ಸಂಸದ ಪ್ರತಾಪ್ ಸಿಂಹಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು

ಶಿವಮೊಗ್ಗ: ಪ್ರತಾಪ್ ಸಿಂಹ ಅಣ್ಣನವರು ಬಹಳ ಬುದ್ಧಿವಂತರು. ಅವರು ಸರ್ವಜ್ಞ ಇದ್ದಂತೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು.
10 ದಿನಗಳ ಹಿಂದೆ ಹೆಣ್ಣುಮಗುವಿಗೆ ಜನ್ಮ ನೀಡಿದ ಸೊಸೆಯನ್ನು ನೋಡಲು ಭದ್ರಾವತಿಗೆ ಬಂದಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರತಾಪ್ ಸಿಂಹ ಅವರ ಚಿಂತನೆಗಳಿಗೆ ಸರಿಸಾಟಿ ಆಗುವ ರಾಜಕಾರಣಿಗಳು ಈ ರಾಜ್ಯ, ದೇಶದಲ್ಲಿ ಇಲ್ಲ. ಜನರು ಅವರನ್ನು ಸುಮ್ಮನೆ ಕೂರಿಸುವುದಕ್ಕೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರು ಸ್ವಲ್ಪ ದಿನ ಸುಮ್ಮನಿದ್ದರೆ ಒಳ್ಳೆಯದು ಎಂದು ಕುಟುಕಿದರು.
ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ತಲುಪುತ್ತದೆ. ಯಾವುದೇ ಕುಟುಂಬಗಳನ್ನು ಹೊಡೆಯುವ ಕೆಲಸ ನಮ್ಮ ಸರ್ಕಾರ ಮಾಡುವುದಿಲ್ಲ. ಈಗಾಗಲೇ ಎಲ್ಲರಿಗೂ ಫಾರಂ ವಿತರಿಸಲಾಗುತ್ತದೆ ಎಂದು ಸಂಸದರ ಟೀಕೆಗೆ ಠಕ್ಕರ್ ಕೊಟ್ಟರು.
ರಾಜ್ಯದಲ್ಲಿ 88% ಜನ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೋಲ್ಡರ್ ಇದ್ದಾರೆ. ಅವರ ಅಂಕಿ-ಅಂಶಗಳನ್ನು ತೆಗೆದುಕೊಂಡು ರಾಜ್ಯ ಸರ್ಕಾರ ಅವರಿಗೆ ಗೃಹಲಕ್ಷ್ಮಿ ಯೋಜನೆ ವಿಸ್ತರಿಸಲಾಗುತ್ತದೆ. ಅದಕ್ಕೆ ಕೆಲ ಸಮಯ ಬೇಕಾಗುತ್ತದೆ. ಆ ಕಾರಣದಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರದ ಎಲ್ಲಾ ಹಗರಣಗಳನ್ನು ನಮ್ಮ ಸರ್ಕಾರದಲ್ಲಿ ತನಿಖೆ ಮಾಡಲಾಗುತ್ತದೆ ಎಂಬ ವಿಚಾರವಾಗಿ ಮಾತನಾಡಿ, ಈ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗುತ್ತದೆ. ನಾವು 40% ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಭ್ರಷ್ಟಾಚಾರ, ಬೆಲೆ ಏರಿಕೆ ತೆಗೆಯುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ. ರಾಜ್ಯದ ಜನರ ಮನದಲ್ಲಿ ಮಂದಹಾಸ ಮೂಡಿಸುವುದಕ್ಕೆ ನಮ್ಮ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.
ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಆ ವಿಷಯ ಮಾತನಾಡುವಷ್ಟು ದೊಡ್ಡವಳಲ್ಲ. ಆ ವಿಷಯವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ ಕುರಿತು ಮಾತನಾಡಿ, ಸಚಿವೆಯಾಗಿದ್ದೇನೆ ನನಗೆ ಯಾವುದೇ ಅಸಮಾಧಾನ ಇಲ್ಲ. ಯಾವುದೇ ಜಿಲ್ಲೆಯ ಉಸ್ತುವಾರಿ ಕೊಟ್ಟರೂ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದರು./////