ಕೆವಿಕೆಯಿಂದ ರೈತರಿಗೆ ಗುಣಮಟ್ಟ ಬೀಜ ಪೂರೈಕೆ – ಶ್ರೀ ಬಿ. ಆರ್. ಪಾಟೀಲ

ಮತ್ತಿಕೊಪ್ಪದ : ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 26.05.2023 ರಂದು ಬೀಜ ಮೇಳವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಬಿ. ಆರ್. ಪಾಟೀಲ ಮಾತನಾಡಿ, ಪ್ರಸ್ತುತ ಕೃಷಿ ವ್ಯವಸ್ಥೆಯಲ್ಲಿ ಗುಣಮಟ್ಟದ ಬೀಜಗಳ ಲಭ್ಯತೆಯಿಲ್ಲದ ಕಾರಣ ವ್ಯವಸಾಯದಲ್ಲಿ ಕಡಿಮೆ ಇಳುವರಿಯಿಂದಾಗಿ ರೈತ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾನೆ. ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆಯಿಂದ ರೈತನು ಉತ್ತಮ ಇಳುವರಿ ಹಾಗೂ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಮುಂಗಾರು ಹಂಗಾಮು ಸದ್ಯದಲ್ಲೆ ಪ್ರಾರಂಭವಾಗಲಿದ್ದು ಗುಣಮಟ್ಟ ಬೀಜ ರೈತರಿಗೆ ದೊರೆಯುವಂತೆ ಮಾಡುವುದೇ ಕೆವಿಕೆಯ ಬೀಜ ಮೇಳದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಮುಂಚೂಣಿಯಲ್ಲಿದೆ. ಈ ದಿಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಉತ್ಪಾದಿಸಿದ ಸೋಯಾಬಿನ್ ಬೆಳೆಯ ಕೆಡಿಎಸ್-726 ಮತ್ತು ಕೆಡಿಎಸ್- 753 ತಳಿ, ಹೆಸರು ಬೆಳೆಯ ಡಿಜಿಜಿವಿ-2 ತಳಿ, ಶೇಂಗಾ ಬೆಳೆಯ ಟಿಜಿ-39 ತಳಿ, ಉದ್ದು ಬೆಳೆಯ-ಡಿಬಿಜಿವಿ-5 ತಳಿ ಹಾಗೂ ಈರುಳ್ಳಿ ಬೆಳೆಯ ಭೀಮಾ ಸೂಪರ್ ತಳಿಯನ್ನು ರೈತರಿಗೆ ಪೂರೈಸಲು ಬೀಜ ಮೇಳವನ್ನು ಆಯೋಜಿಸಿದೆ. ಆದ್ದರಿಂದ ರೈತರು ಈ ಕಾರ್ಯಕ್ರಮ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ರೈತ ಪರ ಕಾಳಜಿ, ಕೃಷಿ ಬೆಳವಣಿಗೆ ಆಗಬೇಕು ಆ ಮೂಲಕ ರೈತರ ಆರ್ಥಿಕತೆ, ಬದುಕು ಉತ್ತಮಗೊಳ್ಳಬೇಕೆಂಬ ಆಶಯದ ಫಲವಾಗಿ ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರವು ಸ್ಥಾಪನೆಗೊಂಡಿದ್ದು, ಕೃಷಿ ವಿಜ್ಞಾನ ಕೇಂದ್ರವು ಅವರ ಕನಸಿನ ಕೂಸಾಗಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್, ಅಟಾರಿ-ಬೆಂಗಳೂರಿನ ಮುಖ್ಯ ತಾಂತ್ರಿಕ ಅಧಿಕಾರಿ ಡಾ. ಮಲ್ಲಿಕಾರ್ಜುನ ಬಿ. ಹಂಜಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೃಷಿ ವಿಜ್ಞಾನ ಕೇಂದ್ರವು ಬೀಜ ಮೇಳವನ್ನು ಆಯೋಜಿಸಿರುವುದು ಸಂತೋಷ. ಕೃಷಿಯಲ್ಲಿ ಬೀಜ ಮಹತ್ವವಾದ ಪರಿಕರವಾಗಿದ್ದು ಶರಣರಾದ ಅಲ್ಲಮಪ್ರಭುಗಳು ಬಿತ್ತನೆ ಬೀಜದ ಮಹತ್ವ ಕುರಿತು ಸಾಹಿತ್ಯದಲ್ಲಿ ವಿವರಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರವು ಭಾರತ ಸರ್ಕಾರದ ಅನುದಾನದಡಿದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬೀಜ ಪೂರೈಕೆ ಹಾಗೂ ಅನೇಕ ತಂತ್ರಜ್ಞಾನದ ವರ್ಗಾವಣೆಯಿಂದ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ. ರೈತರು ಈ ಸಂಸ್ಥೆಯಲ್ಲಿರುವ ಅನುಭವಿ ವಿಜ್ಞಾನಿಗಳಿಂದ ತಂತ್ರಜ್ಞಾನದ ಮಾಹಿತಿ, ಬೀಜ ಹಾಗೂ ಇನ್ನಿತರ ಅನೇಕ ಪರಿಕರಗಳನ್ನು ಸಕಾಲಕ್ಕೆ ಪಡೆದು, ಅಧಿಕ ಆದಾಯ ಪಡೆಯಲು ಸಲಹೆ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ತೋಟಗಾರಿಕೆ ಇಲಾಖೆಯ ಉಪ ತೋಟಗಾರಿಕಾ ನಿರ್ದೇಶಕ ಮಹಾಂತೇಶ ಮುರಗೋಡ ಮಾತನಾಡಿ ಕೃಷಿಯಲ್ಲಿ ಆಹಾರ ಧಾನ್ಯದ ಬೆಳೆಯ ಜೊತೆಗೆ ಹಣ್ಣಿನ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಲು ಸಲಹೆ ನೀಡಿದರು ಹಾಗೂ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾತನಾಡಿದರು. ಧಾರವಾಡದ ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆಯ ಸಹಾಯಕ ನಿರ್ದೇಶಕ ಟಿ.
ಶಿವರುದ್ರಪ್ಪ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರವು ಉತ್ಪಾದಿಸುತ್ತಿರುವ ಬೀಜಗಳು ಉತ್ತಮ ಗುಣಮಟ್ಟ ಹೊಂದಿದ್ದು ರೈತರು ಶಿಫಾರಸ್ಸಿನಂತೆ ವ್ಯವಸಾಯ ಮಾಡಿ ಅಧಿಕ ಇಳುವರಿ ಪಡೆಯಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಬ. ಅಂಗಡಿ ಸ್ವಾಗತಿಸಿದರು. ಮೇಳದಲ್ಲಿ ಕೆವಿಕೆಯ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ ರೈತರಿಗೆ ತಾಂತ್ತಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಜನ ರೈತರು ಭಾಗವಹಿಸಿದ್ದರು.//////