Belagavi News In Kannada | News Belgaum

ಜನಪರ, ಪಾರದರ್ಶಕ ಆಡಳಿತಕ್ಕೆ ಆದ್ಯತೆ • ಮಸರಗುಪ್ಪಿಯಲ್ಲಿ ಸಚಿವ ಸತೀಶ ಜಾರಕಿಹೊಳಿಗೆ ನಾಗರಿಕ ಸನ್ಮಾನ

 

ಹುಕ್ಕೇರಿ : ಕಾಂಗ್ರೆಸ್ ಸರ್ಕಾರ ಯಾವತ್ತೂ ಜನರಿಗೆ ನೀಡಿದ ಭರವಸೆ ಹುಸಿಗೊಳಿಸಿಲ್ಲ. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಮಸರಗುಪ್ಪಿ ಗ್ರಾಮಕ್ಕೆ ಸಚಿವರಾಗಿ ಪ್ರಪ್ರಥಮ ಬಾರಿಗೆ ಆಗಮಿಸಿದ ವೇಳೆ ನಾಗರಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜನರು ನಮ್ಮ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ಳುವುದೇ ನಮ್ಮ ಗುರಿಯಾಗಿದ್ದು ಅದರಂತೆ ಚುನಾವಣೆಯಲ್ಲಿ ನೀಡಿರುವ ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದೇವೆ ಎಂದರು.
ಹೊಸ ಸರ್ಕಾರ ಬಡವರ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಜನಪರ ಹಾಗೂ ಪಾರದರ್ಶಕ ಆಡಳಿತ ನೀಡುವುದರ ಮೂಲಕ ಜಿಲ್ಲೆಯನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಅದಕ್ಕೆ ಬೇಕಾದ ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಬರುವ ತಾಪಂ, ಜಿಪಂ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಮತ್ತಷ್ಟು ಗಟ್ಟಿಯಾಗಿ ಸಂಘಟಿಸಬೇಕು. ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವಲ್ಲಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹೋರಾಟ ನಡೆಸಬೇಕು. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಪ್ರತಿ ಮನೆ ಮನೆಗೂ ಮುಟ್ಟಿಸುವ ಕೆಲಸವಾಗಬೇಕು. ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಜನಪರ ಯೋಜನೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ಅವರು ಹೇಳಿದರು.
ಮುಖಂಡ ಇಲಿಯಾಸ್ ಇನಾಮದಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಶಶಿಕಾಂತ ನಾಯಿಕ, ಜಿಪಂ ಮಾಜಿ ಸದಸ್ಯರಾದ ಸುರೇಶ ಹುಣಚ್ಯಾಳಿ, ಮಹಾಂತೇಶ ಮಗದುಮ್ಮ ಮಾತನಾಡಿದರು.
ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಮಾಜಿ ಸದಸ್ಯ ಬಸವರಾಜ ಕೋಳಿ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಮುಖಂಡರಾದ ದಿಲೀಪ ಹೊಸಮನಿ, ರುದ್ರಗೌಡ ಪಾಟೀಲ, ನಿತೀನ್ ಜಾಧವ, ಆನಂದ ತವಗಮಠ, ಪ್ರಕಾಶ ಪಾಟೀಲ, ಶ್ರೀನಿವಾಸ ವ್ಯಾಪಾರಿ, ಪ್ರಕಾಶ ಮೈಲಾಖೆ, ಕೆ.ವೆಂಕಟೇಶ, ಆಕಾಶ ಕೇರಿಮನಿ, ಸಾಗರ ಪಾಟೀಲ, ವೀರುಪಾಕ್ಷಿ ಮರೆನ್ನವರ, ಪರಶುರಾಮ ಢಾಳಿ, ಪ್ರದೀಪ ಕಾಮಾನಿ, ಶಿವಶಂಕರ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.