Belagavi News In Kannada | News Belgaum

ಮೊದಲ ಸಭೆಯಲ್ಲಿಯೇ ಆಡಳಿತ ಯಂತ್ರಕ್ಕೆ ಚುರುಕು : ಶಾಸಕ ನಿಖಿಲ್ ಕತ್ತಿ

 

ಹುಕ್ಕೇರಿ : ಪ್ರಥಮ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿ ದಾಖಲೆ ನಿರ್ಮಿಸಿದ ಕ್ಷೇತ್ರದ ನೂತನ ಶಾಸಕ ನಿಖಿಲ್ ಕತ್ತಿ ಅವರು ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಮೊಟ್ಟ ಮೊದಲ ಸಭೆ ನಡೆಸಿ ಚುನಾವಣಾ ಗುಂಗಿನಿದ ಹೊರಬರುವಂತೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳಿಂದ ಸರಣಿ ವರದಿ ಆಲಿಸಿದ ಶಾಸಕ ನಿಖಿಲ್ ಕತ್ತಿ ಅವರಲ್ಲಿ ಸಭೆಯುದ್ದಕ್ಕೂ ಲವಲವಿಕೆ ಕಂಡು ಬಂದಿತು. ತಾವೊಬ್ಬ ಶಾಸಕ ಎನ್ನುವ ಹಮ್ಮುಬಿಮ್ಮು ಇಲ್ಲದೇ ನಯವಿನಯದಿಂದಲೇ ಪ್ರತಿಯೊಬ್ಬರ ಸ್ವಪರಿಚಯ ಮಾಡಿಕೊಂಡ ಪರಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು.

ಪ್ರಮುಖ ಮತ್ತು ತುರ್ತಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಅಧಿಕಾರಿ ವಲಯದಿಂದ ವಿಸ್ಕೃತ ಮಾಹಿತಿಯನ್ನು ಸಮಚಿತ್ತದಿಂದ ಕೇಳಿಸಿಕೊಂಡ ನಿಖಿಲ್, ತಮ್ಮದು ವಿಭಿನ್ನ ಶೈಲಿಯ ವರ್ಕಿಂಗ್ ಸ್ಟೆಲ್ ಎಂಬುದನ್ನು ನೆನಪಿಸಿಕೊಟ್ಟರು. ಅಷ್ಟೇ ಅಲ್ಲದೇ ನುರಿತ ರಾಜಕಾರಣಿಯಂತೆ ಅಧಿಕಾರಿ-ಸಿಬ್ಬಂದಿಗಳಿಗೆ ಕರ್ತವ್ಯ ನಿಷ್ಠೆ ಮತ್ತು ಸಾರ್ವಜನಿಕ ಸೇವೆಯ ಪಾಠ ಬೋಧಿಸಿದರು.
ಮುಖ್ಯವಾಗಿ ಸಂಭವನೀಯ ನೆರೆಹಾವಳಿ ನಿಯಂತ್ರಿಸಲು ಮುನ್ನಚ್ಚರಿಕೆ ಕ್ರಮ, ಕೃಷಿ ಚಟುವಟಿಕೆಗೆ ಬೀಜ ಮತ್ತು ರಸಗೊಬ್ಬರ ವಿತರಣೆ, ಶೈಕ್ಷಣಿಕ ಚಟುವಟಿಕೆಗೆ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆಯಲ್ಲಿ ಅಧಿಕಾರಿಗಳು ಯಾವುದೇ ರೀತಿಯ ಉದಾಸೀನತೆ ತೋರದಂತೆ ಸೂಚ್ಯವಾಗಿ ತಾಕೀತು ಮಾಡಿದರು.
ಬಳಿಕ ಸಭೆಯಲ್ಲಿ ನಿಖಿಲ್ ಕತ್ತಿ ಮಾತನಾಡಿ, ಎಲಿಮುನ್ನೋಳಿ, ಹಿಡಕಲ್ ಡ್ಯಾಮ್, ಬೆಲ್ಲದ ಬಾಗೇವಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಹುಕ್ಕೇರಿಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ಆರಂಭಕ್ಕೆ ಪ್ರಸ್ತಾವನೆ ಸಿದ್ಧಪಡಿಸಿಕೊಳ್ಳಬೇಕು. ಅಪಾಯಕಾರಿ ಮತ್ತು ಶಿಥಿಲಾವಸ್ಥೆ ಅಂಗನವಾಡಿ, ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಜಾನುವಾರುಗಳಿಗೆ ನೀರು ಮತ್ತು ಮೇವು ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಗೋಶಾಲೆಗೆ ದಾಖಲಿಸಬೇಕು ಎಂದು ಸೂಚಿಸಿದರು.

ಜೆಜೆಎಂ, ಬಹುಗ್ರಾಮ ಕುಡಿಯುವ ನೀರು ಪೂರೈಕೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಮುಂಗಾರು ಹಂಗಾಮಿಗೆ ಬೇಕಾದ ಅಗತ್ಯ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಔಷಧೋಪಚಾರ, ಚಿಕಿತ್ಸೆ ದೊರಕಿಸಬೇಕು. ಶಿಥಿಲ ಸೇತುವೆ, ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಅವರು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರೂ ಆದ ತಾಪಂ ಆಡಳಿತಾಧಿಕಾರಿ ಬಿ.ಕಲ್ಲೇಶ, ತಹಸೀಲದಾರ ಎಸ್.ಬಿ.ಇಂಗಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಮತ್ತಿತರರು ಉಪಸ್ಥಿತರಿದ್ದರು. ಬಿಇಒ ಮೋಹನ ದಂಡಿನ್ ನಿರೂಪಿಸಿ ವಂದಿಸಿದರು.

ಸರ್ಕಾರಿ ನೌಕರರು ಸಂಪರ್ಕ ಸೇತುವೆಯಾಗಿ
ಸರ್ಕಾರಿ ನೌಕರರು ಸರ್ಕಾರ ಹಾಗೂ ಸಾರ್ವಜನಿಕರ ನಡುವಿನ ಸಂಪರ್ಕ ಸೇತುವೆಯಾಗಿ ದಕ್ಷತೆಯಿಂದ ಕೆಲಸ ನಿರ್ವಹಿಸಬೇಕು ಎಂದು ನೂತನ ಶಾಸಕ ನಿಖಿಲ್ ಕತ್ತಿ ಕಿವಿಮಾತು ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಮುನ್ನ ವಿವಿಧ ಇಲಾಖೆಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಯೋಜನೆಗಳು ಕೆಳ ಹಂತದಲ್ಲಿನ ಸಾರ್ವಜನಿಕರಿಗೆ ಅಥವಾ ಫಲಾನುಭವಿಗಳಿಗೆ ತಲುಪಬೇಕಾದರೆ ನೌಕರರು ಸಮನ್ವಯತೆಯಿಂದ ಕೆಲಸ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.
ಎಲ್ಲಾ ಇಲಾಖೆಗಳ ನೌಕರರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ತಾಲೂಕಿನ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ತಮ್ಮ ಕರ್ತವ್ಯವನ್ನು ನಿಗದಿತ ಅವಧಿಯಲ್ಲಿ ದಕ್ಷತೆಯಿಂದ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು. ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದರು./////