Belagavi News In Kannada | News Belgaum

ನಾಳೆ ಬೆಳಗಾವಿಯಲ್ಲಿ ‘ಶಕ್ತಿ ಯೋಜನೆ’ಗೆ ಸಚಿವ ಸತೀಶ ಜಾರಕಿಹೊಳಿ ಚಾಲನೆ

ಬೆಳಗಾವಿ: ಕಾಂಗ್ರೆಸ್​ ಸರ್ಕಾರ ಮಹತ್ವದ 5 ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ”ಗೆ ನಾಳೆ ಬೆಳಗ್ಗೆ 12 ಗಂಟೆಗೆ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಗಮಿಸಲಿದ್ದಾರೆ. ಉತ್ತರ ಶಾಸಕ ಆಸೀಫ್‌ (ರಾಜು) ಸೇಠ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಚಿಕ್ಕೊಡಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ರಾಜ್ಯಸಭೆ ಸಂಸದ ಈರಣ್ಣಾ ಕಡಾಡಿ, ಬೆಳಗಾವಿ ಸಂಸದೆ ಮಂಗಲ ಸುರೇಶ ಅಂಗಡಿ ಆಗಮಿಸಲಿದ್ದಾರೆ.
ನಾಳೆ ನಡೆಯುವ “ಶಕ್ತಿ ಯೋಜನೆ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತ ಪಿ. ಸುನೀಲ್‌ ಕುಮಾರ್‌, ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ ಎನ್‌. ಸತೀಶಕುಮಾರ್‌, ಜಿಲ್ಲಾಧಿಕಾರಿ‌ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಡಾ. ಸಂಜೀವ ಪಾಟೀಲ, ಹುಬ್ಬಳ್ಳಿ ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌, ಬೆಳಗಾವಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ್, ಜಿಪಂ ಸಿಇಓ ಹರ್ಷಲ್‌ ಭೋಯರ್‌, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು‌ ಹಾಗೂ ಬೆಳಗಾವಿ ವಾ.ಕ.ರ.ಸಾ. ಸಂಸ್ಥೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಭಾಗವಹಿಸಿಲಿದ್ದಾರೆ ಎಂದು ಸಚಿವರ ಆಪ್ತ ಸಹಾಯರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ನಾಳೆಯಿಂದ ಮಹಿಳೆಯರು ರಾಜ್ಯದ‌ ಒಳಗೆ‌ ಎಲ್ಲಿಂದ ಎಲ್ಲಿಗೆ ಬೇಕಾದರೂ, ಎಷ್ಟು ಬಾರಿ ಬೇಕಾದರೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆದರೆ ರಾಜ್ಯದ ಒಳಗೆ ಸಂಚಾರ ಮಾಡುವ ಬಸ್ಸುಗಳಲ್ಲಿ ‌ಮಾತ್ರ ಪ್ರಯಾಣಿಸಬೇಕು. ನಾಲ್ಕು ನಿಗಮದ ಎಸಿ ಬಸ್ ಹೊರತುಪಡಿಸಿ ಎಲ್ಲಾ ವೇಗದೂತ ಸೇರಿದಂತೆ ನಾರ್ಮಲ್​ ಬಸ್​​ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಹೊರ ರಾಜ್ಯಗಳಿಗೆ ಸಂಚಾರ ಮಾಡುವ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.

ಉಚಿತ ಪ್ರಯಾಣಕ್ಕೆ ತೋರಿಸಬೇಕಾದ ದಾಖಲೆಗಳು: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ‌ಲೈಸನ್ಸ್, ಕೇಂದ್ರ ಸರ್ಕಾರ ಅಥವಾ ‌ರಾಜ್ಯ ಸರ್ಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ. ಇವುಗಳಲ್ಲಿ ಯಾವುದಾದರೂ ಒಂದು ತೋರಿಸಿ ಉಚಿತ ಪ್ರಯಾಣ ಮಾಡಬಹುದಾಗಿದೆ.
ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳೋದು ಹೇಗೆ: ಯಾವುದಾದರೂ ಹತ್ತಿರದ ಸೈಬರ್ ಸೆಂಟರ್​​​ಗೆ ಭೇಟಿ ನೀಡಿ ಸೇವಾ ಸಿಂಧೂ ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ, ಆಧಾರ್ ಕಾರ್ಡ್ ಅಥವಾ ಅಡ್ರೆಸ್ ಫ್ರೂಪ್ ನೀಡಿದ್ರೆ ಸ್ಮಾರ್ಟ್ ಕಾರ್ಡ್ ಮಾಡಿಕೊಡಲಾಗುವುದು, ಸ್ಮಾರ್ಟ್ ಕಾರ್ಡಿಗೆ ಆಗುವ ಖರ್ಚನ್ನು ಸರ್ಕಾರವೇ ಭರಿಸಲಿದೆ.