Belagavi News In Kannada | News Belgaum

ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ನ್ಯಾಷನಲ್‌ ಕಾಲೇಜಿನ ಕೊಡುಗೆ ಅಪಾರ: ಅನಂತ್‌ ಕುಲಕರ್ಣಿ

ದ ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕ ಕಾಲೇಜಿನ ಪದವಿ ವಿಭಾಗ, ವೆಬ್‌ಸೈಟ್‌ ಅನಾವರಣ

ಬೆಂಗಳೂರು,19: ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ನ್ಯಾಷನಲ್‌ ಕಾಲೇಜಿನ ಕೊಡುಗೆ ಅಪಾರ. ನ್ಯಾಷನಲ್‌ ಕಾಲೇಜಿನ ವೈಭವವನ್ನು ಮತ್ತಷ್ಟು ಹೆಚ್ಚಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಅಂಕ ಮತ್ತು ಜ್ಞಾನ ಪಡೆಯುವತ್ತ ಗಮನ ಹರಿಸಬೇಕು ಎಂದು ಬೇಸ್‌ ಎಜುಕೇಶನಲ್‌ ಸೊಸೈಟಿಯ ಸಿಇಓ ಅನಂತ ಕುಲಕರ್ಣಿ ಕರೆ ನೀಡಿದರು.

 

ಇಂದು ಜಯನಗರದ ನ್ಯಾಷನಲ್‌ ಕಾಲೇಜಿನ ಪಿಯು ಆಡಳಿತ ವಿಭಾಗ ಮತ್ತು ನೂತನ ವೆಬ್‌ಸೈಟ್‌ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು, ಎಚ್‌ ಎನ್‌ ನರಸಿಂಹಯ್ಯ ಅವರ ಮುಂದಾಳತ್ವದಲ್ಲಿ ನ್ಯಾಷನಲ್‌ ಕಾಲೇಜು ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದೆ. ಕಾಲೇಜಿನ ಆಡಳಿತ ಮಂಡಳಿ ಕಾಲೇಜಿನ ವೈಭವವನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಕಾಲೇಜಿನ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವುದನ್ನ ಕಂಡು ಸಂತಸವಾಯಿತು. ವಿದ್ಯಾರ್ಥಿಗಳು ಇಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನ ಉಪಯೋಗಿಸಿಕೊಂಡು ಹೆಚ್ಚಿನ ಅಂಕಗಳನ್ನು ಮತ್ತು ಜ್ಞಾನಾರ್ಜನೆಯನ್ನ ಪಡೆದುಕೊಳ್ಳುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

 

ನ್ಯಾಷನಲ್‌ ಎಜುಕೇಷನ್ ಸೊಸೈಟಿ‌ ಆಫ್‌ ಕರ್ನಾಟಕದ ಅಧ್ಯಕ್ಷರಾದ ಡಾ. ಎಚ್‌.ಎನ್‌. ಸುಬ್ರಹ್ಮಣ್ಯ ಮಾತನಾಡಿ, ಶಿಥಾಲಾವಸ್ಥೆಯಲ್ಲಿದ್ದ ನ್ಯಾಷನಲ್‌ ಕಾಲೇಜಿನ ಕಟ್ಟಡಗಳನ್ನು ದುರಸ್ಥಿಗೊಳಿಸುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ. ಕಲಾ ಮಂದಿರದಲ್ಲಿ ವಿಶ್ವಮಟ್ಟದ ನೂತನ ಸಭಾಭವನ ನಿರ್ಮಾಣದ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.

 

ನ್ಯಾಷನಲ್‌ ಎಜುಕೇಷನ್ ಸೊಸೈಟಿ‌ ಆಫ್‌ ಕರ್ನಾಟಕ ಕಾರ್ಯದರ್ಶಿಗಳಾದ ವೆಂಕಟಶಿವಾ ರೆಡ್ಡಿ ಅವರು ಮಾತನಾಡಿ, ನ್ಯಾಷನಲ್‌ ಕಾಲೇಜ್‌ನ ವೈಭವವನ್ನು ಮತ್ತಷ್ಟು ಹೆಚ್ಚಿಸಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಎಚ್‌.ಎಂ ನರಸಿಂಹಯ್ಯ ಅವರ ಹೆಸರನ್ನು ಸ್ಥಿರಸ್ಥಾಯಿಯಾಗಿ ಉಳಿಸಲಾಗುವುದೆಂದರು. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಅತ್ಯುತ್ತಮ ಶಿಕ್ಷಕರನ್ನು ನೇಮಿಸಲಾಗಿದ್ದು, ಸಿಇಟಿ ತರಬೇತಿ ಸೇರಿದಂತೆ ವೃತ್ತಿಪರ ಕೋರ್ಸ್‌ಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಇಂಜಿನೀಯರಿಂಗ್‌ ಕಾಲೇಜ್‌ ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ ತಿಳಿಸಿದರು. ಉತ್ತಮ ಸೌಲಭ್ಯಗಳನ್ನು ಹೊಂದಿರುವ ಬಸವನಗುಡಿ ಮತ್ತು ಜಯನಗರದ ನ್ಯಾಷನಲ್‌ ಕಾಲೇಜಿನ ಪದವಿ ಪೂರ್ವ ವಿಭಾಗಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಇದನ್ನು ವಿದ್ಯಾರ್ಥಿಗಳನ್ನು ಸದ್ಬಳಕೆ ಮಾಡಿಕೊಂಡು ಅತ್ಯುತ್ತಮ ಫಲಿತಾಂಶ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 

ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಅರುಣ್‌ಕುಮಾರ್‌, ಜಂಟಿ ಕಾರ್ಯದರ್ಶಿಗಳಾದ ಸುಧಾಕರ್‌ ಇಸ್ತೂರಿ, ಖಜಾಂಚಿಯಾದ ತಲ್ಲಂ ಆರ್‌. ದ್ವಾರಕನಾಥ್‌ ಕಾಲೇಜ್‌ನ ಅಧ್ಯಕ್ಷರಾದ ಡಾ. ಪಿ.ಎಲ್ ವೆಂಕಟರಮಣರೆಡ್ಡಿ, ಪ್ರಾಂಶುಪಾಲರಾದ ಮಮತಾ .ಎಸ್‌ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.