Belagavi News In Kannada | News Belgaum

ವಿದ್ಯುತ್ ದರ ಕಡಿಮೆ ಮಾಡುವಂತೆ ಮಹಿಳೆಯರು ಒತ್ತಾಯ..

ಬೆಳಗಾವಿ: ; ವಿದ್ಯುತ್​ ಬಿಲ್​ ಕಡಿಮೆ ಮಾಡುವಂತೆ ಒತ್ತಾಯಿಸಿ ಬೆಳಗಾವಿಯ ಚವ್ಹಾಟ ಗಲ್ಲಿಯ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಈಗಾಗಲೇ ಹೆಚ್ಚಿಸಿರುವ ಕರೆಂಟ್​ ದರ ಇಳಿಸುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು..

 

ಕೈಯಲ್ಲಿ ಕರೆಂಟ್ ಬಿಲ್ ಹಿಡಿದು ಪ್ರತಿಭಟನೆ ನಡೆಸಿದ ಮಹಿಳೆಯರು ಸರ್ಕಾರದ ವಿರುದ್ಧ ಹರಿಹಾಯ್ದರು. ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರತಿಭಟನಾನಿರತ ಮಹಿಳೆ ಶಿಲ್ಪಾ ಬಾಳಾಠಕ್ಕೆ, ಕಳೆದ ಬಾರಿಗಿಂತ ಈ ಸಲ ಕರೆಂಟ್​ ಬಿಲ್​ ಬಹಳ ಹೆಚ್ಚು ಬಂದಿದೆ. ಪ್ರತಿಸಲ 500 ರಿಂದ 1000 ರೂ. ಕರೆಂಟ್ ಬಿಲ್ ಬರುತ್ತಿತ್ತು..

ಆದರೆ ಇದೀಗ ಎಲ್ಲರಿಗೂ 2 ರಿಂದ 3 ಸಾವಿರ ರೂ. ಬಿಲ್ ಬಂದಿದ್ದು, ದುಡ್ಡು ಇರುವ ಶ್ರೀಮಂತರು ಬಿಲ್​ ಕಟ್ಟುತ್ತಾರೆ. ನಾವು ಬಡವರು ಯಾವ ರೀತಿ ಕಟ್ಟುವುದು?. ಶಾಲೆ ಫೀಸ್, ಮನೆ ಬಾಡಿಗೆ ಹೀಗೆ ಎಲ್ಲ ಒಮ್ಮೆಲೇ ಬಂದರೆ ಹೇಗೆ ಬಿಲ್​​ ಕಟ್ಟಲು ಸಾಧ್ಯ?. ಹೀಗಾಗಿ ಈ ಸಲ ನಾವು ಯಾರೂ ಕರೆಂಟ್​ ಬಿಲ್​ ಕಟ್ಟುವುದಿಲ್ಲ” ಎಂದು ಆಕ್ರೋಶ ಹೊರಹಾಕಿದರು..

 

ನಮ್ಮ ಪತಿ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದು, ಮನೆಯಲ್ಲಿ ಮೂರು ಮಕ್ಕಳಿದ್ದಾರೆ. ಒಬ್ಬೊಬ್ಬರದ್ದು ಕಾಲೇಜು ಫೀಸ್ ಅಂತಾ 30 ರಿಂದ 40 ಸಾವಿರ ರೂ. ಬರುತ್ತದೆ. ಇದರ ಮಧ್ಯೆ ಕರೆಂಟ್ ಬಿಲ್ ಹೆಚ್ಚಾಗಿದೆ. ಬಂದ ಹಣವನ್ನೆಲ್ಲ ಕರೆಂಟ್​ ಬಿಲ್​ಗೆ ಕೊಟ್ಟು ಹೊಟ್ಟೆಗೇನು ತಿನ್ನುವುದು?. ಬಿಲ್ ಕಡಿಮೆ ಮಾಡಬೇಕು. ಇಲ್ಲವೇ ನಾವು ಬಿಲ್​ ಕಟ್ಟುವುದಿಲ್ಲ ಎಂದು ಮನವಿ ಮಾಡಲು ಜಿಲ್ಲಾಧಿಕಾರಿ ಕಛೇರಿಗೆ ಬಂದಿದ್ದೇವೆ” ಎಂದು ಶಿಲ್ಪಾ ಹೇಳಿದರು..

ಕಾಂಗ್ರೆಸ್​ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಉಚಿತ ವಿದ್ಯುತ್ ಗ್ಯಾರಂಟಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಚಿತ ವಿದ್ಯುತ್ ಗ್ಯಾರಂಟಿ ಬಗ್ಗೆ ನಮಗೆ ಏನೂ ಗೊತ್ತಾಗುತ್ತಿಲ್ಲ..

ಈ ರೀತಿ ಕರೆಂಟ್​ ಬಿಲ್​ ಅನ್ನು 3-4 ಸಾವಿರ ರೂ ಹೆಚ್ಚಿಸಿ, ಆಮೇಲೆ ಉಚಿತ ಎಂದರೆ ಹೇಗೆ? ದುಡಿದಿದ್ದೆಲ್ಲ ಕರೆಂಟ್ ಬಿಲ್‌ಗೆ ಹಾಕಿದರೆ ಜೀವನ ಹೇಗೆ ಮಾಡುವುದು? ಮನೆ ಬಾಡಿಗೆ ಹೇಗೆ ತುಂಬುವುದೋ? ಕರೆಂಟ್ ಬಿಲ್ ಹೇಗೆ ತುಂಬುವುದೋ? ಒಂದು ತಿಳಿಯುತ್ತಿಲ್ಲ. ಕರೆಂಟ್ ಇಲ್ಲದಿದ್ದರೆ ಮಕ್ಕಳಿಗೆ ಓದಲು ತೊಂದರೆ ಆಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು..

 

ಪ್ರತಿಬಟನೆಯಲ್ಲಿ ಅನೇಕ ಸಂಖ್ಯೆಯಲ್ಲಿ ಚವ್ಹಾಟ ಗಲ್ಲಿಯ ಮಹಿಳೆಯರು ಭಾಗವಹಿಸಿದ್ದರು.