Belagavi News In Kannada | News Belgaum

ನೀಟ್ ಪರೀಕ್ಷೆ: ವೇಳಾಪಟ್ಟಿ ಬದಲಿಸಿಕೊಳ್ಳಲು ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ಇದೇ ಭಾನುವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಾಗಿ ಹಮ್ಮಿಕೊಂಡಿರುವ ರೋಡ್ ಶೋದಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಈ ಕಾರಣಕ್ಕೆ ಪ್ರಧಾನಿಗಳು ರೋಡ್ ಶೋ ವೇಳಾಪಟ್ಟಿಯನ್ನು ಬದಲಿಸಿಕೊಳ್ಳಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಭಾನುವಾರ ನೀಟ್ ಪರೀಕ್ಷೆಯ ನಡುವೆಯೂ ಪ್ರಧಾನಿ ಮೋದಿ ರೋಡ್ ಶೋ ವಿಚಾರದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರಿಂದ ಬರುತ್ತಿರುವ ಟೀಕೆಗಳ ಬಗ್ಗೆ ನನಗೆ ಮಾಹಿತಿ ಇದೆ. ರೋಡ್ ಶೋ ಗಳಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂದರು.

ಬಿಜೆಪಿಗ ನಾಡಿನ ಜನರ ಸಮಸ್ಯೆಗಳಿಗಿಂತ ಅಧಿಕಾರ ಹಿಡಿಯೋದೆ ಮುಖ್ಯವಾಗಿದೆ. ಅಧಿಕಾರಕ್ಕೋಸ್ಕರ ಅವರು ಏನು ಬೇಕಾದರೂ ಮಾಡ್ತಾರೆ. ಜನಸಾಮಾನ್ಯರ ಬದುಕಿನ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಏನಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.

ಸಾರ್ವಜನಿಕ ವಲಯದಲ್ಲಿ ಇದು ಸರಿನಾ, ತಪ್ಪಾ ಚರ್ಚೆ ನಡೆದರೂ ಅದನ್ನು ಬಿಜೆಪಿಯವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ದೇಶದ ಪ್ರಧಾನಿಯಾಗಿ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡೋದು ಸರಿಯಲ್ಲ. ನೀಟ್ ಪರೀಕ್ಷೆಗೆ ತೊಂದರೆ ಕೊಡಬಾರದು. ಮಕ್ಕಳ ಭವಿಷ್ಯದ ಬಗ್ಗೆ ಅವರಿಗೆ ಏನಾದರೂ ಕಿಂಚಿತ್ ಕಾಳಜಿ ಇದ್ದರೆ ರೋಡ್ ಶೋ ಮುಂದಕ್ಕೆ ಹಾಕುವುದು ಒಳ್ಳೆಯದು ಎಂದರು.