ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬೆಳಗಾವಿ: ಸರಕಾರಿ ಸೇವೆ ಎಂಬುದು ನಮಗೆ ಸಿಕ್ಕ ದೇವರ ಆಶೀರ್ವಾದ ಇದ್ದಂತೆ. ಹುದ್ದೆ ಯಾವುದೇ ಇರಲಿ ಪ್ರಾಮಾಣಿಕತೆ, ಸಕಾರಾತ್ಮಕ ಮನೋಭಾವ ಹಾಗೂ ಜನರಿಗೆ ಒಳಿತು ಮಾಡಬೇಕು ಎಂಬ ಆಶಯವಿದ್ದರೆ ಯಶಸ್ಸು, ಕೀರ್ತಿ ಹಾಗೂ ಸಂತೃಪ್ತ ಭಾವನೆ ನಮ್ಮ ಜತೆಗಿರುತ್ತದೆ ಎಂದು ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಯಾವುದೇ ಕೆಲಸ ಇರಲಿ; ನಮ್ಮ ಸಾಧನೆಯು ಉನ್ನತ ಹುದ್ದೆಗೆ ಅವಕಾಶ ಕಲ್ಪಿಸಿಕೊಡುತ್ತದೆ ಎಂಬುದಕ್ಕೆ ನಾನೇ ಉದಾಹರಣೆ ಎಂದರು.
ತವರು ಜಿಲ್ಲೆಯಲ್ಲಿಯೇ ನಿವೃತ್ತಿಯಾಗಬೇಕು ಎಂಬ ಇಚ್ಛೆಗೆ ಸರಕಾರ ಕೂಡ ಅನುವು ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಭೌತಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ ಪರಿಣಿತನಾಗಿದ್ದ ನನಗೆ ಉಪನ್ಯಾಸ ವೃತ್ತಿಯಲ್ಲಿದ್ದಾಗ ಸರಕಾರಿ ಸೇವೆ ಕೈಬೀಸಿ ಕರೆಯಿತು.
ಹುಬ್ಬಳ್ಳಿ-ಧಾರವಾಡದಲ್ಲಿ ಜಾರಿಗೆ ತಂದ ಬಿ.ಆರ್.ಟಿ.ಎಸ್. ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂತೃಪ್ತಿ ಇದೆ.
ಗದಗ ಜಿಲ್ಲೆಯ 34 ಎಕರೆ ಜಾಗೆಯಲ್ಲಿನ ಅಕ್ರಮವನ್ನು ತೆರವುಗೊಳಿಸಿ ಸರಕಾರದ ಸುಪರ್ದಿಗೆ ಹಿಂದಿರುಗಿಸಿದ ಕೆಲಸವನ್ನು ಮೆಚ್ಚಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂದನ ಪತ್ರ ನೀಡಿದ್ದನ್ನು ಮೆಲುಕುಹಾಕಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.
ವಿಜಯಪುರ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ, 36 ವರ್ಷಗಳ ಸುದೀರ್ಘ ಸೇವೆಯ ಬಳಿಕ ಸೇವಾಸಂತೃಪ್ತಿಯಿಂದ ತವರು ಜಿಲ್ಲೆಯಲ್ಲಿ ನಿವೃತ್ತರಾಗುತ್ತಿರುವುದು ಸಂತಸದಾಯಕವಾಗಿದೆ ಎಂದರು.
ಜಮಖಂಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರೇಗೌಡ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ , ಧಾರವಾಡ ಉಪ ವಿಭಾಗಾಧಿಕಾರಿ ಅಶೋಕ ತೇಲಿ,
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ, ದಲಿತ ಸಂಘಗಳ ಮುಖಂಡರಾದ ಮಲ್ಲೇಶ್ ಚೌಗಲೆ ಮಾತನಾಡಿದರು.ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ನಿಯೋಜನೆಗೊಂಡಿರುವ ಬಾಗಲಕೋಟೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಎಂ.ಜಿ.ಹಿರೇಮಠ ದಂಪತಿಗೆ ಸನ್ಮಾನ: ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲಾಡಳಿತದ ಪರವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಎಂ.ಜಿ.ಹಿರೇಮಠ ದಂಪತಿಯನ್ನು ಅವರನ್ನು ಸನ್ಮಾನಿಸಿದರು.
ತನುಜಾ ಹಿರೇಮಠ,_ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ ಮತ್ತಿತರರು ಉಪಸ್ಥಿತರಿದ್ದರು.
ಅಪರ ಪ್ರಾದೇಶಿಕ ಆಯುಕ್ತರಾದ ನಜ್ಮಾ ಪೀರಜಾದೆ ಅವರು ಸ್ವಾಗತಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು.
ಸಮಾರಂಭದ ಕೊನೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಹಿರೇಮಠ ಅವರ ಸ್ನೇಹಿತರು, ಹಿತೈಷಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಎಂ.ಜಿ.ಹಿರೇಮಠ ದಂಪತಿಗೆ ಸನ್ಮಾನಿಸಿ, ಹೂಗುಚ್ಛ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.//////