Belagavi News In Kannada | News Belgaum

ಮುಸ್ಲಿಮರ ಓಲೈಕೆ ಸರಿಯಲ್ಲ: ಫಡ್ನವಿಸ್

ಹುಬ್ಬಳ್ಳಿ: ಬಜರಂಗದಳವನ್ನು ನಿಷೇಧಿಸುವ ಹೆಸರಿನಲ್ಲಿ ಮುಸ್ಲಿಮರನ್ನು ಓಲೈಸಲು ಹೊರಟಿರುವ ಕಾಂಗ್ರೆಸ್ ನೀತಿಯನ್ನು ಕರ್ನಾಟಕದ ಜನ ಒಪ್ಪುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳದ ಬಗ್ಗೆ ಕಾಂಗ್ರೆಸ್ ನವರ ಮನಸ್ಸಿನಲ್ಲಿದ್ದುದು ಈಗ ಹೊರಗೆ ಬಂದಿದೆ‌. ಭಾರತವನ್ನು ತುಕ್ಡೆ ತುಕ್ಡೆ ಮಾಡುತ್ತೇವೆ ಎನ್ನುವವರನ್ನು ಅವರು ಅಪ್ಪಿಕೊಳ್ಳುತ್ತಾರೆ. ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ ಎನ್ನುವ ಸಂಘಟನೆಯನ್ನು ನಿಷೇಧಿಸುವ ಮಾತಾಡುತ್ತಾರೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಮೋದಿ ಪರ ಅಲೆ ಇದೆ. ಇಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿದೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದರಿಂದ ಲಿಂಗಾಯತ ವೋಟ್ ಬ್ಯಾಂಕ್ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಇದರಿಂದ ಯಾವುದೇ ನಷ್ಟವಿಲ್ಲ. ಜನರು ಬಿಜೆಪಿಯ ಜತೆಗಿದ್ದಾರೆ. ಲಿಂಗಾಯತ ಸಮಾಜದ ಬಿ.ಎಸ್.ಯಡಿಯೂರಪ್ಪ, ಬಸವರಾಜ‌ ಬೊಮ್ಮಾಯಿ ಅವರಂತಹ ದೊಡ್ಡ ನಾಯಕರು ಪಕ್ಷದಲ್ಲಿದ್ದಾರೆ. ಭ್ರಷ್ಟ ಲಿಂಗಾಯತ ಮುಖ್ಯಮಂತ್ರಿ ಎಂದು ಲಿಂಗಾಯತರನ್ನು ಅವಹೇಳನ ಮಾಡಿದ ಪಕ್ಷಕ್ಕೆ ಶೆಟ್ಟರ್ ಹೋಗಿದ್ದಾರೆ. ಈ ಬಗ್ಗೆ ಅವರು ಜನತೆಗೆ ಉತ್ತರಿಸಬೇಕು’ ಎಂದರು.