Belagavi News In Kannada | News Belgaum

ಬರಿದಾದ ಕೃಷ್ಣೆಯ ಒಡಲು; ನದಿ ಬಿಟ್ಟು ನಾಡಿನತ್ತ ಹೆಜ್ಜೆಯಿಟ್ಟ ಮೊಸಳೆ

ಬೆಳಗಾವಿ: ಬೇಸಿಗೆ ಹೊಡೆತಕ್ಕೆ ದಿನದಿಂದ ದಿನಕ್ಕೆ ಕೃಷ್ಣಾ ನದಿಯಲ್ಲಿ ನೀರು ಕಡಿಮೆ ಆಗುತ್ತಿದ್ದು, ನದಿ ಒಡಲಿನಿಂದ ಮೊಸಳೆಗಳು ಆಹಾರ ಅರಸಿ ರೈತರ ತೋಟದ ವಸತಿ ಪ್ರದೇಶಗಳಿಗೆ ಬಿಡಾರ ಹೂಡುತ್ತಿವೆ. ಇದರಿಂದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಿರುವಾಗ ಗ್ರಾಮಸ್ಥರು ಬೃಹದಾಕಾರದ ಮೊಸಳೆಯೊಂದನ್ನು ತೆಂಗಿನ ಮರಕ್ಕೆ ಕಟ್ಟಿ ಹಾಕಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ದರ್ಗಾ ಗ್ರಾಮದ ನದಿ ತೀರದ ಜನ ವಸತಿ ಪ್ರದೇಶಗಳಿಗೆ ಇವತ್ತು ನಸುಕಿನ ಜಾವ ಮೂರು ಗಂಟೆ ಆಸುಪಾಸಿನಲ್ಲಿ ಪ್ರಕಾಶ ಸನದಿ ಎಂಬುವರ ಮನೆಗೆ ದೈತ್ಯಾಕಾರದ ಮೊಸಳೆಯೊಂದು ಪತ್ತೆಯಾಗಿದೆ. ಸಾಕಿರುವ ಪ್ರಾಣಿಗಳ ಮೇಲೆ ದಾಳಿ ಮಾಡಲು ಮುಂದಾಗುತ್ತಿದ್ದಂತೆ ಕುಟುಂಬಸ್ಥರು ದೊಣ್ಣೆಗಳಿಂದ ಮೊಸಳೆಯನ್ನು ಹೊಡೆದು, ಅಕ್ಕ ಪಕ್ಕದ ರೈತರು ಒಟ್ಟಾಗಿ ಮೊಸಳೆಯನ್ನು ಹಿಡಿದು ಕಟ್ಟಿ ಹಾಕಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೊಸಳೆಯ ರಕ್ಷಣೆಯನ್ನು ರಕ್ಷಿಸಿದ್ದಾರೆ.

ಇದೆ ವೇಳೆ ರೈತ ಪ್ರಕಾಶ ಸನದಿ ಮಾತನಾಡಿ, ಬೆಳಗಿನಜಾವ 3 ಗಂಟೆಗೆ ಮೊಸಳೆ ಮನೆಗೆ ಬಂದು ನಮ್ಮ ಮೇಕೆ ಮರಿಯನ್ನು ಹಿಡಿದಿತ್ತು. ಈ ವೇಳೆ ಜೊತೆಗಿದ್ದ ಮೇಕೆಗಳು ಚೀರಾಟ ಮಾಡುತ್ತಿದ್ದಂತೆ ನಾವು ಎಚ್ಚೆತ್ತುಕೊಂಡು ಮೊಸಳೆ ಬಾಯಿಂದ ನಮ್ಮ ಆಡಿನ ಮರಿಯನ್ನು ರಕ್ಷಣೆ ಮಾಡಿದೆವು. ಬಳಿಕ ತೋಟದ ಜನರೊಂದಿಗೆ ಸೇರಿ ಮೊಸಳೆಯನ್ನು ಹಗ್ಗದ ಸಹಾಯದಿಂದ ಮರಕ್ಕೆ ಕಟ್ಟಿಹಾಕಿದ್ದೇವೆ. ನದಿಯಲ್ಲಿ ನೀರು ಕಡಿಮೆ ಆಗಿದ್ದರಿಂದ ಮೊಸಳೆಗಳು ಕೃಷಿ ಜಮೀನಿಗೆ ಬರುತ್ತಿದ್ದು, ನಮಗೆ ಆತಂಕವಾಗುತ್ತಿದೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ನಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು./////