Belagavi News In Kannada | News Belgaum

ಕೆ.ಎಲ್.ಇ ವಿಶ್ವ ವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವ

ಬೆಳಗಾವಿ :  ಮುಂಬರುವ ದಿನಗಳಲ್ಲಿ ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲಿದೆ. ಇದಕ್ಕೆ ಪೂರಕವಾಗಿ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶದ ಯುವ ಜನತೆ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.
ನಗರದ ಕೆ.ಎಲ್.ಇ ಕನ್ವೆನ್ಷನ್ ಸೆಂಟರ್ ಹಾಲ್ ನಲ್ಲಿ  ಸೋಮವಾರ (ಮೇ.05) ನಡೆದ “ಕೆ.ಎಲ್.ಇ ವಿಶ್ವ ವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವ”ದಲ್ಲಿ ಅವರು ಮಾತನಾಡಿದರು.
ಹೊಸ ರಾಷ್ಟೀಯ ಶಿಕ್ಷಣ ನೀತಿ ಅನುಷ್ಠಾನದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಮಹತ್ತರ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳು ಎನ್.ಇ.ಪಿ ಶಿಕ್ಷಣ ನೀತಿಗೆ ಹೊಂದಿಕೊಳ್ಳುತ್ತಿದ್ದಾರೆ. ಬರುವ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಎನ್.ಇ.ಪಿ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.
ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ, ಕೆ.ಎಲ್.ಇ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ವೃತ್ತಿ ಜೀವನ ಆರಂಭಿಸಿ, ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೇವಲ ಪದವಿ ಪಡೆಯುವುದು ಮಾತ್ರವಲ್ಲದೇ, ಪದವಿಯ ನಂತರ ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ದೇಶಕ್ಕೆ ನಿಮ್ಮ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೇಷ್ಠ ಭಾರತ ನಿರ್ಮಾಣಕ್ಕೆ ಯುವಕರು ಕೈಜೋಡಿಸಿ:
ಶ್ರೇಷ್ಠ ಭಾರತ ನಿರ್ಮಾಣದಲ್ಲಿ ವಿಧ್ಯಾರ್ಥಿಗಳು, ಯುವಕರ ಪಾತ್ರ ಬಹು ಮುಖ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಕರು ಕೈ ಜೋಡಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಲಹೆ ನೀಡಿದರು.
ಮುಂಬರುವ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯ ಪಡೆದು 100 ವರ್ಷ ಪೂರೈಸಲಿದೆ. ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಉತ್ತಮ ಸಮಾಜಕ್ಕೆ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕಿದೆ. ಅದೇ ರೀತಿಯಲ್ಲಿ ಪ್ರಕೃತಿ ಸಂರಕ್ಷಣೆ ಕೂಡ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕೆ.ಎಲ್.ಇ ಸಂಸ್ಥೆ ವಿವಿಧ ವೈದ್ಯಕೀಯ ಸೌಲಭ್ಯ ನೀಡುವುದರ ಮೂಲಕ ಕೆಳ ವರ್ಗದ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಾ ಬಂದಿದೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಕೆ.ಎಲ್.ಇ ಸಂಸ್ಥೆಯನ್ನು ಅನೇಕ ಬಾರಿ ಗುರುತಿಸಿ, ವಿವಿಧ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಕೆ.ಎಲ್.ಇ ಸಂಸ್ಥೆ ವಿಶ್ವದಲ್ಲೇ ಹೆಸರುವಾಸಿಯಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ಎಲ್.ಇ ವಿಶ್ವ ವಿದ್ಯಾಲಯದ ಕುಲಪತಿ ಡಾ. ಪ್ರಭಾಕರ ಕೋರೆ, ಕುಲಸಚಿವ ಪ್ರೊ. ನಿತೀನ್ ಗಂಗನೆ ಸೇರಿದಂತೆ  ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ  ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.
23 ಚಿನ್ನದ ಪದಕ, ಪದವಿ ಪ್ರಧಾನ:
ಇದಕ್ಕೂ ಮುಂಚೆ ಎಂ.ಎಸ್.ಸಿ, ಎಂಬಿಬಿಎಸ್, ಬಿಎಸ್ ಸಿ, ಬಿಡಿಎಸ್, ಎಂ ಫಾರ್ಮಾ, ಬಿಎಸ್ ಸಿ ನರ್ಸಿಂಗ್, ಬಿಪಿಟಿ, ಎಂಎಸ್ ಆಯುರ್ವೇದ, ಬಿಎಎಂಎಸ್ ಸೇರಿದಂತೆ ವಿವಿಧ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು 23 ಚಿನ್ನದ ಪದಕ ಹಾಗೂ ಪದವಿ ಪ್ರದಾನ ಮಾಡಿದರು.//////