ಬೆಂಗಳೂರು:ಬಸ್ ಇಲ್ಲದೆ ಪರದಾಡಿದ ಪ್ರಯಾಣಿಕರು

ಬೆಂಗಳೂರು: ರಾಜ್ಯದಲ್ಲಿ ಬುಧವಾರ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಊರಿಗೆ ತೆರಳಲು ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿರುವ ನಾಗರಿಕರು ಬಸ್‌ಗಳಿಲ್ಲದೇ ಪರದಾಡುತ್ತಿದ್ದಾರೆ.
ನಗರದ ಮೂರು ಟರ್ಮಿನಲ್‌ಗಳಲ್ಲೂ ಅಪಾರ ಸಂಖ್ಯೆ ಪ್ರಯಾಣಿಕರು ಇದ್ದಾರೆ. ನಾಲ್ಕೈದು ಗಂಟೆ ಕಾದರೂ ಬಸ್‌ಗಳು ಬರುತ್ತಿಲ್ಲ. ಬಂದ ಬಸ್‌ಗಳಲ್ಲೂ ಊರಿಗೆ ತೆರಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಬಸ್‌ಗಳು ಭರ್ತಿಯಾಗುತ್ತಿವೆ.
ಕೆಎಸ್ಆರ್‌ಟಿಸಿಯು ಚುನಾವಣೆ ಕರ್ತವ್ಯಕ್ಕೆ 3700 ಬಸ್‌ಗಳನ್ನು ನಿಯೋಜಿಸಿದೆ. ಇದರಿಂದ ಬೆಂಗಳೂರಿನಿಂದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ.
ಬಳ್ಳಾರಿ, ಸಿರಗುಪ್ಪ, ಸಿಂಧನೂರು, ದೇವದುರ್ಗ, ಸುರಪುರ, ಶಹಾಪುರ, ಲಿಂಗಸೂರು, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಕಡೆಗೆ ಬಸ್‌ಗಳಿಲ್ಲದೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಕೆಲವು ಪ್ರಯಾಣಿಕರು ಊರಿಗೆ ತೆರಳು ಸಾಧ್ಯವಾಗದೇ ಮನೆಗೆ ವಾಪಸ್ ತೆರಳಿದರು. ರಾಜ್ಯದ ಬೇರೆ ಬೇರೆ ಭಾಗಕ್ಕೆ 200 ಬಿಎಂಟಿಸ್ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೂ ಪ್ರಯಾಣಕರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದರು.