Belagavi News In Kannada | News Belgaum

ಬಿಎಸ್‌ವೈ ಕಣ್ಣೀರಿನಲ್ಲಿ ಬಿಜೆಪಿಗೆ ಪೆಟ್ಟು: ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: ನಾನು ಹಿಂದೆ ಯಡಿಯೂರಪ್ಪನ ಕಣ್ಣೀರನಲ್ಲಿ ಬಿಜೆಪಿ ಸರ್ಕಾರಕೊಚ್ಚಿ ಹೋಗುತ್ತದೆ ಎಂದಿದ್ದೆ‌. ಇವತ್ತು ಆ ಪಕ್ಷದ ನಾಯಕರಿಗೆ ಅರಿವಾಗಿದೆ. ಅಲ್ಲದೆ ಅಧಿಕಾರ ಬಂದ ಸಂದರ್ಭದಲ್ಲಿ ಆ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ತಿನ್ನಬಾರದ ಪೆಟ್ಟು ತಿನ್ನುತ್ತಾರೆ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಹುಬ್ಬಳ್ಳಿ ತಾಲೂಕಿನ ನೂಲ್ವಿ ಹೊರವಲಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಅವತ್ತು ಒಬ್ಬ ವ್ಯಕ್ತಿ ಉದ್ದೇಶಿಸಿ ಮಾತಾಡಿರಲಿಲ್ಲ. ಯಡಿಯೂರಪ್ಪ ಎಲ್ಲರಿಗೂ ಬೇಕಾದ ನಾಯಕರು. ಅವತ್ತು ಎಲ್ಲ ಸಮಾಜದ ನಾಯಕರು ಯಡಿಯೂರಪ್ಪರನ್ನು ಮಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂದಿದ್ದರು. ಆದರೆ ಯಾವುದೋ ಕೆಟ್ಟ ಉದ್ದೇಶ, ಅಥವಾ ಸ್ವಾರ್ಥಕ್ಕೆ ತೆಗೆದುಕೊಂಡ ನಿರ್ಣಯ ಇಂದಿನ ಹೀನಾಯ ಪರಿಸ್ಥಿತಿಗೆ ಕಾರಣವಾಗಿದೆ ಎಂದರು.

ಹಿಂದೆ ಪರ್ಸೆಂಟೇಜ್ ಬಗ್ಗೆ ದುರಹಂಕಾರಿಯಾಗಿ ಮಾತನಾಡಿದ್ದರು. ಗುಂಡಾ ವೃತ್ತಿಯಲ್ಲಿ ದಾಳಿ ಮಾಡಿದ್ದರು. ಅದರ ಪರಿಣಾಮವೇ ಇಂದು ಕಾಡುತ್ತಿದೆ ಎಂದು ಸ್ವಾಮೀಜಿ ಹೇಳಿದರು. ಅಲ್ಲದೆ ಸ್ವಾಮೀಜಿ ಗಂಭಿರ ಹೇಳಿಕೆ ಮಾಡಿದಾಗ, ಚಿಂತನ‌ ಮಂಥನ ಮಾಡಬೇಕು. ಕೇಸರಿ ಪಡೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಖಾವಿಧಾರಿಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾವಿ ದಾರಿಗಳು ಪಾಠ ಮಾಡಿದ್ದರು, ಆದರೆ ಅವರು ಪಾಠವನ್ನು ಕಲಿಯಲಿಲ್ಲ. ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೆ ಬಿಜೆಪಿ‌ ಇಂದಿನ ಸ್ಥಿತಿಗೆ ಕಾರಣವಾಗಿದೆ. ಯಡಿಯೂರಪ್ಪ, ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್, ಕೆ.ಎಸ್‌.ಈಶ್ವರಪ್ಪ ಅವರನ್ನು ಕಡೆಗಣಸಿರೋದೆ ಇದಕ್ಕೆಲ್ಲ ‌ಕಾರಣ. ಪಕ್ಷ ಕಟ್ಟದ ವ್ಯಕ್ತಿ ಮಾತು ಕೇಳಬೇಕು ಅಂದರೆ ಏನು.? ಎಂದ ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಬಿ.ಎಲ್.ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವಾಗ ಹೇಗೆ ನಡೆಸಿಕೊಂಡರು ಎನ್ನುವ ವಿಚಾರ ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಚುನಾವಣೆ ‌ಒಂದೇ ಅಂತಾ ತಿಳಿದುಕೊಂಡಿದ್ದರು. ಜಗದೀಶ್ ಶೆಟ್ಟರ್, ಸವದಿಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು ಎಂದರು. ಹಾಗೆಯೆ ಬ್ರಾಹ್ಮಣ ವಿಚಾರವಾಗಿ ನಾನು ಆರು ತಿಂಗಳ ನಂತರ ಸುದ್ದಿಗೋಷ್ಠಿ ಮಾಡುತ್ತೇನೆ. ರಾಜ್ಯದಲ್ಲಿ ಏನಾಗಿದೆ ಅನ್ನುವ ದಾಖಲೆ ಇದೆ ಎಂದರು.

ಬ್ರಾಹ್ಮಣರ ಬಗ್ಗೆ ಮಾತನಾಡುವುದಕ್ಕೆ ನನಗೆ ಭಯ ಇಲ್ಲ. ನನಗೆ ಯಾರ ಅಂಕುಶವೂ ಇಲ್ಲ ಎಂದು ಸ್ವಾಮೀಜಿ ಗುಡುಗಿದರು. ರಾಜ್ಯದ ನಾಯಕರನ್ನು ಬಹಳ‌ ಕೆಟ್ಟ ರೀತಿಯಲ್ಲಿ ‌ನೋಡಿಕೊಂಡರು. ಹಾಗೆಯೆ ದಕ್ಷಿಣ ಭಾರತದ ಕುದುರೆಗಳನ್ನು ಕತ್ತೆ ಅಂದುಕೊಂಡಿದ್ದೇ ಇದಕ್ಕೆಲ್ಲ ಕಾರಣ ಎಂದರು.

ಕರ್ನಾಟಕದ ನಾಯಕರನ್ನು ಬಿಟ್ಟು ಏನಾದರೂ ಮಾಡುತ್ತೇನೆ ಅಂದುಕೊಂಡರು. ರಾಜ್ಯದ ಮತದಾರರು ಬುದ್ಧಿಗೇಡಿಗಳಾ? ರಾಷ್ಟ್ರ ನಾಯಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಅಲ್ಲದೆ ರಾಜ್ಯವನ್ನು ಸರಿಯಾದ ರೀತಿ ನಡೆಸುವ ವ್ಯಕ್ತಿ ಸಿಎಂ ಆಗಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.//////