ಕುಸಿದ ಬಿಜೆಪಿ ಸಂಖ್ಯಾಬಲ : ಸಭಾಪತಿ ಹಾಗೂ ಉಪ ಸಭಾಪತಿ ಹುದ್ದೆ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.

ಬೆಂಗಳೂರು: ರಾಜ್ಯದಲ್ಲಿ ಸರಕಾರ ಬದಲಾಗುವ ಸನ್ನಿವೇಶದಲ್ಲಿ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸಂಖ್ಯಾಬಲ ಕುಸಿದಿರುವ ಆಧಾರದಲ್ಲಿ ಸಭಾಪತಿ ಹಾಗೂ ಉಪ ಸಭಾಪತಿ ಹುದ್ದೆ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಾಂತರ ಪರಿಣಾಮದಿಂದಾಗಿ ಪರಿಷತ್‌ನಲ್ಲಿ ಬಿಜೆಪಿಯ ಐದು ಸ್ಥಾನ ಕಡಿಮೆಯಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೂಡಿದರೆ ಸಭಾಪತಿ-ಉಪ ಸಭಾಪತಿ ಸ್ಥಾನ ಪಡೆಯುವ ಲೆಕ್ಕಾಚಾರಗಳು ಆರಂಭಗೊಂಡಿವೆ.
ಒಂದೊಮ್ಮೆ ಆ ರೀತಿಯಾದರೆ ಬಸವರಾಜ ಹೊರಟ್ಟಿಗೆ ಸಭಾಪತಿ ಸ್ಥಾನ ತಪ್ಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 75 ಸಂಖ್ಯಾಬಲದ ವಿಧಾನಪರಿಷತ್‌ನಲ್ಲಿ ಬಿಜೆಪಿ 39 ಸ್ಥಾನ ಹೊಂದಿತ್ತಾದರೂ ಪುಟ್ಟಣ್ಣ, ಬಾಬೂರಾವ್ ಚಿಂಚನಸೂರ್, ಲಕ್ಷ್ಮಣ ಸವದಿ, ಆರ್.ಶಂಕರ್, ಆಯನೂರು ಮಂಜುನಾಥ್ ರಾಜೀನಾಮೆಯಿಂದ ಬಿಜೆಪಿ ಸಂಖ್ಯಾಬಲ 34ಕ್ಕೆ ಇಳಿದಿದೆ.
ಬಿಜೆಪಿಯಿಂದ ನಾಮ ನಿರ್ದೇಶನದಡಿ ನೇಮಕಗೊಂಡಿರುವ ಎಚ್.ವಿಶ್ವನಾಥ್ ಕಾಂಗ್ರೆಸ್ ಜತೆ ಬಹಿರಂಗವಾಗಿಯೇ ಗುರುತಿಸಿಕೊಂಡಿರುವುದರಿಂದ ಬಿಜೆಪಿಯ ಮತ್ತೂಂದು ಸ್ಥಾನ ಕಡಿಮೆಯಾಗಲಿದೆ. ಆಗ ಬಿಜೆಪಿ ಸಂಖ್ಯೆ 33 ಆಗಲಿದೆ. ಕಾಂಗ್ರೆಸ್ 26 ಹಾಗೂ ಜೆಡಿಎಸ್ 8 ಸ್ಥಾನ, 1 ಪಕ್ಷೇತರ ಸದಸ್ಯರಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದರೆ 34 ಸಂಖ್ಯಾಬಲ ಆಗಲಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾದರೆ ಸಭಾಪತಿ ಹಾಗೂ ಉಪ ಸಭಾಪತಿ ಹುದ್ದೆ ಪಡೆಯಬಹುದಾದ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.//////