ತಾಳ್ಮೆ, ಸಹನೆ, ಜಾಣ್ಮೆಯಿಂದ ಇಡೀ ರಾಜ್ಯದ ಜನರ ಮನ ಗೆಲ್ಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಶೀರ್ವಾದ ಮಾಡಿದ ಶ್ರೀಗಳು

ಬೆಳಗಾವಿ : ನೂತನ ಸರಕಾರದಲ್ಲಿ ಇಡೀ ಕರ್ನಾಟಕದ ಮಹಿಳೆಯರ ಪರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಯ್ಕೆಯಾಗಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೆಂಗಳೂರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಮಾಡಿದ ಬಳಿಕ ಮಾತನಾಡಿದರು.
ಹುಟ್ಟು ಹೋರಾಟಗಾರ್ತಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಾಳ್ಮೆ, ಜಾಣ್ಮೆ, ಸಹನೆಯಿಂದ ತಮಗೆ ನೀಡಿರುವ ಸ್ಥಾನದಲ್ಲಿ ಅಪರೂಪವಾದ ಕಾರ್ಯವನ್ನು ಮಾಡಿ ಕರ್ನಾಟಕದ ಜನರ ಮನಸ್ಸನ್ನು ಗೆಲ್ಲಲ್ಲಿ ಎಂದು ಶ್ರೀಗಳು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಶಾಲು ಹೊದಿಸಿ, ಗ್ರಂಥ ನೀಡಿ ಆಶೀರ್ವದಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಹುಕ್ಕೇರಿ ಹಿರೇಮ ಠದ ಆಶೀರ್ವಾದ ನಮಗೆ ಮತ್ತು ನಮ್ಮ ಮನೆತನಕ್ಕೆ ಮೊದಲಿನಿಂದಲೂ ಇದೆ. ಗುರುಗಳು ಹೇಳಿದ ಹಾಗೆ ಹೆಚ್ಚು ಅಧ್ಯಯನ ಮಾಡಿ ನಮಗೆ ಕೊಟ್ಟಿರುವ ಇಲಾಖೆಯ ಎಲ್ಲ ಸೌವಲತ್ತುಗಳನ್ನು ಮಹಿಳೆ ಯರಿಗೆ ತಲುಪುವಂತೆ ಮಾಡಿ ಬೆಳಗಾವಿ ಜಿಲ್ಲೆಯ ಹೆಸರನ್ನು ತರುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಹುಕ್ಕೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಇನ್ನೂ ಉನ್ನತ ಕಾರ್ಯವನ್ನು ಮಾಡಿ ಜನಮನವನ್ನು ಗೆಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ವೀರುಪಾಕ್ಷಯ್ಯ ನೀರಲಗಿಮಠ, ಎಂ.ಕೆ.ಹುಬ್ಬಳ್ಳಿಯ ಕಲ್ಲಪ್ಪ ಬೋರಣ್ಣವರ, ಮಂಜುನಾಥ ಅಳವಣಿ ಉಪಸ್ಥಿತರಿದ್ದರು.