ಗ್ರಾಪಂಗಳಿಂದ ಪಂಚಾಯತ್‍ರಾಜ್ ವ್ಯವಸ್ಥೆಗೆ ಸುಭದ್ರ ತಳಪಾಯ
ಶಿರಢಾಣ ಗ್ರಾಪಂ ನೂತನ ಕಟ್ಟಡ ಉದ್ಘಾಟನೆಯಲ್ಲಿ ಪವನ ಕತ್ತಿ ಅಭಿಮತ

ಹುಕ್ಕೇರಿ : ಮೂರು ಹಂತದ ಪಂಚಾಯತ್ ರಾಜ್ಯ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದು ಜಿಪಂ ಮಾಜಿ ಸದಸ್ಯ ಪವನ ಕತ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಶಿರಢಾಣ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿದ ಗ್ರಾಮ ಪಂಚಾಯತಿ ಕಾರ್ಯಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಯಶಸ್ವಿ ಮತ್ತು ದೇಶದ ಒಕ್ಕೂಟ ವ್ಯವಸ್ಥೆಗೆ ಬಲ ತುಂಬುವಲ್ಲಿ ಗ್ರಾಪಂಗಳು ಮಹತ್ತರ ಕೊಡುಗೆ ನೀಡುತ್ತಿವೆ ಎಂದರು.
ಪಂಚಾಯತ್‍ರಾಜ್ ವ್ಯವಸ್ಥೆ ಗಟ್ಟಿಯಾಗಿ ನಿಲ್ಲುವಲ್ಲಿ ಗ್ರಾಪಂಗಳು ಅತ್ಯಮೂಲ ಕೊಡುಗೆ ನೀಡುವ ಮೂಲಕ ಸುಭದ್ರ ತಳಪಾಯ ಒದಗಿಸಿವೆ. ಗ್ರಾಪಂಗಳ ಬಲವರ್ಧನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿವೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ. ಜನಸೇವೆಗೆ ದೊರೆತ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಉದ್ಯೋಗ ಖಾತರಿ, 15 ನೇ ಹಣಕಾಸು ಯೋಜನೆ ಹಾಗೂ ನೇರ ಅನುದಾನ ಸೇರಿ ಒಟ್ಟು 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಈ ಹೈಟೆಕ್ ಗ್ರಾಪಂ ಕಾರ್ಯಾಲಯ ಕಟ್ಟಡ ರಾಜ್ಯದಲ್ಲಿಯೇ ಮಾದರಿಯಾಗಿ ಹೊರಹೊಮ್ಮಿದೆ. ವಿಧಾನಸೌಧ ತದ್ರೂಪಿಯಂತೆ ತಲೆ ಎತ್ತಿ ನಿಂತಿರುವ ಈ ಸುಸಜ್ಜಿತ ಕಟ್ಟಡ ತಾಲೂಕಿಗೆ ಹೆಮ್ಮೆ ಎನಿಸಿದೆ. ಜನರ ಸಮಸ್ಯೆ ಮತ್ತು ಅಹವಾಲುಗಳಿಗೆ ತ್ವರಿತ ಪರಿಹಾರ ಕಲ್ಪಿಸುವಂತಾಗಬೇಕು ಎಂದು ಅವರು ಹೇಳಿದರು.
ಪಿಡಿಒ ವಿ.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಗುಡಸ ಪಂಚಾಯತಿಯಿಂದ ಬೇರ್ಪಟ್ಟು ಹೊಸದಾಗಿ ರಚನೆಯಾದ ಶಿರಢಾಣ ಗ್ರಾಪಂ ಬಾಡಿಗೆ ಕಟ್ಟಡದಲ್ಲಿತ್ತು. ನೂತನ ಕಟ್ಟಡ ನಿರ್ಮಾಣದಲ್ಲಿ ಸಚಿವ ದಿ.ಉಮೇಶ ಕತ್ತಿ ಅವರ ಪಾತ್ರ ಪ್ರಮುಖವಾಗಿದೆ. ಕಟ್ಟಡಕ್ಕೆ ಬೇಕಾದ ಅಗತ್ಯ ನಿವೇಶನ, ಅನುದಾನ ಮಂಜೂರು ಮಾಡಿಸಿಕೊಟ್ಟಿದ್ದ ಉಮೇಶ ಕತ್ತಿ, ರಾಜ್ಯದಲ್ಲಿಯೇ ಮಾದರಿ ಮತ್ತು ವಿನೂತನ ಕಟ್ಟಡವನ್ನಾಗಿ ರೂಪಿಸುವಲ್ಲಿ ಕೊಟ್ಟಿರುವ ಕೊಡುಗೆಯನ್ನು ಸ್ಮರಿಸಿದರು.
ಗ್ರಾಪಂ ಅಧ್ಯಕ್ಷತೆ ಗೀತಾ ತಳವಾರ ಅಧ್ಯಕ್ಷತೆ ವಹಿಸಿದ್ದರು. ಗಿರೀಶ ಆಶ್ರಮದ ಕಲ್ಯಾಣೇಶ್ವರ ಸ್ವಾಮೀಜಿ, ಘಟಪ್ರಭಾ ಗುಬ್ಬಲಗುಡ್ಡ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಹಾವೇರಿ ಅಂಬಿಗರ ಚೌಡಯ್ಯ ಗುರು ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ, ಶಿರಹಟ್ಟಿ ಬಾಳೇಹೊಸೂರ ಫಕೀತ ದಿಂಗಾಲೇಶ್ವರ ಸ್ವಾಮೀಜಿ, ಝಂಗಟಿಹಾಳ ಯಲ್ಲಾಲಿಂಗ ಮಠದ ಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ತಾಪಂ ಇಒ ಉಮೇಶ ಸಿದ್ನಾಳ, ಪಿಆರ್‍ಇಡಿ ಎಇಇ ಎಸ್.ಕೆ.ಪಾಟೀಲ, ನಿವೃತ್ತ ಅಧಿಕಾರಿ ಎ.ಬಿ.ಪಟ್ಟಣಶೆಟ್ಟಿ, ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ, ಉಪಾಧ್ಯಕ್ಷೆ ಭಾರತಿ ನಾಯಿಕ, ಸದಸ್ಯರಾದ ಬಸವರಾಜ ಮಲ್ಲಾಪುರೆ, ಕೆಂಪಣ್ಣಾ ಮಾದರ, ಸಂದೀಪಗೌಡ ಪಾಟೀಲ, ಲಗಮವ್ವಾ ಮಗದುಮ್ಮ, ಸುಧಾ ಕನಮಿನಟ್ಟಿ, ಮುಖಂಡರಾದ ಭೀಮಗೌಡ ಪಾಟೀಲ, ಡಿ.ಎಂ.ದಳವಾಯಿ, ಸದಾನಂದ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಶ್ರೀಶೈಲ ಹಿರೇಮಠ ನಿರೂಪಿಸಿದರು. ಸದಸ್ಯ ಸರನಾಯಿಕ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಬಿ.ಅಡಿಮನಿ ವಂದಿಸಿದರು.