ಅತಂತ್ರ ವಿಧಾನಸಭೆ ರಚನೆ ಸುಳಿವು:ಯಾರ ಕಡೆಗೆ ಜೆಡಿಎಸ್ ಒಲವು?

ಅತಂತ್ರ ವಿಧಾನಸಭೆ ರಚನೆ ಸುಳಿವು:ಯಾರ ಕಡೆಗೆ ಜೆಡಿಎಸ್ ಒಲವು?
ಎಚ್.ಮಾರುತಿ
ರಾಜ್ಯ ವಿಧಾನಸಭೆಯೆ 224 ಕ್ಷೇತ್ರಗಳಿಗೆ ನಡೆದ ಮತದಾನ ಅಂತ್ಯಗೊಂಡಿದ್ದು ಶನಿವಾರದವರೆಗೆ ಫಲಿತಾಂಶವನ್ನು ಕಾಯಬೇಕಾಗಿದೆ. ಸರಾಸರಿ ಶೇ.66ರಷ್ಟು ಮತದಾನವಾಗಿದ್ದುಮತದಾರ ಯಾವ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾನೆ ಎನ್ನುವುದು ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಾಗಿದೆ.
ಈ ಚುನಾವಣೆ ಹತ್ತು ಹಲವು ಕಾರಣಗಳಿಗಾಗಿ ದೇಶದ ಗಮನ ಸೆಳೆದಿದ್ದು ಸುಳ್ಳಲ್ಲ. ರಾಜ್ಯದ ಮಟ್ಟಿಗೆ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಿರ್ಣಾಯಕವಾದ ಚುನಾವಣೆಯಾಗಿತ್ತು. ದಕ್ಷಿಣ ಭಾರತದ ಪಾಲಿಗೆ ಕರ್ನಾಟಕ ಬಿಜೆಪಿಗೆ ಹೆಬ್ಬಾಗಿಲು. ಇಲ್ಲಿ ಬಿಟ್ಟರೆ ಉಳಿದ ಐದು ರಾಜ್ಯಗಳಲ್ಲಿ ಬಿಜೆಪಿ ಬಲ ಕ್ಷೀಣ. ಹಾಗಾಗಿ ಬಿಜೆಪಿ ಪಾಲಿಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಮಹತ್ವದ ಹೆಜ್ಜೆಯಾಗಿತ್ತು.
ದೇಶಾದ್ಯಂತ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ಇಲ್ಲಿ ಮತ್ತೆ ಅಧಿಕಾರ ಹಿಡಿಯುವ ಅನಿವಾರ್ಯತೆ ಎದುರಾಗಿತ್ತು. ಅಧಿಕಾರ ಹಿಡಿಯುವ ಸಾಧ್ಯತೆಗಳಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಲವನ್ನು ಹೆಚ್ಚಿಸಿಕೊಳ್ಳಲು ಈ ಚುನಾವಣೆ ಕೈ ಪಾಳೆಯಕ್ಕೆ ನಿರ್ಣಾಯಕ. ಇನ್ನು ಜೆಡಿಎಸ್ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಎನ್ನುವ ಹಂತ ತಲುಪಿದ್ದ ಚುನಾವಣೆ. ಬಹುಮತ ಗಳಿಸುತ್ತೇವೆ ಎನ್ನುವುದು ಭಾಷಣಕ್ಕೆ ಮಾತ್ರ ಎನ್ನುವುದು ಆ ಪಕ್ಷದ ನಾಯಕರಿಗೆ ತಿಳಿಯದ ವಿಷಯವೇನಲ್ಲ. ಅತಂತ್ರ ವಿಧಾನಸಭೆ ರಚನೆಯಾದರೆ ಮಾತ್ರ ಅಧಿಕಾರ
ಗಿಟ್ಟಿಸಿಕೊಳ್ಳಬಹುದು ಎನ್ನುವುದು ಅವರ ತಂತ್ರ. ಅದಕ್ಕಾಗಿಯಾದರೂ ಅವರು ಗರಿಷ್ಠ ಸ್ಥಾನಗಳನ್ನು ಗಳಿಸುವುದು ಅನಿವಾರ್ಯ. ಅಧಿಕಾರದಿಂದ ದೂರ ಉಳಿದರೆ ಪಕ್ಷ ಗಟ್ಟಿಯಾಗಿ ಉಳಿಯುವುದಿಲ್ಲ. ತಳಮಟ್ಟ ಮತ್ತು ರಾಜ್ಯಮಟ್ಟದಲ್ಲಿ ನಾಯಕರಾಗಲೀ ಕಾರ್ಯಕರ್ತರಾಗಲೀ ದೂರ ಸರಿಯುವುದು ಸಹಜ ಪ್ರಕ್ರಿಯೆ. ಹಾಗಾಗಿ ಅವರ ನಿರೀಕ್ಷೆ ಜಾರಿ ತುಪ್ಪಕ್ಕೆ ಬಿದ್ದಿದೆ ಎಂದು ಈ ಕ್ಷಣಕ್ಕೆ ಅವರು ಖುಷಿಪಡುವ ಸಾಧ್ಯತೆಗಳಿವೆ.
ಈವರೆಗಿನ ಸಮೀಕ್ಷೆಗಳು ಅತಂತ್ರ ವಿಧಾನಸಭೆಯತ್ತ ಬೊಟ್ಟು ಮಾಡಿ ತೋರಿಸುತ್ತಿವೆ. ಚುನಾವಣೆಗೂ ಮುನ್ನವೂ ಇದೇ ಪರಿಸ್ಥಿತಿ ಇತ್ತು ಎನ್ನುವುದು ಸುಳ್ಳಲ್ಲ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರ ಇನ್ನಿಲ್ಲದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿತ್ತು. ಸ್ವಪಕ್ಷೀಯರೇ ಈ ಸರಕಾರದ ವಿರುದ್ಧ ಒಳೊಳಗೆ ತಿರುಗಿ ಬಿದ್ದು ವರಿಷ್ಠರಿಗೆ ಹತ್ತಾರು ಬಾರಿ ದೂರು ಸಲ್ಲಿಸಿದ್ದರು. ಬೊಮ್ಮಾಯಿ ಅವರನ್ನು ಬದಲಾಯಿಸುವ ಚಿಂತನೆಗಳು ನಡೆದಿದ್ದರೂ ಕಾರ್ಯರೂಪಕ್ಕೆ ತರುವುದು ಜೇನುಗೂಡಿಗೆ
ಕೈ ಹಾಕಿದಂತೆ ಎನ್ನುವುದನ್ನು ದೆಹಲಿ ನಾಯಕರು ಮನಗಂಡಿದ್ದರು.
ಇದುವರೆಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯ ಬೆನ್ನುಮೂಳೆಯಾಗಿದ್ದರು ಎನ್ನುವುದು ಅತಿಶಯೋಕ್ತಿಯೇನಲ್ಲ. ಸ್ವತಃ ನಾಲ್ಕು ದಶಕಗಳ ಕಾಲ ಬೆವರು ಸುರಿಸಿದರೂ 113ರ ಗಡಿ ದಾಟಿಸಲು ಅವರಿಗೇ ಸಾಧ್ಯವಾಗಲಿಲ್ಲ ಎಂದರೆ ಮತ್ತಾರಿಗೆ ಸಾಧ್ಯವಾದೀತು? ಅವರ ನಾಯಕತ್ವ ಮತ್ತು ಜನಪ್ರಿಯತೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೇ 103 ತಲುಪಲು ಮಾತ್ರ ಸಾಧ್ಯವಾಗಿತ್ತು. ಇನ್ನು ಈಗ ಅವರು ತೆರೆಮರೆಗೆ ಸರಿದಿದ್ದು, ಪಕ್ಷದ ಪಾಲಿಗೆ ಅವರು
ಕೇವಲ ಭಾಷಣದ ಸರಕಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಬಹುಮತ ಗಳಿಸುವುದು
ಗಗನ ಕುಸುಮವೇ ಸರಿ! ಸ್ವತಃ ಶಿಕಾರಿಪುರದಲ್ಲಿ ತಮ್ಮ ಮಗ ಉತ್ತರಾಧಿಕಾರಿ ಎಂದು ಘೋಷಿಸುವ ಸ್ವಾತಂತ್ರ್ಯವೂ ಅವರಿಗೆ ಇರಲಿಲ್ಲ. ಈ ಕಾರಣಗಳಿಗಾಗಿ ಕಳೆದ ಎರಡು ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿಯಿಂದ ಹಂತ ಹಂತವಾಗಿ ದೂರ ಸರಿಯುತ್ತಿತ್ತು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನೇಮಕ ಮಾಡುತ್ತಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದು ಪೆಟ್ಟು ನೀಡಿತ್ತು. ಈ ಮಾಹಿತಿಯನ್ನು ಅವರಿಗೆ ಒದಗಿಸಿದ್ದೇ ಬಿಜೆಪಿಯ ಮುಖಂಡರು ಎನ್ನುವುದು ಗುಟ್ಟಾಗಿ
ಉಳಿದಿರಲಿಲ್ಲ. ಪಕ್ಷದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೈ ಹಿಡಿದಿದ್ದು ಆ ಸಮುದಾಯದೊಳಗೆ ಎಲ್ಲೋ ಒಂದು ಕಡೆ ನಮ್ಮನ್ನು ಕಡೆಗಳಿಸಲಾಗುತ್ತಿದೆ ಎಂಬ ಭಾವನೆ ಮೂಡಿಸಿತ್ತು. ಶೆಟ್ಟರ್ ಜಾತಿ ಅಥವಾ ಮಾಸ್ ಲೀಡರ್ ಅಲ್ಲದಿರಬಹುದು, ತಮ್ಮ ಸಮುದಾಯ ಅಥವಾ ತಮ್ಮ ಪ್ರಾಂತದ ನಾಯಕನೊಬ್ಬನನ್ನು ಕಡೆಗಳಿಸಲಾಗುತ್ತಿದೆ ಎಂಬ ಭಾವನೆ ಮೂಡಿದಾಗ ಸಹಜವಾಗಿ ಅಲ್ಲಿನ ಜನರಿಗೆ ಆಕ್ರೋಶ ವ್ಯಕ್ತವಾಗುವುದು ನಿಶ್ಚಿತ. ಶೆಟ್ಟರ್ ಅವರ ವಿಷಯದಲ್ಲೂ ಇದೇ ಆಗಿತ್ತು. ಬಿಜೆಪಿ ಜಾಹಿರಾತುಗಳಿಗಿಂತ ಕಾಂಗ್ರೆಸ್ ಜಾಹಿರಾತುಗಳು ಮತ್ತು ಭಾಷಣಗಳು ಹೆಚ್ಚು ಪರಿಣಾಮಕಾರಿಯಾಗಿದ್ದವು. ಬೆಲೆ ಏರಿಕೆ ಮತ್ತು ಉಚಿತ ಕೊಡುಗೆಗಳನ್ನು ಒಂದು ತಿಂಗಳ ಹಿಂದೆಯೇ ಘೋಷಿಸಿದ್ದು ಆ ಪಕ್ಷಕ್ಕೆ ಆಗಸದ ಅಂಚಿನಲ್ಲಿ ಬೆಳ್ಳಿರೇಖೆಯನ್ನು ಮೂಡಿಸಿದ ಅನುಭವವಾಗಿತ್ತು. ಇದು ತಳಮಟ್ಟದಲ್ಲಿ ಮತದಾರರ ಮನಮಟ್ಟುವಲ್ಲಿ ಯಶಸ್ವಿಯಾಗಿತ್ತು.
ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಉಚಿತವಾಗಿ ಏನನ್ನೂ ಕೊಡುವುದಿಲ್ಲ. ಇದರಿಂದ ಆರ್ಥಿಕತೆ ಕುಸಿಯುತ್ತದೆ ಎಂದು ಅಂಕಿಅಂಶಗಳ ಮೂಲಕ ವಾದಿಸುತ್ತಲೇ ಬಂದಿತ್ತು. ಇಂತಹ ವಿಷಯಗಳು ಗ್ರಾಮೀಣ ಪ್ರದೇಶಗಳಲ್ಲಿ ವರ್ಕ್ ಔಟ್ ಆಗುವುದಿಲ್ಲ. ಕೊನೆಗೆ ಉಚಿತ ಕೊಡುಗೆಗಳ ಘೋಷಣೆಗೆ ಬಿಜೆಪಿ ಶರಣಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತಾದರೂ ಆ ವೇಳೆಗೆ ಕಾಲ ಮಿಂಚಿಹೋಗಿತ್ತು. ಕಾಂಗ್ರೆಸ್‌ಗೂ ಮನ್ನ ಜೆಡಿಎಸ್ ತನ್ನ ಪಂಚರತ್ನ ಯೋಜನೆಗಳಲ್ಲಿ ಇದೇ ಘೋಷಣೆಗಳನ್ನು ಮಾಡಿತ್ತಾದರೂ ಆ ಪಕ್ಷ ಬಹುಮತ ಗಳಿಸುವುದಿಲ್ಲ ಎಂಬ ಕಾರಣಕ್ಕೆ ಗಮನ ಸೆಳೆಯಲಿಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಧನಾತ್ಮಕ
ಅಂಶಗಳೇ ಇರಲಿಲ್ಲ. ಕರಾವಳಿ ಕರ್ನಾಟಕದಲ್ಲಿ ಸ್ಥಾನಗಳ ಹಂಚಿಕೆಯಲ್ಲಿ ಆದ ವ್ಯತ್ಯಾಸಗಳು, ಹಿಜಾಬ್ ಹಲಾಲ್ ಗಲಾಟೆಗಳನ್ನು ಕುರಿತು ಅಲ್ಲಿನ ಕೆಲವು ಸಮುದಾಯಗಳು ಒಳಗಿಂದೊಳಗೆ ಅಸಮಾಧಾನ ಹೊಂದಿದ್ದವು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಮತಗಳಿಕೆಯಲ್ಲಿ ಶೇ.ವಾರು ಸುಧಾರಿಸಿಕೊಳ್ಳಬಹುದೇ ಹೊರತು ಗೆಲುವು ಸಾಧಿಸುವ ಸಾಧ್ಯತೆಗಳು ಕ್ಷೀಣ.
ಉತ್ತರ ಕರ್ನಾಟಕದಲ್ಲಿ ಈಗಾಗಲೇ ಹೇಳಿದಂತೆ ವೀರಶೈವ ಸಮುದಾಯ ತಿರುಗಿ ಬಿದ್ದಿದ್ದು, ಮತದಾನದಲ್ಲಿ ಮುಯ್ಯಿಗೆ ಮುಯ್ಯಿ ನೀಡಿವೆ. ಹಾಗೆಂದು ಅಲ್ಲಿನ ಮುಖಂಡರೇ ಹೇಳುತ್ತಾರೆ. ಪಕ್ಷಕ್ಕೆ ಹಿನ್ನೆಡೆ ಖಚಿತ ಎಂಬ ಮಾಹಿತಿಯ ಆಧಾರದ ಮೇಲೆಯೇ ಪ್ರಧಾನಿ ಮೋದಿ ಮೇಲಿಂದ
ಮೇಲೆ ಪ್ರಚಾರ ಮತ್ತು ರೋಡ್ ಶೋಗಳನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಎತ್ತಿದ ಪ್ರಶ್ನೆಗಳು ಮತ್ತು ಜಾಹಿರಾತುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುಲ್ಲಿ ಸಾಫಲ್ಯ ಕಂಡಿದ್ದವು. ಕಾಂಗ್ರೆಸ್ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವುದರ ಬದಲಾಗಿ ಹಿಂದುತ್ವದ ಮೊರೆ ಹೋಗಿದ್ದು ವೈಫಲ್ಯಗಳನ್ನು ಒಪ್ಪಿಕೊಂಡಿದ್ದಕ್ಕೆ ಸಾಕ್ಷಿಯಾಗಿತ್ತು.
ಹಾಗೆಂದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಭಾವಿಸಬೇಕಿಲ್ಲ. ಆದರೆ ಮೊದಲ ಸ್ಥಾನದಲ್ಲಿ ಕಾಂಗ್ರೆಸ್ ನಿಲ್ಲುತ್ತದೆ. ಬಿಜೆಪಿ ಎರಡನೇ ಸ್ಥಾನಕ್ಕೆ
ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಎಂದಿನಂತೆ ಜೆಡಿಎಸ್ ಮೂರನೇ ಸ್ಥಾನದಲ್ಲಿಯೇ ಇರುತ್ತದೆ. ಆದರೆ ಸರಕಾರ ಯಾರು ರಚನೆ ಮಾಡುತ್ತಾರೆ ಎಂಬ ಪ್ರಶ್ನೆ ಏಳುತ್ತದೆ. ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರಕಾರಕ್ಕೆ ವೇದಿಕೆ ಸಿದ್ದಗೊಂಡಿದೆ ಎಂಬ ಖಚಿತ ಮಾಹಿತಿ ಇದೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಎಲ್ಲಿಯೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದ ಮೇಲೆ ಅಬ್ಬರಿಸಿ ಬೊಬ್ಬಿರಿಯಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ರಾಜಕಾರಣ ನಿಂತ ನೀರಲ್ಲ. ಸದಾ ಹರಿಯುತ್ತಿರುವ ಚಲನಶೀಲತೆಯನ್ನು ಹೊಂದಿರುವ ಗುಣ ಹೊಂದಿದೆ. ಮುಂದಿನ 48 ಗಂಟೆಗಳಲ್ಲಿ ಯಾವುದೇ ರೀತಿಯ ತಿರುವುಗಳನ್ನು ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ. ಮತ್ತೊಬ್ಬ ಧರ್ಮಸಿಂಗ್ ಲಭ್ಯವಾದರೆ ಜೆಡಿಎಸ್, ಕಾಂಗ್ರೆಸ್ ಜತೆಗೂ ಹೋಗಬಹುದು, ಅಥವಾ ಜೆಡಿಎಸ್ ಇಬ್ಭಾಗವಾಗಲೂಬಹುದು. ಫಲಿತಾಂಶದವರೆಗೂ
ಕಾಯೋಣ.