ಬಾಲಕರ ವಸತಿ ನಿಲಯದಲ್ಲಿ ಹಲ್ಲಿ ಬಿದ್ದ ಸಾರು ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಾರೂಗೊಪ್ಪ ಗ್ರಾಮದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಲ್ಲಿ ಬಿದ್ದ ಸಾರು ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ವಿದ್ಯಾರ್ಥಿಗಳು ಸೋಮವಾರ (ದಿ.19) ಬೆಳಗ್ಗೆ ವಿದ್ಯಾರ್ಥಿಗಳು ಉಪಹಾರ ಸೇವಿಸಿದ್ದು, ಈ ವೇಳೆ ಚಪಾತಿ, ಅನ್ನ ಸಾರು ನೀಡಲಾಗಿತ್ತು. ಆದರೆ ಸಾರಿನಲ್ಲಿ ಹಲ್ಲಿ ಬಿದ್ದಿದೆ. ಅದೇ ಸಾರನ್ನು ವಿದ್ಯಾರ್ಥಿಗಳು ಸೇವಿಸಿದ್ದ ಹಿನ್ನಲೆಯಲ್ಲಿ ಕೆಲ ಸಮಯದ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡ ತಕ್ಷಣವೇ ವಸತಿ ನಿಲಯದ ಸಿಬ್ಬಂದಿ ಸಮೀಪದ ಇಂಚಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ದಾಖಲಾದ ಮಕ್ಕಳಲ್ಲಿ ಕೆಲವು ಮಕ್ಕಳು ಚೇತರಿಸಿಕೊಂಡಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಸವದತ್ತಿ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾಖಲಾದ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು, ಯಾರಿಗೂ ಅಪಾಯವಿಲ್ಲ ಎಂದು ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ.