ಶುಕ್ರವಾರ ಪ್ರಮಾಣ ವಚನ ಸ್ವೀಕಾರ ನಿಶ್ಚಿತ: ಲಕ್ಷ್ಮಣ್ ಸವದಿ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ನೇಮಕದ ವಿಚಾರಕ್ಕೆ ಕಾಂಗ್ರೆಸ್ ನಾಯಕ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಯಾರು ಆಗ್ತಾರೆ ಅನ್ನೋದು ಇಂದು ಅಂತಿಮ ಆಗಲಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.
ಇಂದು ಹೈಕಮಾಂಡ್ ನಾಯಕರು ಅಂತಿಮ ಮಾಡಲಿದ್ದಾರೆ. ಬಹುಶಃ ಶುಕ್ರವಾರ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಆಗಬಹುದು. ಇಂದು ಅಂತಿಮವಾದ ಬಳಿಕ, ನಾಳೆ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ನಾಡಿದ್ದು ಪ್ರಮಾಣ ವಚನ ಸ್ವೀಕಾರ ನಿಶ್ಚಿತ ಎಂದ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಆದರೆ ಯಾರು ಮುಖ್ಯಮಂತ್ರಿ ಆಗ್ತಾರೆ ಅನ್ನೋದನ್ನು ಸವದಿ ಖಚಿತಪಡಿಸಿಲ್ಲ. ಮುಂಚೆಯೇ ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆ ಆಗಿರಲಿಲ್ವಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಷ್ಟೇ ಪಕ್ಷಕ್ಕೆ ಬಂದಿದ್ದೇನೆ. ನನಗೆ ಮುಂಚೆ ಏನೇನೂ ಮಾತುಕತೆ ಆಗಿದೆ ಎಂಬುದು ಗೊತ್ತಿಲ್ಲ. ಅದು ಪಕ್ಷದ ಹೈಕಮಾಂಡ್ ನಾಯಕರು ನೋಡಿಕೊಳ್ಳುತ್ತಾರೆ ಎಂದರು.
ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲಿದೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ನಾಯಕರ ಮೇಲಿನ ಪ್ರೀತಿ ವಿಶ್ವಾಸ ಕಡಿಮೆಯಾಗುತ್ತಿದೆ. ಈಗ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನ ಕಾಂಗ್ರೆಸ್‌ಗೆ ಮಾಡಿಯೇ ತೀರುತ್ತೇವೆ ಎಂದರು./////