ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪದಕ ಪಡೆದ ಕ್ರೀಡಾಪಟುಗ ಅಭಿನಂದನೆ

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಿಶ್ವ ಪರಿಸರ ದಿನಾಚರಣೆ
ಬೆಳಗಾವಿ, ಜೂ.07 : ಬೆಳಗಾವಿಯಲ್ಲಿ ಜೂ.5 2023 ರಂದು ಬೆಳಗಾವಿ ನೂತನ ಕೇಂದ್ರ ಬಸ್ ನಿಲ್ದಾಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಸಿಗಳನ್ನು ನೆಡುವುದು ಹಾಗೂ ಸಾರ್ವಜನಿಕ ಪ್ರಯಾಣ ಕರಿಗೆ ಸಸಿಗಳನ್ನು ವಿತರಣೆ ಮಾಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಸಂದರ್ಭದಲ್ಲಿ IFS, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಭಾನು,ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ್ ರಾಥೋಡ್ ಹಾಗೂ ವಿಭಾಗದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.///
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಿಶ್ವ ಪರಿಸರ ದಿನಾಚರಣೆ: ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ
ಬೆಳಗಾವಿ, ಜೂ.07 : ಬೆಳಗಾವಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಆವರಣದಲ್ಲಿ ಗಣ್ಯರಿಂದ ಸಸಿ ನೆಡುವ ಮೂಲಕ ವಿಭಾಗದ ಕಾರ್ಮಿಕ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಶ್ರೀ ಎಸ್.ಎಮ್ ದೊಡಮನಿ, MBBS, ಗೌರವ ವೈದ್ಯಾಧಿಕಾರಿಗಳನ್ನು ನೇಮಿಸುವ ಮೂಲಕ ಕೇಂದ್ರ ಬಸ್ ನಿಲ್ದಾಣದಲ್ಲಿ ನೂತನ ಆರೋಗ್ಯ ಕೇಂದ್ರ (Health Clinic) ಉದ್ಘಾಟನಾ ಸಮಾರಂಭವನ್ನು ಜರುಗಿಸಲಾಯಿತು.
ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಆವರಣದಲ್ಲಿ ಮಂಗಳವಾರ (ಜೂ.6) ಏರ್ಪಡಿಸಲಾಗಿದ್ದ ಸಾರ್ವಜನಿಕ ಮಾಹಿತಿ ಕೇಂದ್ರ, ನೂತನ ಆರೋಗ್ಯ ಕೇಂದ್ರ (Health Clinic)ಉದ್ಘಾಟನಾ ಸಮಾರಂಭ ಜರುಗಿದವು.
ಒಟ್ಟು 2780 ಸಿಬ್ಬಂದಿಗಳು ಹಾಗೂ 11132 ಅವಲಂಬಿತರು ಈ ಸೌಲಭ್ಯವನ್ನು ಪಡೆಯಲು ವ್ಯವಸ್ಥೆ ಮಾಡಿದೆ.
ಆರೋಗ್ಯ ಕೇಂದ್ರ ದಲ್ಲಿ ಬಿಪಿ ತಪಾಸಣಾ ಉಪಕರಣ, ಇ.ಸಿ.ಜಿ ತಪಾಸಣಾ ಉಪಕರಣ, ತೂಕದ ಅಳತೆ ಪ್ರಮಾಣ ಯಂತ್ರ ಹಾಗೂ ರೋಗಿ ಉಪಚಾರಕ್ಕೆ ಪ್ರತ್ಯೇಕ ಕೊಠಡಿ ಹಾಗೂ ಅವಶ್ಯಕ ಉಪಕರಣಗಳನ್ನು ಒದಗಿಸಲಾಗಿದೆ.
ನಂತರ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ, ಹೆಚ್ಚು ಟ್ರಾವೆಲ್ ಕಾರ್ಡ್ ಬಳಸಿ ಪ್ರಯಾಣ ಸಿದ 03 ಜನ ಪ್ರಯಾಣ ಕರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು ಹಾಗೂ ಹೆಚ್ಚಿನ ಟ್ರಾವೆಲ್ ಕಾರ್ಡ್ ವಿಕ್ರಯ ಮಾಡಿದ 03 ಜನ ನಿರ್ವಾಹಕರಿಗೆ ನಗದು ಪುರಸ್ಕಾರ ನೀಡಿ, ಪ್ರಸಂಶನಾ ಪತ್ರ ವಿತರಣೆ ಮಾಡಲಾಯಿತು.
ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣ ಕರ ಅನುಕೂಲಕ್ಕಾಗಿ ಮಾಹಿತಿ ಕೇಂದ್ರ Information Deskಉದ್ಘಾಟಿಸಲಾಗಿದ್ದು,
ಮಾಹಿತಿ ಕೇಂದ್ರದ ಸೌಲಭ್ಯಗಳು : 24ಘಿ7 ಮಾದರಿಯಲ್ಲಿ ಕಾರ್ಯನಿರ್ವಹಣೆ,ಬಸ್ಸುಗಳ ವೇಳಾ ಪಟ್ಟಿ ಮಾಹಿತಿ,ಕುಂದುಕೊರತೆಗಳ ನಿವಾರಣೆ,ಪ್ರಥಮ ಚಿಕಿತ್ಸೆ ಸೌಲಭ್ಯ,ಅಂಗವಿಕಲ/ರೋಗಿ/ಹಿರಿಯ ನಾಗರಿಕರಿಗೆ ವ್ಹಿಲ್ ಚೇರ್ ಹಾಗೂ ಅವಶ್ಯಕ ಸಹಕಾರ,ಮುಂಗಡ ಟಿಕೇಟ್ / ಬಸ್ ಪಾಸ್ ಮಾಹಿತಿ,ಸ್ಮಾರ್ಟಕಾರ್ಡ ಸಂಬಂಧಿತ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ(IFS) ಮಂಜುನಾಥ ಚವ್ಹಾಣ, ಬೆಳಗಾವಿಯ ರಾಣ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ (ಏಂS) ರಾಜಶ್ರೀ ಜೈನಾಪೂರ, ಬೆಳಗಾವಿ ವಿಭಾಗದ ವಾ.ಕ.ರ.ಸಾ ಗೌರವ ವೈದ್ಯರು ಡಾ. ಎಸ್.ಎಂ ದೊಡಮನಿ, ಮುಖ್ಯ ಕಾರ್ಮಿಕ ಮತು ಸಂಸ್ಥೆಯ ಕಲ್ಯಾಣಾಧಿಕಾರಿಯಾದ ಶಶಿಧರ ಜಿ. ಕುಂಬಾರ, ಹುಬ್ಬಳ್ಳಿ ವಾ.ಕ.ರ.ಸಾ.ಸಂಸ್ಥೆ ಕೇಂದ್ರ ಕಛೇರಿಯ ಉಪಮುಖ್ಯ ಅಂಕಿ ಸಂಖ್ಯಾದಿಕಾರಿಗಳಾದ ಎಂ.ಆರ್ ಮುಂಜಿ ರವರು ಉಪಸ್ಥಿತರಿದ್ದು,
ಬೆಳಗಾವಿ ವಾ.ಕ.ರ.ಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾದ ಶ್ರೀ ಗಣೇಶ ಎಲ್ ರಾಠೋಡ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,
ಈ ಸಂದರ್ಭದಲ್ಲಿ ವಿಭಾಗದ ಹಿರಿಯ ಅಧಿಕಾರಿ, ಆಡಳಿತ ಸಿಬ್ಬಂದಿ ಹಾಗೂ ವಿವಿದ ಕಾರ್ಮಿಕ ಸಂಘಟನೆಗಳ ಕಾರ್ಮಿಕ ಮುಖಂಡರುಗಳು ಹಾಜರಿದ್ದರು. ಪ್ರಾರ್ಥನಾ ಗೀತೆಯನ್ನು ತಾಂತ್ರಿಕ ಸಿಬ್ಬಂದಿ ಅಜೀತಕುಮಾರ ಉಬರಟ್ಟಿ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಎಮ್.ಸತ್ಯನಾರಾಯಣ ರವರಿಂದ ಹಾಗೂ ವಂದಾನಾರ್ಪನೆಯನ್ನು ವಿಭಾಗೀಯ ಸಾರಿಗೆ ಅಧಿಕಾರಿ, ಕೆ.ಕೆ ಲಮಾಣ , ರವರು ಮಾಡಿದರು.
ಇದೇ ಸಂದರ್ಭದಲ್ಲಿ ವಿಭಾಗವು ಇತಿಹಾಸದಲ್ಲಿಯೇ ವಿಭಾಗದಲ್ಲಿ ಮೇ-2023 ರ ಮಾಹೆಯಲ್ಲಿ ಗರಿಷ್ಠ ಸಾರಿಗೆ ಆದಾಯ ಹಾಗೂ ಇಪಿಕೆಎಂ ಸಂಗ್ರಹ ದಾಖಲೆ ಮಾಡಿದ ಪ್ರಯುಕ್ತ ವಿಭಾಗದ ಎಲ್ಲಾ ಸಿಬ್ಬಂದಿಗಳಿಗೆ ಸಿಹಿ ವಿತರಣೆ ಕಾರ್ಯಕ್ರಮ ಮಾಡಲಾಯಿತು.////
ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ ಕಾನೂನು ತರಬೇತಿ ನೀಡಲು ಅರ್ಜಿ ಅಹ್ವಾನ.
ಬೆಳಗಾವಿ, ಜೂ.07 : ಬೆಳಗಾವಿಯಲ್ಲಿ 2023-24 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವತಿಯಿಂದ ಕಾನೂನು ತರಬೇತಿ ನೀಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆಸಕ್ತ ಹಿಂದುಳಿದ ವರ್ಗಕ್ಕೆ ಸೇರಿದ ಕಾನೂನು ಪದವೀಧರರು ನಿಬಂಧನೆಗೆ ಒಳಪಟ್ಟು ಅರ್ಜಿಗಳನ್ನು ಬೆಳಗಾವಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಅಧಿಕಾರಿಗಳಿಗೆ ಜೂ. 30 2023 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಹತೆ, ಷರತ್ತುಗಳು ಮತ್ತು ತರಬೇತಿಯ ವಿವರಗಳು: ತರಬೇತಿಯನ್ನು ಬೆಳಗಾವಿ ಜಿಲ್ಲೆಯಲ್ಲಿಯೇ ನೀಡಲಾಗುವುದು, ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ಖಾಲಿ ಇರುವ ಒಟ್ಟು 12 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು,
ಆಯ್ಕೆ ಮಾಡಲಾಗುವ ಪ್ರವರ್ಗ ವಾರು ವಿವರ:
ಪ್ರವರ್ಗ-2ಎ ಕ್ಕೆ 08, ಪ್ರವರ್ಗ-3ಎ ಗೆ 4, ಒಟ್ಟು 12 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು, ಪ್ರವರ್ಗವಾರು ಅರ್ಜಿಗಳು ಬಾರದೇ ಇದ್ದಲ್ಲಿ ಪ್ರವರ್ಗ-1 ಮತ್ತು ಪ್ರವರ್ಗ-3ಬಿ ಅಭ್ಯರ್ಥಿಗಳಿಂದ ಬಂದ ಅರ್ಜಿಗಳಿಂದ ಪುನರಾವರ್ತಿತ ಮೀಸಲಾತಿಯಂತೆ ನಿಯಮಾನುಸಾರ ಪ್ರವರ್ಗ-1 ಮತ್ತು ಪ್ರವರ್ಗ-3ಬಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು,
ಸರ್ಕಾರದ ಆದೇಶ ಸಂಖ್ಯೆ ಎಸ್.ಡಬ್ಲೂ.ಡಿ- 225/ಬಿ.ಸಿ.ಎ-2000 ಮಾ.30 2002 ರಲ್ಲಿ ವರ್ಗೀಕರಣ ಮಾಡಿರುವ ಪ್ರಕಾರ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಾಗಿರಬೇಕು, ಸರ್ಕಾರಿ ಆದೇಶ: ಎಸ್.ಡಬ್ಲೂ.ಡಿ-222/ಬಿಸಿಎಮ್-94 ಸೆ. 24 1994 ರ ಆದೇಶದಲ್ಲಿ ಸರ್ಕಾರವು ನಿಗಧಿ ಪಡಿಸಿರುವ ನಮೂನೆಗಳಲ್ಲಿ ಜಾತಿ/ ಆದಾಯದ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು, ಹಿಂದುಳಿದ ವರ್ಗಗಳ ಪ್ರವರ್ಗ-1 ರ ಅಭ್ಯರ್ಥಿಗಳು ರೂ 3.50 ಲಕ್ಷ ಹಾಗೂ 2ಎ, 3ಎ, 3ಬಿ ಅಭ್ಯರ್ಥಿಗಳು ರೂ 2.50 ಲಕ್ಷ ಗಳ ಆದಾಯದ ಮಿತಿಯೊಳಗಿರಬೇಕು,
ತರಬೇತಿ ಅವಧಿಯು 4 ವರ್ಷಗಳಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಪ್ರತಿ ಮಾಹೆ ಹಾಜರಾತಿ ಅನುಗುಣವಾಗಿ ರೂ 4000/- ಗಳ ತರಬೇತಿ ಭತ್ಯೆ (ಸ್ಟೈಪಂಡ್) ಮಂಜೂರು ಮಾಡಲಾಗುವುದು, ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮೀತಿಯಿಂದ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು, ಅರ್ಜಿಯ ಜೊತೆ ಎಸ್.ಎಸ್.ಎಲ್.ಸಿ. ಅಂಕ ಪಟ್ಟಿ, ಪದವಿ ಹಾಗೂ ಕಾನೂನು ಪದವಿಗಳ ಅಂಕ ಪಟ್ಟಿಗಳನ್ನು ದೃಡೀಕರಿಸಿ, ವಕೀಲರಾಗಿ ಪ್ರ್ಯಾಕ್ಟೀಸ್ ಮಾಡುತ್ತಿರುವ ಬಗ್ಗೆ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಮೀರಿರಬಾರದು,
ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾ.ಸಿಕ್ಯೂಟರ್ ಸರ್ಕಾರಿ ವಕೀಲರು ಅಥವಾ ಕನಿಷ್ಠ 20 ವರ್ಷಗಳ ವಕೀಲಿ ವೃತ್ತಿಯಲ್ಲಿ ಅನುಭವವುಳ್ಳ ಯಾವುದೇ ವಕೀಲರ ಅಧೀನದಲ್ಲಿ ನಿಯೋಜಿಸಲಾಗುವುದು, ಅಭ್ಯರ್ಥಿಯು ಬಾರ್‍ಕೌನ್ಸಿಲ್‍ನಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೊಂದಾಯಿಸಿರಬೇಕು, ಅಭ್ಯರ್ಥಿಯು ತರಬೇತಿಗೆ ಅರ್ಜಿ ಸಲ್ಲಿಸಲು ನಿಗದಿ ಮಾಡಿದ ಕೊನೆಯ ದಿನಾಂಕದಿಂದ ಹಿಂದಿನ ಎರಡು ವರ್ಷಗಳಲ್ಲಿ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು,
ತರಬೇತಿ ಅವಧಿಯು 4 ವರ್ಷಗಳಾಗಿದ್ದು, ಮಧ್ಯಾವಧಿಯಲ್ಲಿ ತರಬೇತಿಯನ್ನು ನಿಲ್ಲಿಸಬಾರದು. ತರಬೇತಿಯ ಅವಧಿಯಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆಗೆ ಸೇರಿದ್ದಲ್ಲಿ, ಈ ಷರತ್ತು ಅನ್ವಯಿಸುವುದಿಲ್ಲ, ಅಭ್ಯರ್ಥಿಗಳು ಸುಳ್ಳು ಮಾಹಿತಿ ಸಲ್ಲಿಸಿದ್ದಲ್ಲಿ ಅವರ ವಿರುಧ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಅಲ್ಲದೇ ಅವರಿಗೆ ನೀಡಲಾದ ತರಬೇತಿ ಭತ್ಯೆಯನ್ನು ಶೇ. 10 ರ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು, ಹಣ ಬಾಕಿ ಉಳಿದಲ್ಲಿ ಭೂ-ಕಂದಾಯ ವಸೂಲಿ ಮಾಡುವ ರೀತಿಯಲ್ಲಿ ಈ ಹಣವನ್ನು ವಸೂಲಿ ಮಾಡಲಾಗುವುದು, ಸದಸ್ಯ ಕಾರ್ಯದರ್ಶಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡಿ ಅಪೂರ್ಣಗೊಂಡಿರುವ ಹಾಗೂ ಕೇಳಿರುವ ಮಾಹಿತಿಯನ್ನು ಅರ್ಜಿಯೊಂದಿಗೆ ಒದಗಿಸಲು ವಿಫಲರಾದ ಮತ್ತು ಅವಧಿ ಮೀರಿ ಬಂದ ಅರ್ಜಿಗಳನ್ನು ಕಾರಣ ನೀಡದೇ ತಿರಸ್ಕರಿಸಲಾಗುವುದು,
ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಪ್ರಕಟಣೆಯೊಂದಿಗೆ ಇರುವ ಅರ್ಜಿ ನಮುನೆಯಲ್ಲಿಯೇ ಜೂ.30 2023 ರೊಳಗೆ ಬೆಳಗಾವಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಅಧಿಕಾರಿಗಳಿಗೆ ತಲಪುವಂತೆ ಅರ್ಜಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆಗಳಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಡಿಸಿ ಆಫೀಸ್ ಕಂಪೌಂಡ್ ಬೆಳಗಾವಿಯ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಬೆಳಗಾವಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////
ಪರಿಶಿಷ್ಟ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ಕಾನೂನು ತರಬೇತಿ ನೀಡಲು ಅರ್ಜಿ ಅಹ್ವಾನ.
ಬೆಳಗಾವಿ, ಜೂ.07: 2023-24ನೇ ಸಾಲಿಗೆ ಬೆಳಗಾವಿ ಜಿಲ್ಲೆಯ ಪರಿಶಿಷ್ಟ ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡುವ ಕುರಿತು ಮಾಸಿಕ ಸ್ಟೈಫಂಡ ಆಧಾರದ ಮೇಲೆ ಅರ್ಹ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಹಾಗೂ ವಕೀಲ ವೃತ್ತಿ ನಡೆಸಲು ಅರ್ಹತೆಯುಳ್ಳ ಕಾನೂನು ಪದವೀಧರರು ಮಾತ್ರ ಈ ತರಬೇತಿಗೆ ಅರ್ಹರು, ಮಹಿಳಾ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು, ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಯ ವಯಸ್ಸು 40 ವರ್ಷಗಳನ್ನು ಮೀರಿರಬಾರದು. ಕುಟುಂಬ ವಾರ್ಷಿಕ ಆದಾಯ(ತಂದೆ/ತಾಯಿ ಸೇರಿ) 2.50 ಲಕ್ಷ ರೂ.ಗಳ ಒಳಗೆ ಇರಬೇಕು ಹಾಗೂ ತಹಶೀಲ್ದಾರರಿಂದ ಪಡೆದ ಅಧಿಕೃತ ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ 2 ವರ್ಷಗಳ ತರಬೇತಿ ನೀಡಲಾಗುವುದು. ಹಾಗೂ ಮಾಹೆಯಾನ ರೂ.10000/- ರಂತೆ ಭತ್ಯೆ ನೀಡಲಾಗುವುದು, ತರಬೇತಿಯನ್ನು ಮದ್ಯದಲ್ಲಿ ಬಿಟ್ಟು ಹೋಗಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಉದ್ಯೋಗ ದೊರೆತಲ್ಲಿ ಈ ನಿಬಂಧನೆ ಅನ್ವಯವಾಗುವದಿಲ್ಲ, ಅಪೂರ್ಣ ಹಾಗೂ ಅವಧಿ ಮುಗಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು, ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಸರ್ಕಾರಿ ವಕೀಲರು ಅಥವಾ 20 ವರ್ಷಗಳಿಗಿಂತ ಕಡಿಮೆ ಇಲ್ಲದ ವಕೀಲ ವೃತ್ತಿಯಲ್ಲಿ ಅನುಭವವಿರುವ ಖಾಸಗಿ ಹಿರಿಯ ವಕೀಲರಲ್ಲಿ ತರಬೇತಿ ಪಡೆಯಲು ನಿಯೋಜಿಸಲಾಗುವುದು,
ಆಯ್ಕೆಯಾದ ಅಭ್ಯರ್ಥಿಯು ಸರ್ಕಾರದ ಎಲ್ಲ ನಿಂಬಂಧನೆಗೆ ಬದ್ದನಾಗಿರುತ್ತೇನೆ ಎಂದು ರೂ.20/- ಗಳ ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ಬರೆದುಕೊಡತಕ್ಕದ್ದು,ಆಯ್ಕೆಯಾದ ಅಭ್ಯರ್ಥಿಯು ಸುಳ್ಳು ಮಾಹಿತಿ ಹಾಗೂ ಪ್ರಮಾಣ ಪತ್ರಗಳನ್ನು ಒದಗಿಸಿದಲ್ಲಿ ಶಿಕ್ಷೆಗೊಳಪಡುವದಲ್ಲದೆ ಅವನು ಪಡೆದುಕೊಂಡ ತರಬೇತಿ ಭತ್ಯೆ ಪೂರ್ಣ ಹಣವನ್ನು ವಾರ್ಷಿಕ ಶೇಕಡಾ 10% ರಂತೆ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು.
ಅಭ್ಯರ್ಥಿಗಳು ಜೂ 15 2023 ರಿಂದ ಜು.15 2023 ರ ಒಳಗಾಗಿ ಇಲಾಖೆಯ ವೆಬಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ಔಓಐIಓಇ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ದಿನಾಂಕವನ್ನು ಮತ್ತು ಸ್ಥಳವನ್ನು ತಿಳಿಸಲಾಗುವುದು, ಅಭ್ಯರ್ಥಿಗಳು ಭರ್ತಿ ಮಾಡಿದ ನಿಗಧಿತ ಅರ್ಜಿಯೊಂದಿಗೆ ಅವಶ್ಯಕ ಮಾಹಿತಿಗಳಾದ ಪದವಿ ಪರೀಕ್ಷೆ ಹಾಗೂ ಕಾನೂನು ಪರೀಕ್ಷೆಗಳ ಎಲ್ಲ ವರ್ಷಗಳ ಸೇಮಿಸ್ಟರಗಳ ದೃಡೀಕೃತ ಅಂಕಪಟ್ಟಿ ಮತ್ತು ತೇರ್ಗಡೆ ಹೊಂದಿದ ಪ್ರಮಾಣ ಪತ್ರ, ಜನ್ಮ ದಿನಾಂಕ ಪ್ರಮಾಣ ಪತ್ರ, ಟಿ.ಸಿ,ಬಾರ್ ಅಸೋಶೀಯೇಸನ್‍ದಲ್ಲಿ ಸದಸ್ಯತ್ವ ಪಡೆದ ಬಗ್ಗೆ ಪ್ರಮಾಣ ಪತ್ರ ಹಾಗೂ ಆಧಾಯ ಪ್ರಮಾಣ ಪತ್ರ ಲಗತ್ತಿಸಬೇಕು, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಎರಡು ವರ್ಷದ ಒಳಗೆ ಪದವಿಯನ್ನು ಪಡೆದಿರಬೇಕು ಎಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪದಕ ಪಡೆದ ಕ್ರೀಡಾಪಟುಗ ಅಭಿನಂದನೆ
ಬೆಳಗಾವಿ, ಜೂ.07 :2022-23 ನೇ ಸಾಲಿನಲ್ಲಿ ರಾಣ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಭಾಗವಹಿಸಿ ಖೇಲೋ ಇಂಡಿಯಾ ಮತ್ತು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಪಡೆಯುವದರೊಂದಿಗೆ ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಿರುವ ಕ್ರೀಡಾಪಟುಗಳು ಅಭಿನಂದನೆಗಳನ್ನು ಸಲ್ಲಿಸಿದರು.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮೇ. 23 2023 ರಿಂದ ಜೂ.03 2023 ರ ವರೆಗೆ ಜರುಗಿದ ಖೇಲೋ ಇಂಡಿಯಾ ಗೇಮ್‍ನಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ಎಸ್.ವಿ.ಎಸ ಮಹಾವಿದ್ಯಾಲಯ ಹಾರೂಗೇರಿಯ ಶಿವಯ್ಯಾ ಪೂಜಾರಿ ಇವರು 97 ಕೆ.ಜಿ. ಗ್ರೀಕೋ ರೋಮನ್ ಸ್ಪರ್ಧೇಯಲ್ಲಿ ಬಂಗಾರದ ಪದಕ ಪಡೆದಿರುವರು,
ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಮನಗೂಳಿಯ ಕ್ರೀಡಾಪಟು ಮಂಜುನಾಥ ಗೌಡಪ್ಪನವರ ಇವರು 74 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದು ಕೀರ್ತಿ ತಂದಿರುವರು.
ತಂಡದ ವ್ಯವಸ್ಥಾಪಕರಾಗಿ ಮಹಾವಿದ್ಯಾಲಯ ಕುಡಚಿ ಬಿ. ಶಂಕರಾನಂದ, ದೈಹಿಕ ನಿರ್ದೇಶಕರಾದ ರಾಜು ಮಹೇಶ ವಾಡಗಿ ಅವರು ಕಾರ್ಯನಿರ್ವಹಿಸಿದರು, ಅಥ್ಲೇಟಿಕ್ ವಿಭಾಗದ ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯ ಕ್ರೀಡಾಪಟು ಶ್ರೀನಾಥ ದಳವಿ ಇವರು 400 ಮೀಟರ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿರುವರು.
ತಂಡದ ವ್ಯವಸ್ಥಾಪಕರಾಗಿ ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರು ಡಾ. ಸಿ. ರಾಮರಾವ್ ಅವರು ಭಾಗವಹಿಸಿದ್ದರು, ಹಾಗೆಯೇ ಯೇನೊಪೋಯಾ ವಿಶ್ವವಿದ್ಯಾಲಯ ಮಂಗಳೂರಿನಲ್ಲಿ ಜರುಗಿದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ದೇಹದಾಢ್ರ್ಯ ಸ್ಪರ್ಧೇಯ 90 ಕೆ.ಜಿ ವಿಭಾಗದಲ್ಲಿ ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯ ಕ್ರೀಡಾಪಟು ವ್ಹಿ.ಬಿ. ಕಿರಣ ಬಂಗಾರದ ಪದಕ ಪಡೆದು ವಿಶ್ವವಿದ್ಯಾಲಯ ಕ್ರೀಡಾ ವಿಭಾಗಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ತಂಡದ ವ್ಯವಸ್ಥಾಪಕರಾಗಿ ದೈಹಿಕ ನಿರ್ದೇಶಕರು, ಎಮ್.ಜಿ.ಮಹಾವಿದ್ಯಾಲಯ ನಂದಗಡ ಕೆ.ವಿ. ಪಾಟೀಲ್ ಅವರು ಭಾಗವಹಿಸಿದ್ದರು, ಅದೇ ರೀತಿ ಎಮ್.ಜಿ. ವಿಶ್ವವಿದ್ಯಾಲಯ ಔರಂಗಾಬಾದ ಮಹಾರಾಷ್ಟ್ರದಲ್ಲಿ ಜರುಗಿದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ರೋಡ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಮಖಂಡಿಯ ಬಿ.ಎಲ್.ಡಿ.ಈ ಮಹಾವಿದ್ಯಾಲಯದ ಸೈಕ್ಲಿಷ್ಟÀ ಕುಮಾರಿ ಚೈತ್ರಾ ಬುರ್ಜಿ ಇವರು 23 ಕಿ.ಮಿ ವೈಯಕ್ತಿಕ ಟೈಮ್ ಟ್ರೈಲ್ಸನಲ್ಲಿ ಬಂಗಾರದ ಪದಕ ಹಾಗೂ ಟೀಮ್ ಟ್ರೈಲ್ಸನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ರಾಂಪೂರಿನ ಸೌಮ್ಯ ಅಂತಪುರ ಇವರು 30 ಕಿ.ಮಿ. ಕ್ರೆಟೆರಿಯಾ ಸ್ಪರ್ಧೇಯಲ್ಲಿ ಬಂಗಾರದ ಪದಕದೊಂದಿಗೆ ವಿಶ್ವವಿದ್ಯಾಲಯದ ಹೆಮ್ಮೆಯ ಕ್ರಿಡಾಪಟುಗಳು ಎನಿಸಿಕೊಂಡಿರುವರು, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಮನಗೂಳಿಯ ಸಹನಾ ಕಡಿಗನೂರ ಮತ್ತು ವಿಜಯಪುರದ ಎಸ್.ಬಿ.ಎಸ್. ಅಕ್ಕಮಹಾವಿದ್ಯಾಲಯದ ಕುಮಾರಿ ಭಾವನಾ ಪಾಟೀಲ ಟಿಂಟ್ರೈಯಲ್ಸ್ ನಲ್ಲಿ ಕಂಚಿನ ಪದಕ ಪಡೆದಿರುವರು.
ಪುರುಷರ ವಿಭಾಗದಲ್ಲಿ ವಿಜಯಪುರದ ಸ್ವಾಮಿ ವಿವೇಕಾನಂದ ಮಹಾವಿದ್ಯಾಲಯದ ಕುಮಾರ ಅನೀಲ ಕಾಳಪ್ಪಗೋಳ ಇವರು 30 ಕಿ.ಮಿ ಕ್ರೈಟೇರಿಯಮ್‍ನಲ್ಲಿ ಬೆಳ್ಳಿಯ ಪದಕ ಪಡೆದಿರುವರು. ಇವರೊಂದಿಗೆ ತಂಡದ ವ್ಯವಸ್ಥಾಪಕರಾಗಿ ಜಮಖಂಡಿಯ ಬಿ.ಎಲ್.ಡಿ.ಈ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರು ಕೆ.ಎಮ್ ಶಿರಹಟ್ಟಿ, ಹಾಗೂ ತರಬೇತುದಾರರಾಗಿ ಜಮಖಂಡಿಯ ಡಿ.ವಾಯ್.ಎಸ್. ವಿಭಾಗದ ಶ್ರೀ ವಿಠ್ಠಲ ಬುರ್ಜಿಇವರು ಭಾಗವಹಿಸಿದ್ದರು, ಹಾಗೆಯೇ ಆಂದ್ರ ವಿಶ್ವವಿದ್ಯಾಲಯದಲ್ಲಿ ನಡೆದ ರೋಲ್ಲರ್ ಸ್ಕೇಟಿಂಗ್‍ನಲ್ಲಿ ಕುಮಾರ ಅಭಿಶೇಕ ನವಲೆ ಎಂ.ಜಿ. ಮಹಾವಿದ್ಯಾಲಯ ನಂದಗಡ ಇವರು ಕಂಚಿನ ಪದಕ ಪಡೆದಿರುತ್ತಾರೆ. ಇವರಿಗೆ ಮಾನ್ಯ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡರವರು, ಕುಲಸಚಿವರಾದ ಶ್ರೀಮತಿ ರಾಜಶ್ರೀ ಜೈನಾಪೂರ ಕೆ.ಎ.ಎಸ್., ಕುಲಸಚಿವರು ಮೌಲ್ಯಮಾಪನ ಪ್ರೊ. ಶಿವಾನಂದ ಗೊರನಾಳೆ, ವಿತ್ತಾಧಿಕಾರಿಗಳಾದ ಪ್ರೊ.ಆಕಾಶ ಎಸ್.ಬಿ., ಕ್ರೀಡಾ ನಿರ್ದೇಶಕರಾದ ಡಾ. ಜಗದೀಶ ಗಸ್ತಿ, ಹಾಗೂ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಗೌರವಿಸಿ ಶುಭ ಹಾರೈಸಿದರು ಎಂದು ರಾಣ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ರಾಜಶ್ರೀ ಜೈನಾಪೂರ, (ಕೆ.ಎ.ಎಸ್.) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////
ನಿಷೇಧಾಜ್ಞೆ ಆದೇಶ
ಬೆಳಗಾವಿ, ಜೂ.07: ಕರ್ನಾಟಕ ಲೋಕ ಸೇವಾ ಆಯೋಗ ಬೆಂಗಳೂರು ರವರು 2021ನೇ ಸಾಲಿನ ದ್ವಿತಿಯ ಅಧಿವೇಶನದ ಇಲಾಖಾ ಪರೀಕ್ಷೆಗಳು ಬೆಳಗಾವಿ ನಗರದ 08 ಪರೀಕ್ಷಾ ಕೇಂದ್ರಗಳಲ್ಲಿ ಜೂ. 09 2023 ರಿಂದ ಜೂ. 11 2023 ವರೆಗೆ ಹಾಗೂ ಜೂ. 26 2023 ರಿಂದ ಜೂ. 28 2023 ವರೆಗೆ ಮತ್ತು ಜು. 04 2023 ರಿಂದ ಜು.09 2023 ವರೆಗೆ ಪ್ರತಿ ದಿನ ಬೆಳಿಗ್ಗೆ 10. ಗಂಟೆಯಿಂದ ಮದ್ಯಾಹ್ನ 12. ಗಂಟೆವರೆಗೆ ಹಾಗೂ ಮದ್ಯಾಹ್ನ 2. ಗಂಟೆಯಿಂದ 4. ಗಂಟೆವರೆಗೆ ಪರೀಕ್ಷೆಗಳು ನಡೆಯಲಿವೆ,
ಸದರಿ ಪರೀಕ್ಷೆಗಳ ಕಾಲಕ್ಕೆ ದಂಡ ಪ್ರಕ್ರೀಯೆ ಸಂಹಿತೆಯ ಕಲಂ 144 ಸಿ.ಅರ್.ಪಿ.ಸಿ ಅಡಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ 1973 ಕಲಂ 144 ಪ್ರಕಾರ ನಿಷೇಧಾಜ್ಞೆ ಆದೇಶ ಹೋರಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಹೆಸರು ಮತ್ತು ವಿಳಾಸ :
ಸರ್ಕಾರಿ ಪದವಿ ಪೂರ್ವ ಕಾಲೇಜು, ವಡಗಾಂವ, ಬೆಳಗಾವಿ (ಜೈಲ ಶಾಲೆ ಸಂ 14 ಆವರಣ), ಸರ್ಕಾರಿ ಸರಸ್ವತಿ ಬಾಲಕೀಯರ ಪದವಿ ಪೂರ್ವ ಕಾಲೇಜ, ಶಹಾಪೂರ ಬೆಳಗಾವಿ, ಸರ್ಕಾರಿ ಚಿಂತಾಮಣರಾವ ಪದವಿ ಪೂರ್ವ ಕಾಲೇಜ, ವೀರಾಪೂರ ಗಲ್ಲಿ ಶಹಾಪೂರ ಬೆಳಗಾವಿ, ಸರಕಾರಿ ಪ್ರೌಢ ಶಾಲೆ ಕಣಬರ್ಗಿ, ಬೆಳಗಾವಿ ನಗರ-16, ಸರಕಾರಿ ಪ್ರೌಢ ಶಾಲೆ ಮಹಾಂತೇಶ ನಗರ, ಬೆಳಗಾವಿ, ಸರದಾರ್ಸ ಸರಕಾರಿ ಪದವಿ ಪೂರ್ವ ಕಾಲೇಜ, ಕಾಕತಿವೇಸ್ ಬೆಳಗಾವಿ, ಸರದಾರ್ಸ ಸರಕಾರಿ ಪ್ರೌಢಶಾಲೆ ಕಾಕತಿ ವೇಸ್ ಬೆಳಗಾವಿ, ಸರ್ಕಾರಿ ಸರಸ್ವತಿ ಬಾಲಕೀಯರ ಪದವಿ ಪೂರ್ವ ಕಾಲೇಜ, ನಂ.17 ಪ್ರಾಥಮಿಕ ಶಾಲೆ ಭಾರತ ನಗರ ಶಹಾಪೂರ ಬೆಳಗಾವಿ ಈ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 144 ಕಲಂ ಜಾರಿಯಲ್ಲಿ ಇರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪರೀಕ್ಷೆಯಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ಯಾವುದೇ ಅಡೆತಡೆಗಳಿಲ್ಲದೇ ನಡೆಯುವಂತೆ ನೋಡಿಕೊಳ್ಳಲು ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀಟರ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ದಂಡ ಪ್ರಕ್ರಿಯ ಸಂಹಿತೆ (ಸಿ.ಆರ್.ಪಿ.ಸಿ 1973) ಕಲಂ 20 ಮತ್ತು 144 ರ ಪ್ರಕಾರ ಪ್ರದತ್ತವಾದ ಅಧಿಕಾರ ಹೊಂದಿದವನಾಗಿ ಬೆಳಗಾವಿ ನಗರದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಆಯುಕ್ತರಾದ ಡಾ. ಬೋರಲಿಂಗಯ್ಯ ಎಂ ಬಿ, ಐ.ಪಿ.ಎಸ್, ಅವರು ತಿಳಿಸಿರುತ್ತಾರೆ.
ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ, ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು 200 ಮೀಟರ ಸುತ್ತಳತೆಯಲ್ಲಿ ಅಭ್ಯರ್ಥಿಗಳು, ಶಾಲಾ / ಕಾಲೇಜ ಸಿಬ್ಬಂದಿ ಜನರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರು, ಪಾಲಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ, ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಎಲ್ಲ ಝೆರಕ್ಸಾ ಅಂಗಡಿ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚುವಂತೆ ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಯಾವುದೇ ಸಭೆ/ ಸಮಾರಂಭಗಳು ನಡೆಯದಂತೆ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ, ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗಧೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕೂ ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಲು ಉಪಯೋಗಿಸಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ,
ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು ಕಲ್ಲುಗಳನ್ನು ಕ್ಷಾರ ಪದಾರ್ಥ ಇಲ್ಲವೇ ಸ್ಪೋಟಕ ವಸ್ತುಗಳು ಯಾವುದೇ ದಹನಕಾರಿ ವಸ್ತುಗಳು ಇತ್ಯಾದಿಗಳನ್ನು ಸದರೀ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ, ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು ಕಲ್ಲುಗಳು ಮತ್ತು ಎಸೆಯುವಂತಹ ವಸ್ತುಗಳನ್ನು, ಎಸೆಯುವ ಅಥವಾ ಚಿಮ್ಮುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ, ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ.
ಅಂಥಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಲ್ಲದೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು, ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲಿನ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖನ ಕೊಡುವುದು ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೈತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ಅಂತರದಲ್ಲಿ ದ್ವನಿವರ್ಧಕ ಉಪಯೋಗಿಸುವದನ್ನು ನಿಷೇಧಿಸಲಾಗಿದೆ.
ಈ ಆಜ್ಞೆಯು ಅಂತ್ಯಕ್ರಿಯೆ ಮೆರವಣ ಗೆಗಳಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದು ತೆಗೆಯಿಸಲಾದ ಮೆರವಣ ಗೆಗಳಿಗೆ ಅನ್ವಯಿಸುವದಿಲ್ಲ. ಸದರಿ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ದ ಕಲಂ 188 ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಮವನ್ನು ಜರುಗಿಸಲು ಸಂಬಂಧಪಟ್ಟ ಪಿ.ಐ ರವರಿಗೆ ಅನುಮತಿ ನೀಡಲಾಗಿದೆ. ಈ ನಿಷೇಧಾಜ್ಞೆಯನ್ನು ಬೆಳಗಾವಿ ನಗರ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಮತ್ತು ಪೊಲೀಸ್ ಕಮೀಷನರಾದ ಡಾ. ಬೋರಲಿಂಗಯ್ಯ ಎಂ ಬಿ, (ಐಪಿಎಸ್) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ನಾಗರಿಕರ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ, ಜೂ.07 : ಸ್ಮಾರ್ಟ್ ಸಿಟಿ ಯೋಜನೆಯ ಸಮರ್ಪಕ ಅನುಷ್ಠಾನ; ಕುಡಿಯುವ ನೀರು ಸರಬರಾಜು; ಆರೋಗ್ಯ ಸೌಲಭ್ಯ, ಕಸ ವಿಲೇವಾರಿ; ಸ್ಮಶಾನ ಅಭಿವೃದ್ಧಿ, ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ (ಜೂ.7) ನಡೆದ ಸ್ಮಾರ್ಟ್ ಸಿಟಿ, ಕುಡಿಯುವ ನೀರು ಸರಬರಾಜು, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರ ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ಪರಿಹರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸ್ಮಾರ್ಟ್ ಸಿಟಿ, ಹೆಸ್ಕಾಂ ಸೇರಿದಂತೆ ಪ್ರಮುಖ ಇಲಾಖೆಯ ಪ್ರತ್ಯೇಕವಾದ ಸಭೆ ನಡೆಸಲಾಗುವುದು.
ಅಧಿಕಾರಿಗಳಿಗೆ ಸ್ವಲ್ಪಮಟ್ಟಿಗೆ ಸಮಯ ನೀಡಲಾಗುವುದು. ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಬೇಕು. ಮಹಾನಗರ ಪಾಲಿಕೆಯ ಸದಸ್ಯರು ತಿಳಿಸಿದ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಬೇಕು ಎಂದರು.
ಶಾಹು ಮಹಾರಾಜರ ಪುತ್ಥಳಿ ಸ್ಥಾಪನೆಗೆ ಸೂಚನೆ:
ಬೆಳಗಾವಿ ನಗರದಲ್ಲಿ ಶಾಹು ಮಹಾರಾಜರ ಪುತ್ಥಳಿ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ನೀಡಲಾಗಿದೆ. ಪುತ್ಥಳಿ ನಿರ್ಮಾಣ ಕೆಲಸ ತಕ್ಷಣವೇ ಆಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಕ್ರೀಡಾಸಂಕೀರ್ಣ, ಈಜುಕೊಳ ಮತ್ತಿತರ ಕಾಮಗಾರಿಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಜನರ ಬಳಕೆಗೆ ಮುಕ್ತಗೊಳಿಸಬೇಕು.
ಸಭೆಯಲ್ಲಿ ಜನರು ಸಲ್ಲಿಸಿದ ಅಹವಾಲುಗಳನ್ನು ಗಂಭೀರವಾಗಿ ಪರಿಗಣ ಸಿ ಅವುಗಳನ್ನು ಪರಿಹರಿಸಬೇಕು. ಉತ್ತಮ ಸಲಹೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಬೆಳಗಾವಿ ನಗರ ಪ್ರವೇಶಿಸುವ ಮಾರ್ಗದಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ಇದನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು.
ವ್ಯಾಪಾರಸ್ಥರು, ಅಂಗಡಿಕಾರರು ರಾತ್ರಿ ವೇಳೆ ನಿಗದಿತ ಸ್ಥಳ ಹೊರತುಪಡಿಸಿ ಇತರೆಡೆ ಕಸ ಎಸೆದರೆ ಅಂತಹವರ ಮೇಲೆ ನಿಗಾವಹಿಸಿ ದಂಡ ವಿಧಿಸಬೇಕು ಎಂದು ಸೂಚನೆ ನೀಡಿದರು.
ಹಿಂದೆ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ ವಂತಿಕೆಯನ್ನು ತುಂಬಿದ ಫಲಾನುಭವಿಗಳು ಈಗ ಕಾರಣಾಂತರದಿಂದ ವಸತಿ ಸೌಲಭ್ಯ ಬೇಡ ಎಂದು ವಂತಿಕೆ ಹಣ ಹಿಂದಿರುಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದರೆ ಅಂತವರಿಗೆ ವಂತಿಗೆ ಹಣ ಹಿಂದಿರುಗಿಸಲು ಒಂದು ತಿಂಗಳಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಜಾರಕಿಹೊಳಿ ಹೇಳಿದರು.
ಕಾಕತಿ ಕೆಲವು ಭಾಗವು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುತ್ತಿದ್ದು, ತೆರಿಗೆ ಕಟ್ಟಿದರೂ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಈ ಸಮಸ್ಯೆ ಪರಿಹಾರ ಕಂಡುಹಿಡಿಯುವಂತೆ ತಿಳಿಸಿದರು.
ಅಕ್ರಮ-ಸಕ್ರಮ ಯೋಜನೆಯಡಿ ಅವಕಾಶಗಳಿದ್ದರೆ ಪರಿಶೀಲಿಸುವಂತೆ ಹೇಳಿದರು.
ವಾರ್ಡ್ ಸಮಿತಿಗಳನ್ನು ರಚಿಸಲು ಸೂಚನೆ:
ವಾರ್ಡ್ ಸಮಿತಿಗಳು ಇನ್ನೂ ರಚನೆಯಾಗದಿರುವ ಕುರಿತು ಮಾಹಿತಿಯನ್ನು ಪಡೆದುಕೊಂಡ ಅವರು, ಮುಂದಿನ ಒಂದು ತಿಂಗಳಿನಲ್ಲಿ ವಾರ್ಡ್ ಸಮಿತಿ ರಚಿಸುವಂತೆ ತಿಳಿಸಿದರು.
ಬೆಳಗಾವಿ ನಗರದಲ್ಲಿ ನಿರಂತರ ನೀರು(24ಸ7) ಸರಬರಾಜು ಮಾಡುವ ಯೋಜನೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಭೆ ನಡೆಸಿ ಕಾಮಗಾರಿಗಳನ್ನು ಚುರುಕುಗೊಳಿಸಲು ಹಾಗೂ ಸಮರ್ಪಕವಾಗಿ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಪೌರಕಾರ್ಮಿಕರ ಆಯ್ಕೆಯ ಪಟ್ಟಿ ಸಿದ್ಧವಾಗಿದ್ದರೆ(IFS)
ನೇಮಕಾತಿ ಆದೇಶ ನೀಡಬೇಕು ಎಂದು ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.
155 ಪೌರಕಾರ್ಮಿಕರ ನೇಮಕಾತಿ ಆದೇಶವನ್ನು ಒಂದೇ ಹಂತದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಕೆಲವು ಕಡೆಗಳಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡುವಾಗ ಕೇವಲ ಹತ್ತು ಅಡಿ ರಸ್ತೆ ಮಾಡಲಾಗುತ್ತಿದ್ದು, ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅನುಕೂಲವಾಗುವಂತೆ ನಗರದಲ್ಲಿ ಇರುವ ಎಲ್ಲ ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸಬೇಕು; ಅಗತ್ಯವಿದ್ದರೆ ದುರಸ್ತಿಗೊಳಿಸಬೇಕು. ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸಬೇಕು ಎಂದು ತಿಳಿಸಿದರು.
ಬೀದಿನಾಯಿಗಳ ನಿಯಂತ್ರಣಕ್ಕೆ ನಿಯಮಾವಳಿ ಪ್ರಕಾರ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು.
ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ. ನಾಲ್ಕೂ ದಿಕ್ಕುಗಳಲ್ಲಿ ಒಂದೊಂದು ಘಟಕಗಳನ್ನು ಸ್ಥಾಪಿಸುವ ಬಗ್ಗೆ ಗಂಭೀರವಾಗಿ ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.
ನಗರದಲ್ಲಿ ಎಲ್ಲ ಕಡೆಯೂ ಎಲ್.ಇ.ಡಿ. ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಕೆಲವು ಕಡೆಗಳಲ್ಲಿ ಕಡಿಮೆ ಸಾಮಥ್ರ್ಯದ ದೀಪ ಅಳವಡಿಸಿರುವುದರಿಂದ ಸಮರ್ಪಕವಾಗಿ ಬೆಳಕು ದೊರಕುತ್ತಿಲ್ಲ. ಸಾಮಥ್ರ್ಯವನ್ನು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರವೇಶ ಮಾರ್ಗದಲ್ಲಿ ಇರುವ ಕಸದ ರಾಶಿಯನ್ನು ತೆರವುಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ನಾಲ್ಕು ಕಡೆಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಕೂಡಲೇ ಪ್ರಸ್ತಾವ ಸಿದ್ಧಪಡಿಸಬೇಕು. ಸರಕಾರದಿಂದ ಅಗತ್ಯವಿರುವ ಅನುಮೋದನೆ ಕೊಡಿಸಲಾಗುವುದು ಎಂದರು.
ನಗರದಲ್ಲಿ ಆರಂಭಿಸಲಾಗಿರುವ ಆರು ಇಂದಿರಾ ಕ್ಯಾಂಟೀನ್ ಗಳು ಯಾವ ರೀತಿ ನಡೆಸಲಾಗುತ್ತದೆ ಎಂದು ಪ್ರಶ್ನಿಸಿದ ಅವರು, ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.
ಕುಟುಂಬ ಸಮೇತ ಅನೀರಿಕ್ಷಿತ ಭೇಟಿ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಆಸ್ತಿ ತೆರಿಗೆ, ಕಟ್ಟಡ ನಿರ್ಮಾಣ ಪರವಾನಿಗೆ ಹಾಗೂ ಸಿಸಿ ನೀಡುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಇವುಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆಯ ಆಯುಕ್ತರಿಗೆ ಶಾಸಕ ಆಸೀಫ್(ರಾಜು) ಸೇಠ್ ನಿರ್ದೇಶನ ನೀಡಿದರು.
ನಿರಂತರ ನೀರು(24ಸ7) ಯೋಜನೆ ಕಾಮಗಾರಿ ವಿಳಂಬ ಹಾಗೂ ನೀರು ಸರಬರಾಜು ವ್ಯವಸ್ಥೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ವಿವರಿಸಿದ ಶಾಸಕ ಸೇಠ್ ಅವರು, ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಲ್.ಅಂಡ್ ಟಿ ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಮೂಲ ಪ್ಲ್ಯಾನ್ ಒದಗಿಸಲು ಸೂಚನೆ:
ಸ್ಮಾರ್ಟ್ ಸಿಟಿ ಯೋಜನೆಯ ಬಹುತೇಕ ಕಾಮಗಾರಿಗಳು ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮಾತ್ರ ಹೆಚ್ಚಿನ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎಂಬ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಮಾತನಾಡಿದ ಶಾಸಕ ಸೇಠ್ ಅವರಯ, ಸ್ಮಾರ್ಟ್ ಸಿಟಿ ಯೋಜನೆಯ ಮೂಲ ರೂಪುರೇಷೆ ಏನಿತ್ತು ಮತ್ತು ನಂತರ ಮಾಡಲಾದ ಬದಲಾವಣೆಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ನಾಗರಿಕ ರಾಜೀವ್ ಟೋಪಣ್ಣವರ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಹಾಗೂ ಥರ್ಡ್ ಪಾರ್ಟಿ ಇನ್ಸಪೆಕ್ಷನ್ ಜವಾಬ್ದಾರಿಯನ್ನು ಐಐಟಿ ಅಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದಗೌಡ ಮೋದಗಿ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಕೂಡ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಮಗಾರಿ ಗುಣಮಟ್ಟ ಪರಿಶೀಲಿಸಲು ಒತ್ತಾಯ:
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮುಂಚೆಯಿಂದಲೂ ದೂರುಗಳು ಬಂದಾಗ ಪರಿಶೀಲಿಸಲಾಗಿದೆ. ಈಗಲೂ ಯಾವುದೇ ಕಾಮಗಾರಿಗಳ ಬಗ್ಗೆ ದೂರುಗಳಿದ್ದರೆ ಅವುಗಳ ಬಗ್ಗೆ ಯಾವುದೇ ಸಂಸ್ಥೆಯಿಂದಲಾದರೂ ಸೂಕ್ತ ತನಿಖೆ ನಡೆಸಬಹುದು ಎಂದು ಶಾಸಕ ಅಭಯ್ ಪಾಟೀಲ ತಿಳಿಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಒಟ್ಟಾರೆ 470 ಕೋಟಿ ರೂಪಾಯಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಹಾಗೂ ಕಾನೂನುಬಾಹಿರ ಕೆಲಸಗಳ ಬಗ್ಗೆ ಸಾರ್ವಜನಿಕರಲ್ಲಿನ ತಪ್ಪು ಕಲ್ಪನೆ ದೂರ ಮಾಡಲು ಸಮಗ್ರವಾದ ತನಿಖೆ ಸರಕಾರ ನಡೆಸಬೇಕು ಎಂದು ಅಭಯ್ ಪಾಟೀಲ ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ವಸತಿ ಯೋಜನೆ ಸೇರಿದಂತೆ ಯಾವುದೇ ಯೋಜನೆಯ ಸೌಲಭ್ಯಗಳನ್ನು ಕಲ್ಪಿಸುವಾಗ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯ ವಾರ್ಡುಗಳನ್ನು ಏಕೆ ಪರಿಗಣ ಸಿಲ್ಲ ಎಂದು ಪ್ರಶ್ನಿಸಿದರು.
ನಿರಂತರ ನೀರು ಯೋಜನೆ ಮಹತ್ವದ ಯೋಜನೆಯಾಗಿದ್ದು, ಸಾರ್ವಜನಿಕರು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ತಾಂತ್ರಿಕ ಕಾರಣಗಳಿಂದ ಎಲ್ ಅಂಡ್ ಟಿ ಕಂಪೆನಿಗೆ ದಂಡ ವಿಧಿಸುವುದು ಸಮಂಜಸವಲ್ಲ ಎಂದರು. ಇದಕ್ಕಾಗಿ ಪ್ರತ್ಯೇಕ ಸಭೆ ಕರೆದು ಕಾಮಗಾರಿಗಳ ಸಮರ್ಪಕವಾಗಿ ಅನುಷ್ಠಾನಕ್ಕೆ ಪ್ರಯತ್ನಿಸೋಣ ಎಂದು ಹಟ್ಟಿಹೊಳಿ ಹೇಳಿದರು.
ವಸತಿ ಯೋಜನೆಯಡಿ ಆಯ್ಕೆ ಮಾಡಿರುವ ಫಲಾನುಭವಿಗಳು ನಿಗದಿತ ಕಂತು ತುಂಬದಿರುವ ಅಥವಾ ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು ಹೊಸ ಪಟ್ಟಿ ಸಿದ್ಧಪಡಿಸಲು ಸಾಧ್ಯವಾದರೆ ಗ್ರಾಮೀಣ ಮತಕ್ಷೇತ್ರದ ವಾರ್ಡುಗಳ ಜನರನ್ನು ಪರಿಗಣ ಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ…
ನಗರದಲ್ಲಿ ಖಾಲಿ ಇರುವ ವಿದ್ಯುತ್ ಕಂಬಗಳಿಗೆ ಹೆಚ್ಚುವರಿ 9 ಸಾವಿರ ಎಲ್.ಇ.ಡಿ. ದೀಪಗಳನ್ನು ಅಳವಡಿಸಲು ಪ್ರಸ್ತಾವ ಸರಕಾರಕ್ಕೆ ಕಳಿಸಲಾಗಿದೆ. ಅನುಮೋದನೆ ದೊರೆತ ತಕ್ಷಣವೇ ದೀಪ ಅಳವಡಿಸಲಾಗುವುದು ಎಂದರು.
ಮಹಾಪೌರರಾದ ಶೋಭಾ ಸೋಮನಾಚೆ, ಉಪ ಮಹಾಪೌರರಾದ ರೇಷ್ಮಾ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಕೆಯುಐಡಿಎಫ್ ಸಿ ಜಂಟಿ ನಿರ್ದೇಶಕರಾದ ಪದ್ಮಾ ಮತ್ತಿತರರು ಉಪಸ್ಥಿತರಿದ್ದರು.
ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ಕೆಯುಐಡಿಎಫ್ ಸಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು. ಅಹವಾಲುಗಳನ್ನು ಕೂಡ ಸಲ್ಲಿಸಿದರು.
ಸಭೆಯ ಬಳಿಕ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಮಹಾನಗರ ಪಾಲಿಕೆಯ ವತಿಯಿಂದ ಮಹಾಪೌರರು ಮತ್ತು ಉಪ ಮಹಾಪೌರರು ಸನ್ಮಾನಿಸಿದರು.