Belagavi News In Kannada | News Belgaum

ಲಂಡನ್‌ನಲ್ಲಿ ಭಾರತೀಯ ವಿದ್ಯಾರ್ಥಿನಿ ಹತ್ಯೆ

ಲಂಡನ್: ಲಂಡನ್‌ ನಗರದ ವೆಂಬ್ಲೆ ಪ್ರದೇಶದಲ್ಲಿ ಹೈದರಾಬಾದ್‌ ಮೂಲದ 27 ವರ್ಷದ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಹತ್ಯೆಗೈಯ್ಯಲಾಗಿದೆ.

ಮೃತ ಯುವತಿ ತೇಜಸ್ವಿನಿ ರೆಡ್ಡಿ (27) ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್‌ನಲ್ಲಿದ್ದಳು. ಮಂಗಳವಾರ ಮನೆಯೊಂದರಲ್ಲಿ ಆಕೆಯನ್ನು ಬ್ರೆಝಿಲ್‌ ಮೂಲದ ವ್ಯಕ್ತಿಯೊಬ್ಬ ಹತ್ಯೆಗೈದಿದ್ದಾನೆಂದು ತಿಳಿದು ಬಂದಿದೆ.

ದಾಳಿಯಲ್ಲಿ ತೇಜಸ್ವಿನಿ ಸ್ಥಳದಲ್ಲಿಯೇ ಮೃತಪಟ್ಟರೆ ಇರಿತದ ಗಾಯಗಳನ್ನು ಹೊಂದಿದ ಇನ್ನೊಬ್ಬಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆಯ ಜೀವಕ್ಕೇನೂ ಅಪಾಯವಿಲ್ಲವೆಂದು ತಿಳಿದು ಬಂದಿದೆ. ಘಟನೆ ವೆಂಬ್ಲೆಯ ನೀಲ್ಡ್‌ ಕ್ರೆಸೆಂಟ್‌ ಪ್ರದೇಶದಲ್ಲಿ ನಡೆದಿದೆ.

ಕೊಲೆ ಆರೋಪಿಗಳೆಂಬ ಶಂಕೆಯ ಮೇಲೆ 24 ವರ್ಷದ ಯುವಕ ಹಾಗೂ 23 ವರ್ಷದ ಯುವತಿಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರೂ ಯುವತಿಯನ್ನು ನಂತರ ಬಿಡುಗಡೆಗೊಳಿಸಲಾಗಿದೆ. ಯುವಕ ಇನ್ನೂ ಪೊಲೀಸರ ವಶದಲ್ಲಿದ್ದಾನೆ./////