ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಸೂಕ್ತ ಸ್ಥಾನಮಾನ

ಬೆಂಗಳೂರು : ಬಿಜೆಪಿಯಿಂದ ವಲಸೆ ಬಂದ ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರಿಗೆ ಸ್ಥಾನಮಾನ ನೀಡುವ ಕುರಿತು ಕಾಂಗ್ರೆಸ್ನಲ್ಲಿ ಚರ್ಚೆಗಳು ನಡೆದಿವೆ.ವಿಧಾನಸಭೆ ಚುನಾವಣೆಗೂ ಕೆಲ ದಿನಗಳ ಹಿಂದೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಇದರ ಬೆನ್ನಲೇ ಬಿಜೆಪಿಯನ್ನು ಲಿಂಗಾಯಿತ ವಿರೋಧಿ ಎಂದು ಬಿಂಬಿಸಿ ಕಾಂಗ್ರೆಸ್ ರಾಜಕೀಯ ಲಾಭ ಪಡೆದುಕೊಂಡಿತ್ತು. ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಅಥಣಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೆ, ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಸೋಲು ಕಂಡಿದ್ದಾರೆ.
ಚುನಾವಣೆಯಲ್ಲಿ ಸೋಲು ಕಂಡಿರುವ ಜಗದೀಶ್ ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಮೂಲ ಕಾಂಗ್ರೆಸಿಗರು ಅಸಮಾಧಾನಗೊಳ್ಳಬಹುದು ಎಂಬ ಆತಂಕವಿದೆ. ಆದರೂ ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕೆಂಬ ಚರ್ಚೆಗಳು ನಡೆಯುತ್ತಿವೆ.ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಲಿಂಗಾಯಿತ ಸಮುದಾಯದ 39 ಮಂದಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ನ 135 ಶಾಸಕರಲ್ಲಿ ಶೇ.30ರಷ್ಟು ಪಾಲು ಪಡೆದಿದ್ದಾರೆ. ಇದಕ್ಕೆ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ಹಿರಿಯರು ಬಿಜೆಪಿ ತೊರೆದಿದ್ದು ಕಾರಣ ಎಂದು ಹೇಳಲಾಗುತ್ತಿದೆ.//////