ಚರಂಡಿ ನಿರ್ಮಿಸಿದವರಿಗೆ ನಿತ್ಯ ಹಿಡಿಶಾಪ ಹಾಕುತ್ತಿರುವ ಜನ ಅವೈಜ್ಞಾನಿಕ ಚರಂಡಿ ನಿರ್ಮಾಣ :ಆಕ್ರೋಶ

ಮುಧೋಳ: ಇಲ್ಲಿನ ಜಯನಗರದ ರಸ್ತೆ ಪಕ್ಕ ಅವೈಜ್ಞಾನಿಕ ಚರಂಡಿಗಳನ್ನು ನಿರ್ಮಿಸಲಾಗಿದ್ದು, ನೀರು ಉಲ್ಟಾ ಹರಿಯುತ್ತದೆ ಮತ್ತು ನಿಂತಲ್ಲೇ ನಿಂತು ದುರ್ವಾಸನೆ ಬರುತ್ತಿದೆ, ಚರಂಡಿಗಳ ಮೇಲೆ ಹೊದಿಕೆಯೂ ಇಲ್ಲದೆ ಚರಂಡಿ ದಾಟಿ ಮನೆಗಳ ಪಾವಟಿಗೆ ಹತ್ತುವುದು ವೃದ್ಧರಿಗೆ, ಅಂಗವಿಕಲರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಜಯನಗರ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲಮ್ಮ ಕಲ್ಯಾಣಮಂಟಪದಿಂದ ಜಯನಗರಕ್ಕೆ ಹೋಗುವ ಮಾರ್ಗದಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದೆ . ಆದರೆ ಚರಂಡಿ ನೀರು ಮಾತ್ರ ಉಲ್ಟಾ ಹರಿದು ಮುಂದೆ ಸಾಗದೆ ಒಂದೇ ಕಡೆ ನಿಂತು ಕೊಳಚೆಯಾಗಿ ಪರಿವರ್ತನೆಗೊಂಡಿದೆ. ಅದರಿಂದ ಸೊಳ್ಳೆ ಕಾಟ ಹಾಗೂ ದುರ್ವಾಸನೆ ಹೆಚ್ಚಾಗಿದೆ. ಮತ್ತು ಚರಂಡಿಗಳ ಮೇಲೆ ಹೊದಿಕೆ ಇಲ್ಲದೆ ಮನೆಗಳಿಗೆ ಹಾದಾಡುವದು ತುಂಬಾ ಕಷ್ಟವಾಗಿದೆ. ವೃದ್ಧರು ಅಂಗವಿಕಲರು ಬೇರೆಯವರ ಸಹಾಯವಿಲ್ಲದೆ ಚರಂಡಿ ದಾಟುವುದು ಸಾಧ್ಯವಿಲ್ಲದಂತಾಗಿದೆ. ಇನ್ನು ಮಳೆಗಾಲದಲ್ಲಂತು ಮಳೆ ನೀರು ಚರಂಡಿ ತುಂಬಿಕೊಂಡು ರಸ್ತೆಗಳ ಮೇಲೆ ನಿಲ್ಲುತ್ತದೆ. ಇದು ಇಲ್ಲಿನ ನಿವಾಸಿಗಳಿಗೆ ನಿತ್ಯದ ಗೋಳಾಗಿದೆ, ಸಂಬಂಧಪಟ್ಟವರು ತಕ್ಷಣ ಕ್ರಮ ತೆಗೆದುಕೊಳ್ಳಬೇಕು, ಚರಂಡಿಗಳನ್ನು ಮರು ದುರಸ್ತಿಗೊಳಿಸಬೇಕು, ಎಂದು ನಿವೃತ್ತ ಶಿಕ್ಷಕ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್.ಎನ್.ಒಂಟಗೋಡಿ,ಈಶ್ವರ ಮುರಗೋಡ,ಶಂಕರ್ ಯಡಹಳ್ಳಿ, ಅಶೋಕ ಯಡಹಳ್ಳಿ, ಬಿ.ಎಂ.ಜಲಗೇರಿ, ಗಣಿ, ಮಲ್ಲಪ್ಪ ಯಲಗೂರ, ಶಾಮ ಕಾಂತಿಕನವರ ಹಾಗೂ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.