Belagavi News In Kannada | News Belgaum

ಶೆಟ್ಟರ್‌ ವಿಷಯದಲ್ಲಿ ಮಾತನಾಡಲು ಮಠಾಧೀಶರಿಗೆ ಧೈರ್ಯವಿಲ್ಲ

 

ಹುಬ್ಬಳ್ಳಿ: ‘ಲಿಂಗಾಯತ ವಿಚಾರ ಬಂದಾಗಲೆಲ್ಲ ಲಿಂಗಾಯತ ಮಠದ ಸ್ವಾಮೀಜಿಗಳು ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ಆದರೆ, ಜಗದೀಶ ಶೆಟ್ಟರ್‌ ವಿಷಯದಲ್ಲಿ ಮಾತನಾಡಲು ಧೈರ್ಯವಿಲ್ಲದೆ ಮೌನವಾಗಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಟೀಕಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫಲಾಪೇಕ್ಷೆಯಲ್ಲಿರುವ ಮಠಾಧೀಶರು, ಅದನ್ನು ತಪ್ಪಿಸಿಕೊಳ್ಳಲು ಸಿದ್ಧವಿಲ್ಲ. ಅವರು ಎಲ್ಲ ಸಂದರ್ಭದಲ್ಲಿಯೂ ನ್ಯಾಯಪರವಾಗೇನೂ ನಿಂತಿಲ್ಲ. ಮುಂದೆ ಯಾವ ಪಕ್ಷ ಅಧಿಕಾರ ಬರುತ್ತದೆಯೋ ಏನೋ ಎಂದು ತಿಳಿಯದ ಅವರು, ಶೆಟ್ಟರ್‌ಗೆ ಆದ ಅನ್ಯಾಯದ ಕುರಿತು ಧ್ವನಿ ಎತ್ತದೆ ಮೌನಕ್ಕೆ ಜಾರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಲಿಂಗಾಯತರನ್ನು ಕಡೆಗಣನೆ ಮಾಡಲಾಗುತ್ತದೆ ಎಂದು‌ ಶೆಟ್ಟರ್ ಪ್ರಾಮಾಣಿಕವಾಗಿ ಹೇಳಿಕೆ ನೀಡಿದ್ದಾರೆ. ಬಿ.ಎಲ್‌. ಸಂತೋಷ ವಿರುದ್ಧ ಮಾತನಾಡಿದ ಏಕೈಕ ವ್ಯಕ್ತಿ ಶೆಟ್ಟರ್‌ ಆಗಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿ ಟಾರ್ಗೆಟ್‌ ಮಾಡುತ್ತಿದೆ. ಶೆಟ್ಟರ್ ತುಂಬಾ ಪ್ರಬಲರು ಅಂತಲ್ಲ. ಬಿಜೆಪಿ ವಿರುದ್ಧ ಮಾತನಾಡಿದವರನ್ನು ಸೋಲಿಸಿ, ಎಲ್ಲರಿಗೂ ಸಂದೇಶ ರವಾನಿಸಬೇಕೆನ್ನುವುದು ಆ ಪಕ್ಷದ ವರಿಷ್ಠರ ಉದ್ದೇಶ. ಈ ಬಾರಿ ಶೆಟ್ಟರ್‌ ಗೆದ್ದೇ ಗೆಲ್ಲುತ್ತಾರೆ. ಅವರನ್ನು ಕಾಂಗ್ರೆಸ್ ಎಂದೂ ಕೈ ಬಿಡಲ್ಲ. ಅಗ್ರನಾಯಕರಲ್ಲಿ ಅವರೂ ಒಬ್ಬರಾಗಿದ್ದು, ಮುಖ್ಯಮಂತ್ರಿ ಹುದ್ದೆಯ ಆಯ್ಕೆ ಪಟ್ಟಿಯಲ್ಲಿ ಅವರು ಸಹ ಇರಲಿದ್ದಾರೆ’ ಎಂದು ತಿಳಿಸಿದರು.

‘ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವ ಕುರಿತು ತಿಳಿಸುವ ಅಗತ್ಯವಿರಲಿಲ್ಲ. ಯೋಚನೆ ತಪ್ಪಿನಿಂದ‌ ಹಾಗೆ ಆಗಿದ್ದು, ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ’ ಎಂದರು.