ಉಚಿತ ಆರೋಗ್ಯ ಶಿಬಿರ ಬಡ ಜನರಿಗೆ ವರದಾನ: ಇಒ ನಿಂಗಪ್ಪ ಮಸಳಿ ಸಲಹೆ

ಬೆಳಗಾವಿ, ಮೇ.19 : ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡವರು, ಮಧ್ಯಮ ವರ್ಗದವರಿಗೆ ವರದಾನವಾಗಿವೆ ಎಂದು ಕಾಗವಾಡ ತಾಪಂ ಇಒ ನಿಂಗಪ್ಪ ಮಸಳಿ ಹೇಳಿದರು.
ತಾಲೂಕಿನ ಮಂಗಸೂಳಿ ಗ್ರಾಮದ ಮಲ್ಲಯ್ಯ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮನರೇಗಾ ಯೋಜನೆಯ ಐಇಸಿ ಚಟುವಟಿಕೆಯಡಿ ಕೂಲಿಕಾರರಿಗೆ ಏರ್ಪಡಿಸಿದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ಒದಗಿಸುವ ಜೊತೆಗೆ ಗ್ರಾಮ ಅಭಿವೃದ್ಧಿ ಒತ್ತು ನೀಡುತ್ತಿದೆ. ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಬಿಪಿ, ಶುಗರ್, ಚರ್ಮ, ಎಚ್ ಐವಿ, ಟಿಬಿ ಹಗೂ ಹೃದಯ ಸಂಬಂಧಿ ಖಾಯಿಲೆಗಳ ತಪಾಸಣೆ ನಡೆಸಲಾಯಿತು. ನೂರಾರು ಜನ ಶಿಬಿರದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು(ಗ್ರಾಉ) ಗೋಪಾಲ ಮಾಳಿ, ಪಿಡಿಒ ಸಂಜೀವ ಸೂರ್ಯವಂಶಿ, ಐಇಸಿ ಸಂಯೋಜಕ ಅಮೀತ ಇಂಗಳಗಾಂವಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಬೀರಪ್ಪ ಸಿಂಗಾಡಿ, ಶಿವಾನಂದ ಮುಂತಾದವರು ಭಾಗಿಯಾಗಿದ್ದರು.