ಪ್ರತಿ ತಿಂಗಳ ಸರಾಸರಿ ಮೀರಿದ್ರೆ ಹೆಚ್ಚುವರಿ ಯೂನಿಟ್‌ನ ಹಣ ಕಟ್ಟಬೇಕು: ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಗ್ಯಾರಂಟಿಗೆ ಜನತೆಯಲ್ಲಿ ಹಲವು ಗೊಂದಲಗಳು ಉಳಿದುಕೊಂಡಿವೆ. ಈ ಎಲ್ಲಾ ಗೊಂದಲಗಳಿಗೆ ತೆರೆಎಳೆಯಲು ಇಂಧನ ಸಚಿವ ಕೆಜೆ ಜಾರ್ಜ್ ಬುಧವಾರ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಜೆ ಜಾರ್ಜ್, ಈಗಾಗಲೇ ಸಿಎಂ ಗೃಹಜ್ಯೋತಿ ಯೋಜನೆ ಬಗ್ಗೆ ವಿಸ್ಕೃತವಾಗಿ ತಿಳಿಸಿದ್ದಾರೆ. 200 ಯೂನಿಟ್ ವರೆಗೆ ಪ್ರತಿಯೊಬ್ಬರಿಗೆ ಉಚಿತವಾಗಿ ವಿದ್ಯುತ್ ಕೊಡುವ ಯೋಜನೆ ಇದಾಗಿದೆ. ಗೃಹಬಳಕೆಯ ಗ್ರಾಹಕರ ಒಂದು ವರ್ಷದ ಸರಾಸರಿ ತೆಗೆದುಕೊಂಡು 10% ಸೇರಿಸಿ ವಿದ್ಯುತ್ ಉಚಿತ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಜನರು ಆಧಾರ್ ಕಾರ್ಡ್ ಅನ್ನು ಆರ್‌ಆರ್ ನಂಬರ್‌ಗೆ ಲಿಂಕ್ ಮಾಡಬೇಕು. ವಾಸದ ಕರಾರು ಪತ್ರ ಅಥವಾ ವೋಟರ್ ಐಡಿ ನೀಡಬೇಕು. ಬಾಡಿಗೆ ಮನೆಯವರಿಗೂ, ಸ್ವಂತ ಮನೆಯವರಿಗೂ ಇದು ಅನ್ವಯಿಸುತ್ತದೆ. ಬೆಂಗಳೂರು ಒನ್ ಸೇವಾಕೇಂದ್ರದಲ್ಲಿ ಈ ವ್ಯವಸ್ಥೆಯನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಜೂನ್ 15 ರಿಂದ ನೋಂದಣಿ ಆರಂಭವಾಗಿ, ಆಗಸ್ಟ್ 1 ರಿಂದ ಯೋಜನೆ ಜಾರಿಗೆ ಬರಲಿದೆ. 2 ಕೋಟಿ 16 ಲಕ್ಷ ಗೃಹಬಳಕೆ ಗ್ರಾಹಕರು ಇದ್ದಾರೆ. ಅದರಲ್ಲಿ 2 ಕೋಟಿ 14 ಲಕ್ಷ ಗ್ರಾಹಕರು 200 ಯೂನಿಟ್ ಒಳಗೆ ಬಳಕೆ ಮಾಡುವವರು ಇದ್ದಾರೆ. 2 ಲಕ್ಷ ಮಾತ್ರ 200 ಯೂನಿಟ್‌ಗೂ ಹೆಚ್ಚು ವಿದ್ಯುತ್ ಬಳಕೆ ಮಾಡುವವರು ಇದ್ದಾರೆ. ಅದರಲ್ಲಿ 53 ಯೂನಿಟ್ ಅತಿ ಹೆಚ್ಚು ಬಳಕೆ ಮಾಡುವವರು ಇದ್ದಾರೆ ಎಂದು ಹೇಳಿದರು.
200 ಯೂನಿಟ್ ಒಳಗೆ ಇದ್ದರೂ ಹೆಚ್ಚುವರಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಆದರೆ ಫಿಕ್ಸ್ಡ್ ಚಾರ್ಜ್ ಇರಲ್ಲ. ಸರಾಸರಿ ಬಳಕೆಯ 10% ಹೆಚ್ಚುವರಿ ಆದ ಬಳಿಕದ ಹೆಚ್ಚುವರಿ ಯೂನಿಟ್‌ಗೆ 9% ಟ್ಯಾಕ್ಸ್ ಬೀಳುತ್ತದೆ. ಪ್ರತಿ ತಿಂಗಳ ಸರಾಸರಿ ಮೀರಿದರೆ ಹೆಚ್ಚುವರಿ ಯೂನಿಟ್‌ನ ಹಣ ಕಟ್ಟಬೇಕು. 200 ಯೂನಿಟ್ ಮೇಲ್ಪಟ್ಟ ಬಳಕೆದಾರರು ಮುಂದಿನ ವರ್ಷ ಏನಾದರೂ ಕಡಿಮೆ ಬಳಕೆ ಮಾಡಿದರೆ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚುನಾವಣೆ ಗೆಲ್ಲೋಕೆ ಚೀಪ್ ಪಾಪ್ಯುಲಾರಿಟಿ ಮಾಡಬೇಕು- ಗ್ಯಾರಂಟಿಗಳ ಬಗ್ಗೆ ಕೃಷಿ ಸಚಿವ ಬಾಂಬ್
ನೋಂದಣಿ ಹೇಗೆ?
* ಸೇವಾ ಸಿಂಧು ಪೋರ್ಟಲ್‌ನಲ್ಲಿ ಯೋಜನೆಗಾಗಿ ಅಪ್ಲೈ ಮಾಡಬೇಕು. ಅದರಲ್ಲಿ ಪ್ರತ್ಯೇಕ ವ್ಯವಸ್ಥೆಯ ಪೋರ್ಟಲ್ ಲಭ್ಯವಿರುತ್ತದೆ.
* ಆಧಾರ್ ಕಾರ್ಡ್ ಬೇಕು, ಕನೆಕ್ಷನ್ ಐಡಿ, ಸ್ವಂತ ಕನೆಕ್ಷನ್ ಇದ್ದರೆ ಹೆಚ್ಚುವರಿ ಮಾಹಿತಿ ಬೇಡ.
* ಸ್ವಂತ ಮನೆ ಇಲ್ಲದವರು ಕರಾರು ಪತ್ರ ನೀಡಬೇಕು.
* ಸ್ವಯಂ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.
* ಬಾಡಿಗೆದಾರರು ಲೀಸ್ ಆಗ್ರಿಮೆಂಟ್ ವೋಟರ್ ಐಡಿ (ಅದೇ ಮನೆಯ ಅಡ್ರೆಸ್), ಕರಾರು ಪತ್ರ ಸಲ್ಲಿಸಬೇಕು.
* ಆಧಾರ್, ಆರ್‌ಆರ್, ನಂಬರ್ ಬೇಕು.
* ನೋಟರಿ, ರಿಜಿಸ್ಟರ್ ಎರಡು ಆಗುತ್ತೆ ಕರಾರು. ಅದಕ್ಕೆ ಕಂಡಿಷನ್ ಇರುವುದಿಲ್ಲ.
* ಬೋಗಸ್ ಎಂಬುದು ಗೊತ್ತಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೂ ಅವರಿಗೆ ಯೋಜನೆ ಕ್ಯಾನ್ಸಲ್ ಆಗುತ್ತದೆ.
ಗೃಹಜ್ಯೋತಿ ಯೋಜನೆ ಹೊರರಾಜ್ಯದವರಿಗೂ ಸಿಗಲಿದೆ. ಆಸ್ತಿ ತೆರಿಗೆ ಕಡ್ಡಾಯ ಇಲ್ಲ. ನೋಂದಣಿ ಜೂನ್ 15 ರಿಂದ ಆರಂಭವಾಗಿ ಜುಲೈ 5 ರವರೆಗೆ ಅವಕಾಶ ಇರುತ್ತದೆ. ಹೊಸ ಬಾಡಿಗೆದಾರರು ಅಥವಾ 12 ತಿಂಗಳಿಗಿಂತ ಕಡಿಮೆ ವಾಸವಾಗಿರುವವರ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗುತ್ತದೆ. ಇದರ ಬಗ್ಗೆ ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡುತ್ತೇವೆ. ಹೊಸ ಮಾರ್ಗಸೂಚಿ 2 ದಿನದಲ್ಲಿ ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗಲಿದೆ ಎಂದರು.///////