1 ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾದ ‘ಮಿಯಾಝಾಕಿ’ ಮಾವು

ಕೋಲ್ಕತ್ತಾ: ಜಪಾನ್ ಮೂಲದ ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಖ್ಯಾತಿ ಪಡೆದಿರುವ ಮಿಯಾಝಾಕಿ ಮಾವನ್ನು ಪಶ್ಚಿಮಬಂಗಾಳದಲ್ಲಿ ಕೆ.ಜಿಗೆ 2.75 ಲಕ್ಷ ರೂ. ನೀಡಿ ಖರೀದಿಸಲಾಗಿದೆ.
ಸಿಲಿಗುರಿಯ ಮಾಡೆಲ್ಲಾ ಕೇರ್ ಟೇಕರ್ ಸೆಂಟರ್ ಹಾಗೂ ಶಾಲೆಯಲ್ಲಿ ಪ್ರವಾಸೋದ್ಯಮ ಸಂಸ್ಥೆ ಸಹಯೋಗದೊಂದಿಗೆ ಮೂರು ದಿನಗಳ ಮಾವು ಉತ್ಸವ ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ ಮಿಯಾಝಾಕಿ ಎಂಬ ತಳಿಯ ಮಾವಿನ ಹಣ್ಣು ದಾಖಲೆ ಬೆಲೆಗೆ ಮಾರಾಟವಾಗಿದೆ. ಈ ಮಾವಿನ ಹಣ್ಣನ್ನು ‘ಸೂರ್ಯನ ಮೊಟ್ಟೆ’ ಎಂದೂ ಕರೆಯುತ್ತಾರೆ.
ಇಲ್ಲಿ 262 ಬಗೆಯ ಮಾವುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಇದರಲ್ಲಿ ಮಿಯಾಝಾಕಿಯೇ ಪ್ರಮುಖ ಆಕರ್ಷಣೆಯಾಗಿತ್ತು. ಈ ಮಾವಿನ ತಳಿ ಮಾರಾಟಕ್ಕೆ ಇಟ್ಟಿದ್ದ ಮಾಲೀಕರಿಂದ ಮಾಹಿತಿಗಳನ್ನು ಪಡೆದು ಕೆಲವರು ಖರೀದಿ ಮಾಡಿದ್ದಾರೆ.
ವಿಶೇಷತೆ ಏನು..?: ತನ್ನ ವಿಭಿನ್ನ ಆಕಾರ ಹಾಗೂ ಬಣ್ಣದಿಂದ ಬೇರೆ ಮಾವಿಗಿಂತ ಈ ಮಾವು ಹೆಚ್ಚು ಆಕರ್ಷಿತವಾಗಿ ಕಾಣುತ್ತದೆ. ನೇರಳೆ ಬಣ್ಣದ ಈ ಹಣ್ಣನ್ನು ಜಪಾನ್‍ನ ಕ್ಯೂಶು ಪ್ರಾಂತ್ಯದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ನಂತರ ಈ ಹಣ್ಣನ್ನು ಜಪಾನ್‍ನೆಲ್ಲೆಡೆ ಸರಬರಾಜು ಮಾಡಲಾಗುತ್ತದೆ. ಜಪಾನ್‍ನಲ್ಲಿ ಇದು ಸ್ಥಳೀಯ ಹಣ್ಣಿನ ತಳಿಯಾಗಿದ್ದು, ಏಪ್ರಿಲ್‍ನಿಂದ ಆಗಸ್ಟ್ ನಲ್ಲಿ ಬೆಳೆಯಲಾಗುತ್ತದೆ./////