Belagavi News In Kannada | News Belgaum

ಮಹಿಳೆಯರಿಗೆ ಉಚಿತ ಪ್ರಯಾಣ: ತುಂಬಿ ತುಳುಕಿದ ಬಸ್‌ ಗಳು..

ಬೆಂಗಳೂರು : ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಆಷಾಡ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಜ್ಯದ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು ಮಹಿಳಾಮಣಿಯರಿಂದ ತುಂಬಿ ತುಳುಕುತ್ತಿದ್ದು, ಇಂದು ಸಾರಿಗೆ ಬಸ್‍ನಲ್ಲಿ ಕಾಲಿಡದಂತಹ ದಟ್ಟಣೆ ಕಂಡುಬಂದಿದೆ..

 

ಶಕ್ತಿ ಯೋಜನೆ ಜಾರಿಗೊಂಡ ನಂತರ ಮೊದಲ ಭಾನುವಾರವಾದ ಇಂದು ಮಹಿಳೆಯರು ದೇವಾಲಯಗಳಿಗೆ ಲಗ್ಗೆ ಇಡುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಸಿಗಂಧೂರು, ಶೃಂಗೇರಿ, ನಂದಿಬೆಟ್ಟ ಸೇರಿದಂತೆ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿತಾಣಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಜೊತೆಗೆ ಭಾನುವಾರ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮಕ್ಕಳನ್ನು ಸಹ ಕರೆದೊಯ್ಯುತ್ತಿದ್ದಾರೆ..

 

ಸಾರಿಗೆ ಸಂಸ್ಥೆಯ 3 ನಿಗಮಗಳಿಂದ ಎಲ್ಲಾ ಘಟಕಗಳಿಂದಲೂ ಧಾರ್ಮಿಕ ಸ್ಥಳಗಳಿಗೆ ಬಸ್‍ಗಳ ಲಭ್ಯವಿದ್ದು ಎಲ್ಲಾ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು.ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸಟಲೈಟ್ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿ ಮಹಿಳಾ ಪ್ರಯಾಣಿಕರು ಕಂಡುಬಂದಿದ್ದು, ಮೈಸೂರು ಹಾಗು ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೆರಳಿದ್ದಾರೆ..

 

ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ರಾಮನಗರ, ತುಮಕೂರು, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆ, ತಾಲೂಕುಗಳ ಮೂಲಕ ಧಾರ್ಮಿಕ ಹಾಗು ಪ್ರವಾಸಿ ಕೇಂದ್ರಗಳಿಗೆ ಪ್ರಯಾಣಿಸುವ ಬಸ್‍ಗಳಿಗಾಗಿ ಮಹಿಳೆಯರು ಚಾತಕ ಪಕ್ಷಿಯಂತೆ ಕಾಯುತ್ತಾ ಬಸ್ ಬರುತ್ತಿದ್ದಂತೆ ಜೇನು ನೊಣದಂತೆ ನಾ ಮುಂದು, ತಾ ಮುಂದು ಎಂದು ಬಸ್‍ಗಳನ್ನು ಹತ್ತಿ ಸೀಟುಗಳನ್ನು ಹಿಡಿಯುತ್ತಿದ್ದ ದೃಶ್ಯಗಳು ಕಂಡುಬಂದವು..