Belagavi News In Kannada | News Belgaum

ನಾಲ್ಕೇ ದಿನದಲ್ಲಿ ಚುನಾವಣೆ; ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳು ರಣತಂತ್ರ

ಬೆಳಗಾವಿ: ಬೆಂಗಳೂರು ನಗರದ ಬಳಿಕ ಎರಡನೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವುದು ಬೆಳಗಾವಿ ಜಿಲ್ಲೆ ಇನ್ನು ನಾಲ್ಕು ದಿನಕ್ಕೆ ಮತದಾನ ನಡೆಯಲಿದ್ದು,  ಚುನಾವಣಾ ಕಣದಲ್ಲಿ ಫಲಿತಾಂಶದ ಬಾಹ್ಯ ಚಿತ್ರಣ ಸ್ಪಷ್ಟವಾಗತೊಡಗಿದೆ.

ಹೌದು…. ಬೆಳಗಾವಿ ಅತಿ ದೊಡ್ಡ ಜಿಲ್ಲಾಯಾಗಿದ್ದು, ೧೮ ಕ್ಷೇತ್ರಗಳಲ್ಲಿಯೂ ಬಿಜೆಪಿ ತನ್ನ ವಿವಿಧ ಸಮುದಾಯದವರ ಓಲೈಕೆಗೆ ಗಮನಹರಿಸಿದರೆ, ಕಾಂಗ್ರೆಸ್‌ ಪಕ್ಷ  ಬಿಜೆಪಿ ಮಾಡಿರುವ ಭ್ರಷ್ಟಾಚಾರ, ಕಮಿಷನ್‌ ದಂಧೆ ಕಡೆಗೆ ಹಾಗೂ  ಜೆಡಿಎಸ್‌ ಕಲ್ಯಾಣ ಕರ್ನಾಟಕದ ಕಡೆಗೆ ಗಮನನೆಟ್ಟಿದೆ. ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಿಮಿತ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಕೋಟಿ ರೂಪಾಯಿಗೂ ಮೀರಿದ ನಗ, ನಗದು, ವಸ್ತುಗಳು ಜಪ್ತಿ ಆಗಿವೆ. ರಾಜ್ಯದ ಮತದಾರರ ಜನಸಂಖ್ಯೆ, ಅವರ ಧರ್ಮ, ಅವರು ಇರುವಂತಹ ಪ್ರದೇಶ, ಅವರ ನಂಬಿಕೆ, ಅವರ ಜಾತಿ ಮತ್ತು ಅವರ ಭಾಷಾ ವ್ಯತ್ಯಾಸಗಳನ್ನು ಗಮನಿಸಿದರೆ ಚುನಾವಣಾ ಭವಿಷ್ಯ ಇದೇ ರೀತಿ ಎಂದು ಮೊದಲೇ ಹೇಳುವುದು ಕಷ್ಟ. ಆದಾಗ್ಯೂ, ಚುನಾವಣೆ ವೇಳೆ ಮತದಾನ ಸಮೀಪಿಸುತ್ತಿರುವಾಗ ನಿರ್ಣಾಯಕ ಸಂಖ್ಯೆಯ ಮತದಾರರ ನಂಬಿಕೆ, ಅಭಿಪ್ರಾಯಗಳು ಬದಲಾಗುವ ಸಾಧ್ಯತೆ ಇದೆ. ರಾಜ್ಯದ ಎರಡನೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಮರಾಠರು ಪ್ರಾಬಲ್ಯ ಹೊಂದಿದ್ದರೆ, ಉಳಿದ 13 ಕಡೆಗಳಲ್ಲಿ ಲಿಂಗಾಯತರು ಬಹುಮತ ಹೊಂದಿದ್ದಾರೆ. ಕಾಂಗ್ರೆಸ್‌ ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವ ಕುಂದಾನಗರಿಯಲ್ಲಿ ಯಾವ ಪಕ್ಷ ಬಹುಮತ ಸಾಧಿಸಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿರುವ ಮತದಾರರ ವಿವಿರ: ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ 39.01 ಲಕ್ಷ ಮತದಾರರಿದ್ದಾರೆ. ಇವರಲ್ಲಿ 19,68,928 ಪುರುಷ ಮತದಾರರು, 19,32,576 ಮಹಿಳೆಯರು ಮತ್ತು 141 ಇತರೆ ಮತದಾರರು ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. 2018ರ ಚುನಾವಣೆಯಲ್ಲಿ, ಬಿಜೆಪಿ 10 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಇದು 2019ರ ಪಕ್ಷಾಂತರದ ನಂತರ ಬದಲಾಯಿತು. ರಮೇಶ್ ಜಾರಕಿಹೊಳಿ (ಗೋಕಾಕ), ಮಹೇಶ ಕುಮಠಳ್ಳಿ (ಅಥಣಿ) ಮತ್ತು ಶ್ರೀಮಂತ ಪಾಟೀಲ (ಕಾಗವಾಡ) ಈ ಮೂವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಎಲೆಕ್ಷನ್‌ ಚಾಣಕ್ಯರು: ರಾಜ್ಯದಲ್ಲಿಅಧಿಕಾರ ಗದ್ದುಗೆ ಹಿಡಿಯಲು ನಾಯಕರು ಉರಿಬಿಸಿಲಲ್ಲಿ ಬೆವರು ಹರಿಸುತ್ತಾ ಬಿರುಸಿನ ಪ್ರಚಾರ ನಡೆಸುತ್ತಿದ್ದರೆ, ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿರುವ ರಾಷ್ಟ್ರೀಯ ಪಕ್ಷಗಳ ಹತ್ತಾರು ನಾಯಕರು ಬೆಳಗಾವಿ ಜಿಲ್ಲೆಯಲ್ಲಿ ತೆರೆಮರೆಯಲ್ಲಿಉಳಿದೇ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ತಿಂಗಳುಗಟ್ಟಲೆ ವಾಸ್ತವ್ಯ ಹೂಡಿರುವ ದೇಶದ ನಾನಾ ಭಾಗಗಳ ಈ ನಾಯಕರು ತಮ್ಮ ಪಕ್ಷಗಳ ಗೆಲುವಿಗಾಗಿ ದುಡಿಯುತ್ತಿದ್ದು, ಒಂದರ್ಥದಲ್ಲಿ’ಮಿನಿ ಕರ್ನಾಟಕ’ವೇ ಬೆಳಗಾವಿ ವಿಧಾನಸಭೆ ಚುನಾವಣಾ ಅಖಾಡದಲ್ಲಿದೆ. ರಾಜಕಾರಣಿಗಳ ದಂಡು ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗಿದ್ದರೆ, ದೇಶದ ನಾನಾ ಭಾಗಗಳ ಚುನಾವಣೆಗಳಲ್ಲಿನ ಅನುಭವ, ಪ್ರಯೋಗಿಸಲ್ಪಟ್ಟ ತಂತ್ರಗಳನ್ನು ಸಮೀಕರಿಸಿ ಸ್ಟ್ರಾಟಜಿ ರೂಪಿಸುವ ಕೆಲಸ ನಡೆಯುತ್ತಿದೆ. ಚುನಾವಣಾ ಕಾರ್ಯತಂತ್ರ, ಪ್ರಚಾರ ಶೈಲಿ, ಚುನಾವಣಾ ವಸ್ತು ವಿಷಯಗಳ ಆಯ್ಕೆ, ಸ್ಟಾರ್‌ ಪ್ರಚಾರಕರ ಪ್ರವಾಸ ಪಟ್ಟಿ ನಿರ್ಧಾರ ಸೇರಿದಂತೆ ಎಲ್ಲ ತಯಾರಿಗಳ ಕೆಲಸದಲ್ಲಿಇವರು ತೊಡಗಿದ್ದಾರೆ. 

ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ರಾಜಕೀಯ ಪಕ್ಷಗಳು: ಕಳೆದ ವಿಧಾನಸಭೆ ಚುನಾವಣೆಗಳಂತೆ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ. ಕತ್ತಿ, ಜಾರಕಿಹೊಳಿ, ಹುಕ್ಕೇರಿ, ಜೊಲ್ಲೆ, ಕೌಜಲಗಿ, ಮಾಮನಿ ಕುಟುಂಬಗಳ ಸದಸ್ಯರಿಗೆ ಟಿಕೆಟ್‌ ನೀಡಲಾಗಿದೆ.  ಬೆಳಗಾವಿ ಜಿಲ್ಲೆ ಕ್ಷೇತ್ರವು ಕಳೆದೆರಡು ದಶಕಗಳಿಂದ ಬಿಜೆಪಿ ಭದ್ರಕೋಟೆ ಎನ್ನಿಸಿಕೊಂಡಿತ್ತು. ಕಳೆದ ಮೂರು ಚುನಾವಣೆಗಳಂತೆ, ಬೆಳಗಾವಿ ಮತ್ತು ಶಿವಸೇನೆ ಎನ್‌ಸಿಪಿ ಎಂಇಎಸ್‌ ಬೆಂಬಲಿತ ಮರಾಠಿ ಪಾಬ್ರಲ್ಯದ 5 ಕ್ಷೇತ್ರಗಳನ್ನು ಹೊರತುಪಡಿಸಿ, ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಅಲ್ಲದೇ ಮರಾಠಿ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ.

ಲಿಂಗಾಯತ ನಾಯಕರ ಗೈರಿನಿಂದ ಕಮಲದಲ್ಲಿ ತಳಮಳ: ಲಿಂಗಾಯತ ಸಮುದಾಯದ ಘಟಾನುಘಟಿ ನಾಯಕ ಬಿ.ಎಸ್‌.ವೈ ಚುನಾವಣಾ ರಾಜಕೀಯದಿಂದ ಹಿಂದೆ, ಸರಿದಿರುವುದು, ಸ್ಥಳೀಯ ಪ್ರಮುಖ ಲಿಂಗಾಯತ ಬಿಜೆಪಿ ನಾಯಕರಾದ ಸುರೇಶ್‌ ಅಂಗಡಿ ಮತ್ತು ಉಮೇಶ್‌ ಕತ್ತಿ ಅವರ ನಿಧನ, ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜಕೀಯವಾಗಿ ಪ್ರಭಾವಿ ಜಾರಕಿಹೊಳಿ ಕುಟುಂಬದ ವರ್ಚಸ್ಸು ಈ ಎಲ್ಲಾ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಅಂಶಗಳಾಗಲಿವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಣೆ ಹಿನ್ನೆಲೆಯಲ್ಲಿ ಮೂರು ಬಾರಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ಸೇರಿದಂತೆ ಹಲವು ಅತೃಪ್ತ ಬಿಜೆಪಿ ನಾಯಕರು ಬೆಳಗಾವಿಯಿಂದ ಹೊರಗುಳಿದಿರುವುದು ಈ ಕ್ಷೇತ್ರಕ್ಕೆ ಬಿಜೆಪಿ ಮತ ಗಳಿಕೆಗೆ ಅಡ್ಡಿ ಪಡಿಸುವ ಸಾಧ್ಯತೆ ಇದ್ದು, ಕಮಲ ಪಾಳಯದಲ್ಲಿ ತಳಮಳ ಶುರುವಾಗಿದೆ. ಮತ್ತೊಂದೆಡೆ, ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮತ್ತು ಸುಮಾರು 40 ಪ್ರತಿಶತದಷ್ಟು ಮರಾಠಿ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವ ಬೆಳಗಾವಿಯಲ್ಲಿ ಗಡಿ ಸಮಸ್ಯೆಯನ್ನು ಜೀವಂತವಾಗಿಡಲು ಎಂಇಎಸ್‌ ಶ್ರಮಿಸುತ್ತಿದೆ. ಈ ಕ್ಷೇತ್ರಗಳ ತ್ರಿಕೋನ ಹೋರಾಟವು ಮರಾಠಿ ಪ್ರಾಬಲ್ಯವಿರುವ 5 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳ ಮತಗಳನ್ನು ಕೆಡಿಸಬಹುದು ಎನ್ನಲಾಗುತ್ತಿದೆ.

ಜಿಲ್ಲೆಯಲ್ಲಿವೆ ಪ್ರಬಲ ರಾಜಕೀಯ ಕುಟುಂಬಗಳು:  ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮರಾಠರು ಪ್ರಾಬಲ್ಯ ಹೊಂದಿದ್ದರೆ, ಉಳಿದ 13 ಕ್ಷೇತ್ರಗಳಲ್ಲಿ ಲಿಂಗಾಯತರು ಬಹುಮತ ಹೊಂದಿದ್ದಾರೆ. ಒಬಿಸಿ ಮತ್ತು ಎಸ್‌ಸಿ/ಎಸ್‌ಟಿಗಳ ಜನಸಂಖ್ಯೆ ಗಣನೀಯವಾಗಿದೆ. ಜಿಲ್ಲೆಯಲ್ಲಿ ಈ ಸಮುದಾಯಗಳಿಗೆ ಎರಡು ಸ್ಥಾನಗಳನ್ನು ಮೀಸಲಿಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಹಲವು ಚುನಾಯಿತ ಪ್ರತಿನಿಧಿಗಳು ಸಕ್ಕರೆ ಉದ್ಯಮಿಗಳಾಗಿದ್ದು, ಜಾರಕಿಹೊಳಿ, ಜೊಲ್ಲೆ ಹಾಗೂ ಕತ್ತಿ ಈ ಮೂರು ಪ್ರಬಲ ರಾಜಕೀಯ ಕುಟುಂಬಗಳು ಈ ಭಾಗದಲ್ಲಿ ಚುನಾವಣಾ ಪ್ರಾಬಲ್ಯವನ್ನು ಹೊಂದಿದ್ದಾರೆ. ಜಾರಕಿಹೊಳಿ ಕುಟುಂಬದಿಂದ ರಮೇಶ್‌ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಕ್ರಮವಾಗಿ ಗೋಕಾಕ್‌ ಮತ್ತು ಅರಭಾವಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಈ ಕುಟುಂಬದ ಮತ್ತೊಬ್ಬ ಸದಸ್ಯ ಸತೀಶ್‌ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ಜಾರಕಿಹೊಳಿ ಸಹೋದರರು ಪಕ್ಷ ಬದಲಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರುವ ಮುನ್ನ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡು ಬಿಜೆಪಿಗೆ ಸಹಾಯ ಮಾಡಿದ 17 ಶಾಸಕರಲ್ಲಿ ಇವರೂ ಒಬ್ಬರು. ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡ ತಮ್ಮ ಅನುಯಾಯಿಗಳಿಗೆ ಬಿಜೆಪಿ ಟಿಕೆಟ್‌ ಖಾತ್ರಿಪಡಿಸಿರುವ ರಮೇಶ್‌ ಅವರ ವರ್ಚಸ್ಸು ನಿರ್ಲಕ್ಷಿಸುವುದು ಕಷ್ಟಕರವಾಗಿದೆ.

ಈ ಕ್ಷೇತ್ರದ ಇನ್ನೊಂದು ಪ್ರಬಲ ಕುಟುಂಬ ಜೊಲ್ಲೆ ಕುಟುಂಬದಿಂದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿ ಕ್ಷೇತ್ರದಿಂದ ಬಿಜೆಪಿಗೆ ಸ್ಪರ್ಧಿಸಲಿದ್ದಾರೆ. ಅವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದಾರೆ. ಅಲ್ಲದೇ ಕತ್ತಿ ಕುಟುಂಬದಿಂದ 2009-2014ರ ಅವಧಿಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಮೇಶ ಕತ್ತಿ ಅವರು ಈ ಬಾರಿ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸುತ್ತಿದ್ದರೆ, ಅವರ ಸೋದರಳಿಯ ನಿಖಿಲ್‌ ಕತ್ತಿ (ಉಮೇಶ್‌ ಕತ್ತಿಯವರ ಮಗ) ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಉಮೇಶ್‌ ಕತ್ತಿ ಎಂಟು ಬಾರಿ ಶಾಸಕರು ಹಾಗೂ ಆರು ಬಾರಿ ಸಚಿವರಾಗಿದ್ದರು.

ಟಿಕೆಟ್‌ ನಿರಾಕರಣೆಯಿಂದಾಗಿ ಬಿಜೆಪಿ ತೊರೆದ ನಂತರ ಲಕ್ಷಣ ಸವದಿ ಅವರು ಕೇಸರಿ ಪಕ್ಷ, ವಿಶೇಷವಾಗಿ ರಮೇಶ್‌ ಜಾರಕಿಹೊಳಿಯಿಂದ ಆದ ಅವಮಾನದ ಸೇಡು ತೀರಿಸಿಕೊಳ್ಳಲು ಅಥಣಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಈ ಕ್ಷೇತ್ರದಲ್ಲಿ ಮಹೇಶ್‌ ಕುಮಟಳ್ಳಿ ಅವರನ್ನು ಎದುರಿಸಬೇಕಾಗಿದೆ. ಈಗ ಬಿಜೆಪಿ ನಾಮನಿರ್ದೇಶಿತ ರಮೇಶ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರಂತಹ ಕೆಲವು ಕಾಂಗ್ರೆಸ್ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇಬ್ಬರೂ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರೂ ವೈಯಕ್ತಿಕ ದ್ವೇಷವನ್ನು ಇತ್ಯರ್ಥಪಡಿಸಿಕೊಳ್ಳಲು ಪರಸ್ಪರರನ್ನು ಸೋಲಿಸಲು ಹವಣಿಸುತ್ತಿದ್ದಾರೆ. ಒಟ್ಟಾರೆ ಈ ಭಾರಿ ಬೆಳಗಾವಿ ಜಿಲ್ಲೆ ಕಾಂಗ್ರೆಸ್‌ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟಿದ್ದು, ಯಾವ ಪಕ್ಷ ಬಹುಮತ ಸಾಧಿಸಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.///////