Belagavi News In Kannada | News Belgaum

ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಸಿಗಲಿದೆ: ಜಗದೀಶ್ ಶೆಟ್ಟರ್

ಧಾರವಾಡ: ಬಿಜೆಪಿ  ಈಗ ಯಾರ ಕೈಯಲ್ಲಿ ಇದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಇದರಿಂದ ಉಳಿದ ಸಮಯದಾಯದವರು ನೊಂದಿದ್ದಾರೆ. ಇದಕ್ಕೆ ತಕ್ಕ ಪಾಠ ಬಿಜೆಪಿಗೆ ಚುನಾವಣೆಯಲ್ಲಿ ಸಿಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು,  ಮುಂದೆಯೂ ಲಿಂಗಾಯತ ಅಭ್ಯರ್ಥಿಯನ್ನೇ ಸಿಎಂ ಮಾಡುತ್ತೇವೆ ಎಂದು ಹೇಳುವ ಧೈರ್ಯ ಬಿಜೆಪಿಯವರಿಗೆ ಇದೆಯಾ ಎಂದು ಪ್ರಶ್ನೆ ಮಾಡಿದ ಅವರು, ಲಿಂಗಾಯತ ಸಮುದಾಯ ಹೊರಗಿಟ್ಟು ಅದರ ಬೆಂಬಲ ಇಲ್ಲದೇ ಬಿಜೆಪಿಯವರು ಸರ್ಕಾರ ರಚನೆ ಮಾಡಲು ಹೊರಟಿದ್ದಾರೆ. ಅವಸರವೇ ಬಿಜೆಪಿಗೆ ಅಪಘಾತವನ್ನುಂಟು ಮಾಡಲಿದೆ ಎಂದರು.
ರಾಜ್ಯದಲ್ಲಿ 25 ಸಂಸದರಿದ್ದರೂ ಪ್ರಹ್ಲಾದ್ ಜೋಶಿ ಒಬ್ಬರನ್ನೇ ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ಮಾಡಲಾಗಿದೆ. ನಾರಾಯಣಸ್ವಾಮಿ ದಲಿತ ಜನಾಂಗದವರು ಅವರು ರಾಜ್ಯಮಂತ್ರಿಯಾಗಿದ್ದಾರೆ. ಶೋಭಾ ಕರಂದ್ಲಾಜೆ ಒಕ್ಕಲಿಗರು ಅವರು ಕೂಡ ರಾಜ್ಯಮಂತ್ರಿಯಾಗಿದ್ದಾರೆ. ಲಿಂಗಾಯತ ಸಮಾಜದ ಭಗವಂತ ಖೂಬಾ ಹಾಗೂ ಸುರೇಶ್ ಅಂಗಡಿ ಯವರನ್ನೂ ರಾಜ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಇಲ್ಲೇ ತಾರತಮ್ಯ ಎದ್ದು ಕಾಣುತ್ತಿದೆ ಎಂದು ಹೇಳಿದರು.
ವಿನಯ್ ಕುಲಕರ್ಣಿ ಅವರಿಗೆ ನೇರವಾಗಿ ಬಂದು ಪ್ರಚಾರ ಮಾಡಲು ಆಗುತ್ತಿಲ್ಲ. ಅವರ ಮೇಲೆ ದೊಡ್ಡ ಷಡ್ಯಂತ್ರವೇ ನಡೆದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರ ಬೆಂಬಲಿಗರಿಗೆ ಪ್ರಚಾರ ಮಾಡುವ ಹಕ್ಕಿದೆ. ಆದರೆ ಅವರ ಬೆಂಬಲಿಗರ ಮೇಲೂ ಐಟಿ ದಾಳಿ ನಡೆಸಿ ಹೆದರಿಸುವ ತಂತ್ರ ನಡೆದಿದೆ. ಇದು ಬಹಳ ದಿನ ನಡೆಯುವುದಿಲ್ಲ. ಕೇಂದ್ರದಲ್ಲಿ ಅಧಿಕಾರ ಇದೆ ಎಂದು ಇಲ್ಲಿನ ಕೇಂದ್ರ ಸಚಿವರು ಈ ರೀತಿ ದಾಳಿ ಮಾಡಿಸುತ್ತಿದ್ದಾರೆ. ಇದನ್ನು ಮೆಟ್ಟಿ ನಿಲ್ಲುವ ಶಕ್ತಿ ನಮಗಿದೆ. ಇದೆಲ್ಲದಕ್ಕೂ ಮೇ.13 ರಂದು ಜನ ಉತ್ತರ ಕೊಡುತ್ತಾರೆ ಎಂದು ಶೆಟ್ಟರ್ ಹೇಳಿದರು.
ನಿನ್ನೆ ನಾನು ರೋಣ, ಹಾವೇರಿ, ಗಜೇಂದ್ರಗಡ ಸೇರಿದಂತೆ ಹಲವು ಕಡೆ ಪ್ರಚಾರ ಮಾಡಿದ್ದೇನೆ. ಮಧ್ಯಾಹ್ನ ಉರಿಬಿಸಿಲಿನಲ್ಲೂ ಜನ ಸೇರಿದ್ದರು. ಇದನ್ನು ನೋಡಿದರೆ ನಮಗೆ ಉತ್ತಮ ಬೆಂಬಲ ಸಿಗುತ್ತಿದೆ. ಬಿಜೆಪಿಯಲ್ಲಿ ನನಗೆ ಅಪಮಾನ ಮಾಡಿದ್ದಕ್ಕೆ ಹೊರ ಬಂದಿದ್ದೇನೆ. ನಾನು ಕಟ್ಟಿದ ಮನೆಯಿಂದ ನನ್ನನ್ನು ಹೊರ ಹಾಕುವ ಕೆಲಸ ನಡೆಯಿತು ಎಂದರು.//////