Belagavi News In Kannada | News Belgaum

ಡಿಕೆಶಿ ಗಡ್ಡಕ್ಕೆ ಕತ್ತರಿ!

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿಧಾನಸಭೆ ಚುನಾವಣೆಯ ನಂತರ ವಿರಾಮದ ಮೂಡ್‌ನಲ್ಲಿದ್ದು, ಗುರುವಾರ ಸ್ವಕ್ಷೇತ್ರ ಕನಕಪುರದಲ್ಲಿ ಕಾಲ ಕಳೆಯುತ್ತಿದ್ದಾರೆ.
ಚುನಾವಣೆ ಸಂದರ್ಭ ಶಿವಕುಮಾರ್ ಗಡ್ಡ ಬಿಟ್ಟಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿಯವರ ಕಾಟದಿಂದ ನಮ್ಮಣ್ಣ ಗಡ್ಡ ಬಿಟ್ಟಿದ್ದಾರೆ. ಮೇ 13ರಂದು ಅದಕ್ಕೆ ಉತ್ತರ ಸಿಗಲಿದೆ ಎಂದು ಸಂಸದ ಡಿ.ಕೆ. ಸುರೇಶ್‌ ಜನರ ಎದುರು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಆದರೆ ಫಲಿತಾಂಶಕ್ಕೆ ಮುನ್ನವೇ ಅವರು ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡರು. ಬೆಳಿಗ್ಗೆ ಕನಕಪುರದ ನಿವಾಸದಲ್ಲಿ ಕಟಿಂಗ್–ಗಡ್ಡ ಟ್ರಿಮ್‌ ಮಾಡಿಸಿಕೊಂಡ ಡಿಕೆಶಿ, ಸಹೋದರ ಸುರೇಶ್ ಜೊತೆಗೂಡಿ ಕನಕಪುರದ ಪ್ರಸಿದ್ಧ ವಾಸು ಹೋಟೆಲ್‌ನಲ್ಲಿ ದೋಸೆ ಸವಿದರು.
ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಶಿವಕುಮಾರ್ ‘ ಈ ಬಾರಿಯ ಚುನಾವಣೆಯಲ್ಲಿ ಕನಕಪುರ ಕ್ಷೇತ್ರ ರಾಜ್ಯಕ್ಕೆ ಮಾದರಿ ಆಗಿದೆ. ಇಲ್ಲಿನ ಪ್ರತಿ ಮತದಾರರು ತಾವೇ ಶಿವಕುಮಾರ್ ಆಗಿ ಪ್ರಚಾರ ಮಾಡುತ್ತ ಮತ ಹಾಕಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಕೋಡಿಹಳ್ಳಿಯಲ್ಲಿ ಇರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ. ಸಹೋದರರು ತಾಯಿ ಗೌರಮ್ಮರ ಕಾಲಿಗೆ ಬಿದ್ದು ನಮಸ್ಕರಿಸಿದರು. ತಾಯಿ ಜೊತೆ ಒಂದಿಷ್ಟು ಹೊತ್ತು ಮಾತನಾಡಿದರು. ಬಳಿಕ ಬೆಂಗಳೂರಿಗೆ ತೆರಳಿದರು.