ಪರಿಹಾರದ ಹಣಕ್ಕಾಗಿ ಸತ್ತ ವ್ಯಕ್ತಿಯನ್ನು ಪತಿ ಎಂದ ಮಹಿಳೆ..

ಭುವನೇಶ್ವರ: ಸರ್ಕಾರದ ಪರಿಹಾರದ ಹಣ ಪಡೆಯಲು ಬಾಲಸೋರ್ ರೈಲು ದುರಂತದಲ್ಲಿ ಪತಿ ಮೃತಪಟ್ಟಿದ್ದಾನೆ ಎಂದು ಮಹಿಳೆಯೊಬ್ಬಳು ಕತೆಕಟ್ಟಿದ ಪ್ರಕರಣ ಒಡಿಶಾದ ಕಟಕ್‍ನಲ್ಲಿ ನಡೆದಿದೆ..
ಇದೀಗ ಕತೆಕಟ್ಟಿದ ಪತ್ನಿಯ ವಿರುದ್ಧ ಪತಿ ಬಹನಾಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಅಲ್ಲದೇ ಪರಿಹಾರದ ಹಣ ಪಡೆಯಲು ಈ ರೀತಿ ಸಂಚು ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾನೆ. ಸಾರ್ವಜನಿಕರ ಹಣವನ್ನು ದೋಚಲು ಯತ್ನಿಸಿದ ಗೀತಾಂಜಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪತಿ ಒತ್ತಾಯಿಸಿದ್ದಾನೆ. ಈಗ ಬಂಧನದ ಭೀತಿಯಿಂದ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ..
ಗೀತಾಂಜಲಿ ದತ್ತಾ ಎಂಬಾಕೆ ರೈಲು ಅಪಘಾತದಲ್ಲಿ ತನ್ನ ಪತಿ ಬಿಜಯ್ ದತ್ತಾ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದಳು. ಅಲ್ಲದೆ ಮೃತದೇಹವೊಂದನ್ನು ತನ್ನ ಗಂಡನದ್ದೇ ಎಂದು ಗುರುತಿಸಿದ್ದಳು. ಆದರೆ ದಾಖಲೆಗಳ ಪರಿಶೀಲನೆಯ ನಂತರ ಆಕೆ ಹೇಳುತ್ತಿರುವುದು ಸುಳ್ಳು ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು..
ಈ ಪ್ರಕರಣದ ಬಳಿಕ ರೈಲ್ವೇ ಇಲಾಖೆ, ಮೃತದೇಹಗಳ ನಕಲಿ ವಾರಸುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಪ್ರಕರಣದ ಪತಿ ಹಾಗೂ ಪತ್ನಿ ಕಳೆದ 13 ವರ್ಷಗಳಿಂದ ಬೇರೆಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ..