುತ್ತೇವೆ, ಬೆಂಬಲ ಬೆಲೆ ನೀಡುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಭರಪೂರ ಭರವಸೆ ನೀಡಿ ಮಣ್ಣಿನ ಮಕ್ಕಳ ಕಿವಿ ಮೇಲೆ ಹೂವಿಟ್ಟ ಬಿಜೆಪಿ ಈಗ ಹೊಸ ಸುಳ್ಳುಗಳೊಂದಿಗೆ ಬಂದಿದೆ. ರೈತರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದವರನ್ನು ಒಡ್ಡೋಡಿಸಲು ಜನ ತೀರ್ಮಾನಿಸಿದ್ದಾರೆ‘ ಎಂದು ಕಾಂಗ್ರೆಸ್ ಹೇಳಿದ್ದಾರೆ