Belagavi News In Kannada | News Belgaum

ದ್ವೇಷ ಅಳಿಸಿ ಹೋಗಿ, ಪ್ರೀತಿ ಗೆದ್ದಿದೆ ಎಂದ ರಾಹುಲ್‌ ಗಾಂಧಿ

ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಭಾಷಣ ಮಾಡಿದರು.

ಇಂದು ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ 8 ಮಂದಿ ಸಚಿವರೂ ಕೂಡ ಪ್ರಮಾಣವಚನ ಸ್ವೀಕರಿಸಿದರು.

ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, ಕರ್ನಾಟಕದ ಜನರಿಗೆ ನನ್ನ ಮನಃಪೂರ್ವಕವಾಗಿ ಅಭಿನಂದನೆಗಳು. ಕಾಂಗ್ರೆಸ್​​ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಅಭಿನಂದನೆಗಳು ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯಿಂದ ದ್ವೇಷ ಸೋತಿದೆ, ಪ್ರೀತಿ ಗೆದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ ಬಳಿಕ, ಗೆಲುವಿಗೆ ನಾನಾ ರೀತಿಯ ಕಾರಣಗಳನ್ನು ಹೇಳಲಾಯಿತು. ಹಲವು ವಿಶ್ಲೇಷಣೆಗಳನ್ನು ಮಾಡಲಾಯಿತು. ಈ ಗೆಲುವಿಗೆ ನಿಜವಾದ ಕಾರಣ, ಬಡವರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರ ಜೊತೆಗೆ ನಿಂತಿದ್ದಾಗಿದೆ.
ಇದರಿಂದಾಗಿಯೇ ಕಾಂಗ್ರೆಸ್ ವಿಜಯ ಸಾಧಿಸಿದೆ. ನಾವು ಸತ್ಯವನ್ನು ನಂಬಿದ್ದೇವೆ. ಬಿಜೆಪಿ ಬಳಿ ಹಣ, ಪೊಲೀಸ್ ಹಾಗೂ ಎಲ್ಲಾ ರೀತಿಯ ಬಲವೂ ಇತ್ತು. ಆದರೆ, ಆ ಶಕ್ತಿಯನ್ನು ಕರ್ನಾಟಕದ ಜನತೆ ಸೋಲಿಸಿದ್ದಾರೆಂದು ತಿಳಿಸಿದರು.

ಚುನಾವಣೆ ವೇಳೆ ನಾವು ನಿಮಗೆ 5 ಭರವಸೆಗಳನ್ನು ನೀಡಿದ್ದೆವು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿ ಗ್ಯಾರಂಟಿಗಳನ್ನು ನಾವು ನೀಡಿದ್ದೆವು. ಅವುಗಳನ್ನು ಈಡೇರಿಸುತ್ತೇವೆ. ಸುಳ್ಳು ಭರವಸೆಗಳನ್ನು ನಾವು ನೀಡಿಲ್ಲ. ನುಡಿದಂತೆ ನಡೆಯುತ್ತೇವೆ. 1-2 ಗಂಟೆಗಳಲ್ಲಿ ರಾಜ್ಯ ಮೊದಲ ಸಂಪುಟ ಸಭೆ ನಡೆಯಲಿದೆ. ಆ ಸಭೆಯಲ್ಲಿ 5 ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತದೆ. ರಾಜ್ಯ ಜನತೆಗೆ ಸ್ವಚ್ಛ, ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡುತ್ತೇವೆ. ಜನರು ಪ್ರೀತಿ, ಶಕ್ತಿ ಕಾಂಗ್ರೆಸ್​​ಗೆ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಹಿಂದಿನ ಸರ್ಕಾರದಲ್ಲೂ ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ನುಡಿದಂತೆ ನಾವು ನಡೆಯುತ್ತೇವೆ.
ಈ ಹಿಂದೆ ಮೋದಿ ಜಪಾನ್​ಗೆ ಹೋಗಿದ್ದಾಗ ನೋಟ್​ ಬ್ಯಾನ್​ ಆಗಿತ್ತು. ಈಗಲೂ ಮೋದಿ ಜಪಾನ್​ ಪ್ರವಾಸ ವೇಳೆ 2000 ರುಪಾಯಿ ನೋಟು ಆಗಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಸರ್ಕಾರ ಎಂದರು./////