Belagavi News In Kannada | News Belgaum

ವಾಯುಸೇನೆಯ ವಿಮಾನ ಪತನ: ಮೂವರ ದುರ್ಮರಣ

ಜೈಪುರ್: ಭಾರತೀಯ ವಾಯುಸೇನೆಯ ಮಿಗ್-21 ಯುದ್ಧ ವಿಮಾನ ಪತನಗೊಂಡು ಮೂವರು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಹನುಮಾನ್‍ಗಢದಲ್ಲಿ ಸೋಮವಾರ ನಡೆದಿದೆ.

ಪೈಲಟ್ ಮತ್ತು ಸಹ ಪೈಲಟ್ ಸಕಾಲದಲ್ಲಿ ವಿಮಾನದಿಂದ ಜಿಗಿದು, ಪ್ಯಾರಾಚೂಟ್ ಸಹಾಯದಿಂದ ಸುರಕ್ಷಿತವಾಗಿ ಇಳಿದಿದ್ದಾರೆ. ಆದರೆ ವಿಮಾನ ಮನೆಯ ಮೇಲೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂರತ್‍ಗಢದಿಂದ ವಿಮಾನ ಟೇಕಾಫ್ ಆಗಿತ್ತು. ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದೆ. ವಿಮಾನ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆ. 4 ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್  ಪತನವಾಗಿತ್ತು. ಈ ವೇಳೆ ಓರ್ವ ಮೃತ ಪಟ್ಟು, ಇಬ್ಬರು ಪೈಲಟ್‍ಗಳು ಗಾಯಗೊಂಡಿದ್ದರು.//////