ಸರಕಾರದಿಂದಲೇ ವಿಮಾನ ನಿಲ್ದಾಣಗಳ ನಿರ್ವಹಣೆ: ಸಚಿವ ಎಂ.ಬಿ. ಪಾಟೀಲ್ ಹೇಳಿಕೆ

ಬೆಂಗಳೂರು: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿ ಎರಡನೇ ಹಂತದ ನಗರಗಳಲ್ಲಿ ತಲೆಯೆತ್ತಿರುವ ಮತ್ತು ತಲೆಯೆತ್ತಲಿರುವ ವಿಮಾನ ನಿಲ್ದಾಣಗಳನ್ನು ಸ್ವತಃ ಸರಕಾರವೇ ಸಂಪೂರ್ಣವಾಗಿ ಮುನ್ನಡೆಸುವ ಬಗ್ಗೆ ಗಂಭೀರ ಚಿಂತನೆ ನಡೆದಿದ್ದು, ಈ ಮೂಲಕ ಲಾಭ ಗಳಿಕೆ ಜತೆಗೆ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳ ಸಂಪೂರ್ಣ ನಿರ್ವಹಣೆಯನ್ನು ಖಾಸಗಿ ಕಂಪೆನಿ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಇನ್ನು ಮುಂದೆ ಕಾರ್ಯಾರಂಭಗೊಳ್ಳುವ ಶಿವಮೊಗ್ಗ, ಹಾಸನ, ವಿಜಯಪುರ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ಸೇವೆ ಮತ್ತು ನಿರ್ವಹಣೆಯನ್ನು ಸರಕಾರವೇ ವಹಿಸಲು ಚಿಂತನೆ ನಡೆಸಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಶಿವಮೊಗ್ಗ, ವಿಜಯಪುರ, ಹಾಸನ ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ಧವಾಗಿದೆ. ನಿರ್ವಹಣೆಗೆ ಕೇಂದ್ರ ವಿಮಾನಯಾನ ನಿರ್ದೇಶನಾಲಯ ಒಪ್ಪಿಗೆ ನೀಡಿದೆ. ಅದೇ ರೀತಿ ನಿರ್ಮಾಣ ಹಂತದಲ್ಲಿ ಇರುವ ವಿಜಯಪುರ ಮತ್ತು ಹಾಸನ ವಿಮಾನ ನಿಲ್ದಾಣಗಳನ್ನೂ ನಿರ್ವಹಣೆ ಮಾಡುವ ಉದ್ದೇಶ ಇದೆ ಎಂದರು.
ಸಾಮಾನ್ಯವಾಗಿ ಖಾಸಗಿ- ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿ, ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕೆಲವು ಕಂಪೆನಿಗಳಿಗೆ ವಹಿಸಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಹಿಸಲಾಗುತ್ತದೆ. ಸರಕಾರವೇ ವಹಿಸಿಕೊಳ್ಳುವುದರಿಂದ ನೇರವಾಗಿ ಮತ್ತು ಪರೋಕ್ಷವಾಗಿ ಸರಕಾರಕ್ಕೇ ಆದಾಯ ಬರುತ್ತದೆ. ಜತೆಗೆ ಪ್ರಯಾಣಿಕರಿಗೆ ಇನ್ನೂ ಉತ್ತಮ ಸೇವೆಗಳನ್ನೂ ಒದಗಿಸಬಹುದು. ಮಹಾರಾಷ್ಟ್ರದ ಶಿರಡಿಯಲ್ಲಿ ಅಲ್ಲಿನ ಸರಕಾರವೇ ವೈಮಾನಿಕ ಸೇವೆ ಮತ್ತು ನಿರ್ವಹಣೆಯನ್ನು ಮಾಡುತ್ತಿದೆ ಎಂದು ಹೇಳಿದರು.
ವಲಯಕ್ಕೊಂದು ವಿಜನ್ ಗ್ರೂಪ್
ಕೈಗಾರಿಕಾ ಉತ್ತೇಜನಕ್ಕಾಗಿ ರಾಜ್ಯದಲ್ಲಿ ವಲಯಕ್ಕೊಂದು ವಿಜನ್ ಗ್ರೂಪ್ ರಚಿಸಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು. ಏರೋಸ್ಪೇಸ್ ಮತ್ತು ರಕ್ಷಣೆ, ಮಷೀನ್ ಟೂಲ್ಡ್, ಇಎಸ್‌ಡಿಎಂ, ಫಾರ್ಮಾ, ಕಬ್ಬಿಣ-ಉಕ್ಕು-ಸಿಮೆಂಟ್ ಉತ್ಪಾದನಾ ಕ್ಷೇತ್ರಗಳನ್ನೊಳಗೊಂಡ ಕೋರ್ ಮ್ಯಾನುಫ್ಯಾಕ್ಚರಿಂಗ್, ಸ್ಟಾರ್ಟ್‌ಅಪ್‌ಗಳ (ಐಟಿಯೇತರ) ಮತ್ತು ಆಟೋ/ವಿದ್ಯುತ್‌ಚಾಲಿತ ವಲಯಗಳಲ್ಲಿ ವಿಜನ್ ಗ್ರೂಪ್ ರಚನೆ ಆಗಲಿವೆ. ರಾಜ್ಯದಲ್ಲಿ ಈ ಪ್ರಯೋಗ ಇದೇ ಮೊದಲು. ಇದಕ್ಕೆ ಮುನ್ನ ಒಟ್ಟಾರೆ ಉದ್ಯಮದ ಅಭಿವೃದ್ಧಿಗೆ ವಿಜನ್ ಗ್ರೂಪ್ ಇತ್ತು ಎಂದು ಸ್ಪಷ್ಟಪಡಿಸಿದರು.//////