ಮೋದಿಗೂ, ಸಫಾಯಿ ಕರ್ಮಚಾರಿಗೂ ಒಂದೇ ವೋಟು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಂವಿಧಾನ ಮೂಲಕ ಒಬ್ಬ ವ್ಯಕ್ತಿಯಿಂದ ಒಂದು ವೋಟ್. ಅದಕ್ಕೆ ಒಂದೇ ಬೆಲೆ ಇದೆ. ಮೋದಿಗೂ ಒಂದೇ ವೋಟು, ಸಪಾಯಿ ಕರ್ಮಚಾರಿಗೂ ಒಂದೇ ವೋಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭೀಮ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಈ ದೇಶಕ್ಕೆ ಯೋಗ್ಯವಾದ ಸಂವಿಧಾನ ಕೊಟ್ಟಿದ್ದಾರೆ. ಸಮಾಜದ ಅವಶ್ಯಕತೆ ಅನುಗುಣವಾಗಿ ಸಂವಿಧಾನ ತಿದ್ದುಪಡಿ ಮಾಡಲು ಅವಕಾಶ ಕೊಟ್ಟಿದ್ದರು. ಸಂವಿಧಾನ ರಚನೆ ಮಾಡುವಾಗ ಜಗತ್ತಿನ ಅನೇಕ ದೇಶಗಳ ಸಂವಿಧಾನ ಓದಿ ಭಾರತಕ್ಕೆ ಯೋಗ್ಯವಾದ ಸಂವಿಧಾನ ನೀಡಿದ್ದಾರೆ. ಯೋಗ್ಯವಾದವರ ಜತೆ ಇದ್ರೆ ಒಳ್ಳೆಯ ಸಂವಿಧಾನ, ಕೆಟ್ಟವರ ಕೈಯಲ್ಲಿ ಇದ್ರೆ ಅದು ಕೆಟ್ಟ ಸಂವಿಧಾನ. ದೇಶ, ರಾಜ್ಯದಲ್ಲಿ ಕೆಟ್ಟವರು, ಒಳ್ಳೆಯರು ಅಧಿಕಾರಕ್ಕೆ ಬಂದಿದ್ದಾರೆ. ಅವರು ಸಂವಿಧಾನದಡಿ ಇದ್ದು ಕೆಟ್ಟವರಾಗಿ ಕೆಲಸ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿ ಸರ್ಕಾರದ ಸಚಿವ ಅನಂತ್ ಕುಮಾರ್ ಹೆಗ್ಡೆ ಒಂದು ಮಾತು ಹೇಳಿದ್ರು. ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡಲು ಎಂದಿದ್ದರು. ಆದರೆ ಇದನ್ನು ಮೋದಿ, ಅಮಿಶ್ ಶಾ ವಿರೋಧ ಮಾಡಲಿಲ್ಲ. ನೀನು ನಮ್ಮ ಸರ್ಕಾರದಲ್ಲಿ ಇರುವುದಕ್ಕೆ ಅಯೋಗ್ಯ ಎಂದು ಹೇಳಲಿಲ್ಲ. ಇದರ ಅರ್ಥ ಅವರಿಗೆ ಗೊತ್ತಿದ್ದ ಸಚಿವರು ಈ ಮಾತು ಹೇಳಿದ್ದಾರೆಂದು. ರಾಜ್ಯದಲ್ಲಿ ಕೋಮುವಾದಿ ಪಕ್ಷ ಕಿತ್ತು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಿರಾ ಅದಕ್ಕೆ ನಿಮಗೆ ಅಭಿನಂದನೆ ಎಂದು ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ಆಗಬೇಕು. ಇಲ್ಲ ಅಂದ್ರೆ ಸಂವಿಧಾನ ಇದ್ದು ಪ್ರಯೋಜನ ಆಗಲ್ಲ. ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ನವರು. ನಮ್ಮವರು ಅಧಿಕಾರಕ್ಕಾಗಿ ಬಿಜೆಪಿಗೆ ಹೋದ್ರು. ಇಲ್ಲಿ ಸೀಟ್ ಸಿಗಲಿಲ್ಲ ಅಂತ ಅಲ್ಲಿ ಹೋಗಿ ಸಿದ್ಧಾಂತ ಪ್ರತಿಪಾದನೆ ಮಾಡುತ್ತಾರೆ. ಆರ್‌ಎಸ್‌ಎಸ್ ಸಿದ್ಧಾಂತ ಪ್ರತಿಪಾದನೆ ಮಾಡುತ್ತಾರೆ. ಸಂವಿಧಾನ ವಿರೋಧಿಗಳು ಬಿಜೆಪಿಯವರು ಎಂದು ತೀರ್ಮಾನ ಮಾಡಬೇಕು ಎಂದರು.
ಗೋಲ್ವಾಳ್ಕರ್ ತಮ್ಮ ‘ಚಿಂತನಗಂಗ’ ಪುಸ್ತಕದಲ್ಲಿ ಸಂವಿಧಾನ ಸರಿ ಇಲ್ಲ ಎಂದು ಬರೆದಿದ್ದಾರೆ. ಅಂಬೇಡ್ಕರ್ ಅವರನ್ನು ಈಗ ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ನಮ್ಮ ಗ್ಯಾರಂಟಿಗಳ ಬಗ್ಗೆ ಇಲ್ಲ,ಸಲ್ಲದ ಟೀಕೆ ಮಾಡ್ತಾರೆ. ಅವರು ಏನೂ ಕೊಡದೇ ಮಾತಾಡ್ತಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ಬಗ್ಗೆ ಮಾತಾಡುವ ಅಗತ್ಯ ಇಲ್ಲ. ಐದೂ ಗ್ಯಾರಂಟಿಗಳ ಜಾರಿಗೆ ಆದೇಶ ಮಾಡಿದ್ದೀವಿ, ಗ್ಯಾರಂಟಿಗಳನ್ನು ಕೊಟ್ಟೇ ಕೊಡ್ತೀವಿ. ಗ್ಯಾರಂಟಿಗಳನ್ನು ಬಡವರ ಪಾರವಾಗಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿಗಳನ್ನು IAS ಅಧಿಕಾರಿಗಳಿಗೆ ಯಾಕೆ? ಬಡವರಿಗೆ ಕೊಡೋಣ. ಈ ಯೋಜನೆಯಡಿ ರಾಜ್ಯದ 85% ಮಹಿಳೆಯರಿಗೆ 2 ಸಾವಿರ ಸಿಗುತ್ತೆ. ಅದನ್ನು ಯಾರೂ ಮಾತನಾಡುವುದಿಲ್ಲ. ಎಲ್ಲಾರಿಗೂ 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಯಾರು ನುಡಿದಂತೆ ನಡೆದಿಲ್ಲವೋ ಅವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ. 5 ಗ್ಯಾರಂಟಿ ಜಾರಿ ಮಾಡುವುದು ಗ್ಯಾರಂಟಿ. ಇಂದಿರಾ ಕ್ಯಾಂಟಿನ್ ಕೂಡ ಮತ್ತೆ ಪ್ರಾರಂಭ ಮಾಡುತ್ತೇವೆ. ನಿಮ್ಮ ಹೋರಾಟ ಕೋಮುವಾದ ವಿರುದ್ಧ ಇದ್ದರೆ ಅದಕ್ಕೆ ನಮ್ಮ ಬೆಂಬಲ ಇದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.//////