ಬಿಜೆಪಿ ದುರಾಡಳಿತಕ್ಕೆ ತಕ್ಕ ಉತ್ತರ • ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ರಾಶಿಂಗೆ ಹೇಳಿಕೆ

ಹುಕ್ಕೇರಿ : ಹಣದ ಆಮಿಷ, ಕೋಮು ಭಾವನೆ ಪ್ರಚೋದಿಸಿ ಮತಗಳಿಸುವ ಬಿಜೆಪಿ ಯತ್ನ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ಅಭಿವೃದ್ದಿಗಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ರಾಜ್ಯದ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಶ್ರಮಿಸಲಿದೆ. ಗ್ಯಾರಂಟಿ ಯೋಜನೆಗಳ ಈಡೇರಿಕೆಗೆ ಸರ್ಕಾರದ ಮುಂದಾಗಲಿದೆ ಎಂದರು.
ಬೆಲೆ ಏರಿಕೆ, ದುರಾಡಳಿತ, ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಮತದಾರರು ಹಣದ ಆಮಿಷಕ್ಕೆ ಬಲಿಯಾಗದೇ ಅಭಿವೃದ್ಧಿಗೆ ಮತ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್‍ನ ಗ್ಯಾರಂಟಿ ಪ್ರಣಾಳಿಕೆಗೆ ಮೆಚ್ಚಿ ಪಕ್ಷಕ್ಕೆ ಬಹುಮತ ನೀಡಿದ್ದಾರೆ ಎಂದು ಅವರು ಹೇಳಿದರು.
ಬೆಳಗಾವಿ ದೊಡ್ಡ ಜಿಲ್ಲೆ. ಎರಡನೇ ರಾಜಧಾನಿ ಕೂಡ ಹೌದು. ಹೀಗಾಗಿ ಹೆಚ್ಚು ಸಚಿವ ಸ್ಥಾನಗಳು ಸಿಗುವ ಭರವಸೆ ಇದೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದದ್ದು ಖುಷಿಯಾಗಿದೆ. ದುರಾಡಳಿತ ವಿರುದ್ಧ ಹಾಗೂ ಕಾಂಗ್ರೆಸ್‍ನ ಪರ ಜನ ತೀರ್ಪು ನೀಡಿದ್ದಾರೆ. ಜಿಲ್ಲೆಯಲ್ಲಿನ ನಾಯಕರು ಮತ್ತು ಕಾರ್ಯಕರ್ತರ ಒಗ್ಗಟ್ಟೇ ಈ ಗೆಲುವಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಹಿರಿತನ, ಪಕ್ಷ ಸಂಘಟನೆ ಹಾಗೂ ಪರಿಶಿಷ್ಟ ಪಂಗಡ ವಾಲ್ಮೀಕಿ ಸಮುದಾಯದ ಆಧಾರದ ಮೇಲೆ ಸತೀಶ ಜಾರಕಿಹೊಳಿ, ಮಹಿಳಾ ಕೋಟಾದಲ್ಲಿ ಲಕ್ಷ್ಮೀ ಹೆಬ್ಬಾಳಕರ, ಪರಿಷತ್ ಕೋಟಾದಲ್ಲಿ ಪ್ರಕಾಶ ಹುಕ್ಕೇರಿ, ಬಿಜೆಪಿಗೆ ತಿರುಗೇಟು ನೀಡಲು ಹಾಗೂ ಲಿಂಗಾಯತ ಕೋಟಾದಲ್ಲಿ ಲಕ್ಷ್ಮಣ ಸವದಿ ಸಚಿವರಾಗುವ ವಿಶ್ವಾಸವಿದೆ ಎಂದು ರಾಶಿಂಗೆ ಹೇಳಿದರು.
ಬರುವ ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು. ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಅವರು ಹೇಳಿದರು.
ಮುಖಂಡರಾದ ಬಸವರಾಜ ಕೋಳಿ, ದಿಲೀಪ ಹೊಸಮನಿ, ಕೆ.ವೆಂಕಟೇಶ, ಆನಂದ ಕೆಳಗಡೆ, ಪ್ರಕಾಶ ಮೈಲಾಖೆ, ಕೆಂಪಣ್ಣಾ ಶಿರಹಟ್ಟಿ, ಲಕ್ಷ್ಮಣ ಹೂಲಿ, ಮಂಜು ಪಡದಾರ, ಶೀತಲ ಕಟ್ಟಿ, ಬಸವರಾಜ ಹವಾಲ್ದಾರ, ಆನಂದ ಖಾತೇದಾರ, ಬಸವರಾಜ ದೇವುಗೋಳ, ರಾಜು ಮೂಥಾ, ಗಂಗಾರಾಮ ಹುಕ್ಕೇರಿ, ಮಂಜು ಮರಡಿ, ಪಿಂಟು ಸೂರ್ಯವಂಶಿ ಮತ್ತಿತರರು ಉಪಸ್ಥಿತರಿದ್ದರು.