ತ್ಯಾಜ್ಯ ವಿಲೇವಾರಿ, ಚರಂಡಿ-ಗಟಾರುಗಳ ಸ್ವಚ್ಛತೆಗೆ ಡಿಸಿ ನಿತೇಶ್ ಪಾಟೀಲ ಸೂಚನೆ

ಬೆಳಗಾವಿ: ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೂಡಲೇ ಟೆಂಡರ್ ಕರೆದು ಕೆಲಸ ಆರಂಭಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ತಕ್ಷಣವೇ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎನ್.ಜಿ.ಟಿ. ಮಾರ್ಗಸೂಚಿ ಪ್ರಕಾರ ತ್ಯಾಜ್ಯ ಸಂಗ್ರಹ, ವರ್ಗೀಕರಣ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ನಡೆಸಬೇಕು. ಅಕ್ಕಪಕ್ಕದ ಸ್ಥಳೀಯ ಸಂಸ್ಥೆಗಳು ಕ್ಲಸ್ಟರ್ ಮಾಡಿಕೊಂಡು ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಬೇಕು. ಒಂದು ವೇಳೆ ಗ್ರಾಮ ಪಂಚಾಯತಿ ಜಾಗೆ ಲಭ್ಯವಿದ್ದರೆ ಅವರೊಂದಿಗೂ ಸೇರಿ ಕ್ಲಸ್ಟರ್ ಸ್ಥಾಪಿಸಬಹುದು ಎಂದು ಜಿಲ್ಲಾಧಿಕಾರಿ ಪಾಟೀಲ ಸಲಹೆ ನೀಡಿದರು. ಮಳೆಗಾಲ; ಪೂರ್ವಸಿದ್ಧತೆಗೆ ಸೂಚನೆ: ಚರಂಡಿ, ಗಟಾರು, ನಾಲಾ ಸೇರಿದಂತೆ ಪ್ರತಿಯೊಂದು ಕಡೆಯೂ ಮಳೆನೀರು ಹರಿದು ಹೋಗುವಂತೆ ಸ್ವಚ್ಛತೆ ಕೈಗೊಳ್ಳಬೇಕು ಎಂದು ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಎಲ್ಲ ಚರಂಡಿ ಮತ್ತು ದೊಡ್ಡ ಗಟಾರುಗಳಲ್ಲಿ ಹೂಳೆತ್ತಬೇಕು. ಇದರಿಂದ ನೀರು ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ. ಮಳೆಗಾಲ ಪೂರ್ವದಲ್ಲಿ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಿದ್ಯುತ್ ಕಂಬಗಳ ಸುಸ್ಥಿತಿಯಲ್ಲಿರಬೇಕು. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಮಳೆಗಾಲದಲ್ಲಿ ಪ್ರತಿಯೊಬ್ಬ ಮುಖ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ. ಎನ್.ಜಿ.ಟಿ. ಮಾರ್ಗಸೂಚಿ ಪಾಲನೆಗೆ ಸಂಬಂಧಿಸಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. ಸಭೆಯಲ್ಲಿ ಬೆಳಗಾವಿ ಉಪ ವಿಭಾಗಾಧಿಕಾರಿ ಬಲರಾಮ್ ಚವಾಣ, ಬೈಲಹೊಂಗಲ ಉಪ ವಿಭಾಗಾಧಿಕಾರಿ, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಎಂಜಿನಿಯರ್ ಗಳು ಉಪಸ್ಥಿತಿರಿದ್ದರು.//////