Belagavi News In Kannada | News Belgaum

ಎಸಿಬಿ ರದ್ದುಪಡಿಸಿದ ಜನ ಸಾಮಾನ್ಯರ ನ್ಯಾಯಾಧೀಶ ವೀರಪ್ಪಗೆ ಬೀಳ್ಕೊಡುಗೆ

ಬೆಂಗಳೂರು: ಜನ ಸಾಮಾನ್ಯರ ನ್ಯಾಯಮೂರ್ತಿ ಎಂದೇ ಖ್ಯಾತ ಪಡೆದಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನಿವೃತ್ತಿಯಾಗಿದ್ದು, ಅವರಿಗೆ ಕರ್ನಾಟಕ ಹೈಕೋರ್ಟ್ನ ವಕೀಲರ ಸಂಘ ಬುಧವಾರ ಪ್ರೀತಿಯಿಂದ ಬೀಳ್ಕೊಟ್ಟಿದೆ.

ಬೆಂಗಳೂರು ವಕೀಲ ಸಂಘ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ವಿಚ್ಛೇದನಕ್ಕೆ ಪತಿ-ಪತ್ನಿ ಇಬ್ಬರ ಸಮ್ಮತಿಯೂ ಅಗತ್ಯ: ಹೈಕೋರ್ಟ್
ವೀರಪ್ಪ ಅವರು, ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಪಡಿಸಿ, ಭ್ರಷ್ಟಾಚಾರ ತಡೆ ಕಾಯ್ದೆಯ ಅಧಿಕಾರವನ್ನು ಮತ್ತೆ ಲೋಕಾಯುಕ್ತಕ್ಕೆ ನೀಡಿದ್ದ ಹೈಕೋರ್ಟ್ ಪೀಠದ ನೇತೃತ್ವ ವಹಿಸಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರು, ನ್ಯಾಯಾಂಗಕ್ಕೆ ನ್ಯಾಯಮೂರ್ತಿ ವೀರಪ್ಪ ಅವರ ಕೊಡುಗೆಯನ್ನು ಯಾವಾಗಲೂ ಪ್ರೀತಿಯಿಂದ ಸ್ಮರಿಸಲಾಗುವುದು ಎಂದು ಹೇಳಿದರು.

ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ನಾಗದೇನಹಳ್ಳಿ ಗ್ರಾಮದ ನ್ಯಾಯಮೂರ್ತಿ ವೀರಪ್ಪ ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ(ಕೆಎಸ್ಎಲ್ಎಸ್ಎ) ಅಧ್ಯಕ್ಷರಾಗಿ ಅತಿ ಹೆಚ್ಚು ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಮೂಲಕ ದೇಶದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ತಂದ ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಿಸಿದ ರಾಜ್ಯ ಸರ್ಕಾರ ಕ್ರಮದಲ್ಲಿ ನ್ಯಾಯಮೂರ್ತಿ ವೀರಪ್ಪ ಅವರ ಪಾತ್ರ ಪ್ರಮುಖವಾಗಿತ್ತು.//////